ಸಿದ್ಧಕಟ್ಟೆ : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಏರ್ಪಡಿಸಿದ ‘ಕನಕದಾಸರ ಕಾವ್ಯಗಳು : ಸ್ವರೂಪ ಮತ್ತು ಆಶಯ’ ಎಂಬ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವು ದಿನಾಂಕ 28-03-2024ರಂದು ನಡೆಯಿತು.
ಈ ವಿಚಾರ ಸಂಕಿರಣದಲ್ಲಿ ಸಂಸ್ಕೃತಿ ಚಿಂತಕ ಮುನಿರಾಜ ರೆಂಜಾಳ ಇವರು ‘ಹರಿಭಕ್ತಿಸಾರ’ ಕೃತಿಯ ಕುರಿತು ಉಪನ್ಯಾಸ ನೀಡುತ್ತಾ “ಬದುಕಿನಲ್ಲಿ ಮೌಲ್ಯ, ಋಣಪ್ರಜ್ಞೆ, ದೇವರ ಭಯ ಇರಬೇಕು. ತನ್ನ ಧರ್ಮವನ್ನು ಅರಿತು ಆಚರಿಸುವಂತೆ ಇತರೆ ಧರ್ಮಗಳನ್ನೂ ಗೌರವಿಸಬೇಕು. ದೇವರ ವಿಷಯದಲ್ಲಿ ನಾವು ಚಿಕ್ಕವರಾಗುವುದು ಬೇಡ ಎಂಬುದು ಕನಕದಾಸರನ್ನೂ ಒಳಗೊಂಡಂತೆ ಎಲ್ಲ ಸಂತರ ಸಂದೇಶ. ಕನಕದಾಸರು ಮನುಷ್ಯನ ಅಸಹಾಯಕತೆಯನ್ನು ಅರ್ಥಮಾಡಿಕೊಂಡು ಭಕ್ತಿಯ ದಾರಿಯಲ್ಲಿ ಸಾಂತ್ವನ ಹೇಳಲು ಹರಿಭಕ್ತಿಸಾರ ಮತ್ತು ಕೆಲವು ಕೀರ್ತನೆಗಳನ್ನು ರಚಿಸಿದರು” ಎಂದು ಹೇಳಿದರು.
‘ರಾಮಧಾನ್ಯ ಚರಿತೆ’ ಕಾವ್ಯದ ಕುರಿತು ಮಾತನಾಡಿದ ವಾಮದಪದವು ಸ.ಪ್ರ. ಕಾಲೇಜಿನ ಪ್ರಾಧ್ಯಾಪಕಿ ಡಾ. ರೇಷ್ಮಾ ಭಟ್ ಮಾತನಾಡಿ “ಹಿಂದಿನ ಕಾವ್ಯಗಳ ಓದಿನಿಂದ ನಿಜ ಭಾರತದ ಅರಿವು ಸಾಧ್ಯವಾಗುತ್ತದೆ. ಮನುಷ್ಯನ ನಡುವಿನ ತರತಮ ಭಾವವನ್ನು ಎಲ್ಲ ಸಂತರೂ ವಿರೋಧಿಸಿದ್ದರು” ಎಂದರು. ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ‘ನಳಚರಿತೆ ಕಾವ್ಯಾವಲೋಕನ’ ಮಾಡಿ “ಕನಕದಾಸರು ಕವಿ ಮಾತ್ರವಲ್ಲ ಚಿಂತಕರು ಕೂಡ. ಅವರ ಕಾವ್ಯಗಳು ಮಾನಸಿಕವಾಗಿ ಕುಗ್ಗಿ ಹೋಗುವವರಿಗೆ ಆತ್ಮಸ್ಥೈರ್ಯ ತುಂಬುವ ಕಥನವಾಗಿದೆ” ಎಂದರು.
ವಿಚಾರಸಂಕಿರಣವನ್ನು ಉದ್ಘಾಟಿಸಿದ ಕುವೆಂಪು ಭಾಷಾ ಭಾರತಿಯ ನಿಕಟಪೂರ್ವ ಅಧ್ಯಕ್ಷ ಡಾ. ಗಿರೀಶ್ ಅಜಕ್ಕಳ “ದಾಸ ಪರಂಪರೆ ಕನ್ನಡದಲ್ಲಿ ಗಾಯನ, ದೀಕ್ಷೆಗಳ ಮೂಲಕ ಇನ್ನೂ ಜೀವಂತವಾಗಿದೆ” ಎಂದರು. ಆಶಯ ಭಾಷಣ ಮಾಡಿದ ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ “ಕನಕದಾಸರಿಗೆ ಭಕ್ತಿ ಎಂಬುದು ಅಂತರಂಗ ಮತ್ತು ಬಹಿರಂಗದ ತಲ್ಲಣಗಳಿಗೆ ಸಾಂತ್ವಾನವಾಗಿತ್ತು. ಸಾಮಾಜಿಕ ತಾರತಮ್ಯವನ್ನು ಆತ್ಮತತ್ವವನ್ನು ಪ್ರತಿಪಾದಿಸಿ ಅದರ ಮೂಲಕ ವಿರೋಧಿಸಿದ್ದರು” ಎಂದರು.
ಪ್ರಸಿದ್ಧ ಗಮಕಿ ಮಂಜುಳಾ ಸುಬ್ರಹ್ಮಣ್ಯ ಮಂಚಿ ಹಾಗೂ ಪ್ರಜ್ವಲ್ ಕಿನ್ನಿಗೋಳಿ ಕನಕದಾಸರ ಕಾವ್ಯದ ಆಯ್ದ ಭಾಗಗಳನ್ನು ಪ್ರಸ್ತುತಪಡಿಸಿದರು. ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಬಿ.ಕೆ. ಹರಿಪ್ರಸಾದ್ ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕ ವಿನಯ್ ಎಂ.ಎಸ್ ಉಪಸ್ಥಿತರಿದ್ದರು. ಉಪನ್ಯಾಸಕಿ ಸುಮನ್ ಶೆಟ್ಟಿ ವಂದಿಸಿ, ಕನ್ನಡ ಉಪನ್ಯಾಸಕಿ ಸಂಧ್ಯಾ ಶೆಟ್ಟಿ ನಿರೂಪಿಸಿದರು.