ಪೆರ್ಡೂರು : ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ವತಿಯಿಂದ ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ‘ಹಿರಿಯೆರೊಟ್ಟಿಗೊಂಜಿ ದಿನ’ ಕಾರ್ಯಕ್ರಮವು ದಿನಾಂಕ 28 ಡಿಸೆಂಬರ್ 2025ರಂದು ಸಂಭ್ರಮದಿಂದ ಜರಗಿತು.

ಈ ವಿಶೇಷ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ 60ರಿಂದ 96 ವರ್ಷಗಳ ವರೆಗಿನ ನೂರಾರು ಹಿರಿಯ ನಾಗರಿಕರು ಪಾಲ್ಗೊಂಡು ಆಡಿ, ಹಾಡಿ, ನರ್ತಿಸಿ ಸಂಭ್ರಮಿಸಿದ್ದು ಕಾರ್ಯಕ್ರಮ ಅವರಲ್ಲಿ ಹೊಸ ಹುರುಪನ್ನು ನೀಡಿತು. ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭ ಪ್ರತೀಕ್ಷಾ ಕೋಟ್ಯಾನ್ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮದ ಮುಖಂಡರೂ, ಸಮಿತಿಯ ಗೌರವಾಧ್ಯಕ್ಷರೂ ಆದ ಶಾಂತಾರಾಮ ಸೂಡ “ಇಂದು ಹಲವಾರು ಮುಂದುವರಿದ ಕುಟುಂಬಗಳಲ್ಲಿ ವೃದ್ಧಾಪ್ಯ ಎನ್ನುವುದು ಶಾಪವಾಗಿ ಪರಿಣಮಿಸಿದೆ. ಒಂದು ರೀತಿಯಲ್ಲಿ ನೀರಸ ಜೀವನವಾಗಿ ಹೆಚ್ಚಿನವರು ಮನರಂಜನೆಯಿಂದ ವಂಚಿತರಾಗಿದ್ದಾರೆ. ಅಂತಹ ಹಿರಿಯರಿಗೆ ಜೀವನೋತ್ಸಾಹ ತುಂಬಲು ಇಂತಹ ಕಾರ್ಯಕ್ರಮಗಳು ಅತೀ ಅಗತ್ಯವಾಗಿವೆ. ಈ ಸಮಿತಿ ಸಮಾಜದ ಕೊರತೆಗಳನ್ನು ಗಮನದಲ್ಲಿರಿಸಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಹೊಸತನವನ್ನು ನೀಡುತ್ತಿರುವುದು ಸಂತಸದ ಸಂಗತಿ” ಎಂದರು.





ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಸಮಿತಿಯ ಅಧ್ಯಕ್ಷರಾದ ಸತೀಶ್ ಕೋಟ್ಯಾನ್ ಮಾತನಾಡಿ, “ದೇವರ ನಂತರದ ಸ್ಥಾನ ಹೆತ್ತವರದು. ಅವರಿಗೂ ವೃದ್ಧಾಪ್ಯದಲ್ಲಿ ಮಕ್ಕಳಂತೆಯೇ ಪ್ರೀತಿ, ಕಾಳಜಿ ತೋರಿಸಬೇಕು. ತಮ್ಮ ಯೌವನದಿಂದ ವೃದ್ಧಾಪ್ಯಾದವರೆಗೂ ಜೀವನವಿಡೀ ಕುಟುಂಬದ ಸುಖ ಸಂತೋಷಕ್ಕಾಗಿ ನಿಸ್ವಾರ್ಥದಿಂದ ದುಡಿದು ಬಾಳಿನ ಮುಸ್ಸಂಜೆಯಲ್ಲಿ ನಿಸ್ತೇಜರಾಗಿ ಬದುಕುವಂತಹ ಪರಿಸ್ಥಿತಿ ಇಂದಿನ ಹೆಚ್ಚಿನ ಮನೆಗಳ ಹಿರಿಯರದ್ದಾಗಿದೆ. ಕುಟುಂಬದಲ್ಲಿ, ಸಮಾಜದಲ್ಲಿ ಹಿರಿಯರು ತಮ್ಮ ಇಷ್ಟದಂತೆ ಬದುಕುವ ಸ್ವಾತಂತ್ರ್ಯ ಕಳೆದುಕೊಂಡಿದ್ದಾರೆ. ಇವುಗಳನ್ನು ಗಮನಿಸಿ ಹಿರಿಯರೂ ಕಿರಿಯರಂತೆಯೇ ಸಂತಸ, ಸಂಭ್ರಮದಿಂದ ಕಾಲಕಳೆಯಬೇಕು ಎನ್ನುವ ದೃಷ್ಟಿಯನ್ನಿರಿಸಿಕೊಂಡು ಹಿರಿಯರಿಗಾಗಿಯೇ ಇಡೀ ದಿನದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇಂದು ಇಲ್ಲಿ ನೂರಾರು ಹಿರಿಯರು ಸಂಭ್ರನಮಿಸಿದ, ಅವರು ಸಮಿತಿಯನ್ನು ಹರಸಿದ ಪರಿಯನ್ನು ಕಂಡಾಗ ಸಾರ್ಥಕತೆಯ ಭಾವ ಮೂಡಿದೆ. ಎಲ್ಲ ಊರುಗಳಲ್ಲಿಯ ಸಂಘ-ಸಂಸ್ಥೆಗಳು ಈ ಕಾರ್ಯವನ್ನು ಹಮ್ಮಿಕೊಂಡು ಹಿರಿಯರಿಗೆ ಸಂತಸದ ಔತಣ ನೀಡಲಿ” ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ನಾಟಿ ವೈದ್ಯರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿರುವ 96ರ ಹರೆಯದ ರಾಧಾ ಶೆಟ್ಟಿ ಹೊಳಿಂಜೆ ಹಾಗೂ 70ರ ಹರೆಯದ ಸುಂದರಿ ಆಚಾರ್ಯ ಬುಕ್ಕಿಗುಡ್ಡೆ ಇವರನ್ನು ಸಮ್ಮಾನಿಸಲಾಯಿತು. ಖ್ಯಾತ ವಾಗ್ಮಿ ಹಿರಿಯ ನಾಗರಿಕರ ಜಾಗೃತಿಗಾಗಿ ಶ್ರಮಿಸುತ್ತಿರುವ ಉಡುಪಿಯ ನಿತ್ಯಾನಂದ ಭಟ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಹಿರಿಯರು ಮತ್ತು ಕಿರಿಯರೊಂದಿಗೆ ಯಾವ ರೀತಿ ಸಮನ್ವತೆಯ ಬದುಕನ್ನು ಬದುಕಬೇಕು ಮತ್ತು ಹಿರಿಯರಿಗಾಗಿ ಕಾನೂನಿನಲ್ಲಿ ಏನೆಲ್ಲಾ ರಕ್ಷಣೆಗಳಿವೆ ಎಂದು ಇದರ ಬಗ್ಗೆ ತಿಳಿ ಹೇಳಿದರು. ತೀರ್ಥಹಳ್ಳಿಯ ಖ್ಯಾತ ಗಾಯಕ ರಮೇಶ್ ಹುಣಸೆಮಕ್ಕಿ ರಂಜಿಸಿದರು. ಹಲವು ಹಿರಿಯರು ತಮ್ಮಲ್ಲಿ ಹುದುಗಿದ್ದ ಪ್ರತಿಭೆಗಳನ್ನು ಪ್ರದರ್ಶಿಸಿ ಸಂಭ್ರಮಿಸಿದರು. ಮಲ್ಪೆಯ ಲೀಲಾವತಿಯವರ ಕುಟುಂಬವೊಂದು ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರೊಂದಿಗೆ ಸೇರಿ ಜಲ ಸಂರಕ್ಷಣೆಯ ಬಗ್ಗೆ ಛದ್ಮವೇಷದೊಂದಿಗೆ ಜನಜಾಗೃತಿ ಮೂಡಿಸಿದರು. ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್, ಗೌರವಾಧ್ಯಕ್ಷ ಕೆ. ಶಾಂತಾರಾಮ ಸೂಡ, ಮುಖ್ಯ ಅತಿಥಿ ನಿತ್ಯಾನಂದ ಭಟ್, ಕಾರ್ಯದರ್ಶಿ ರವೀಂದ್ರ ನಾಡಿಗ್, ಜತೆ ಕಾರ್ಯದರ್ಶಿ ಸತೀಶ್ ಕುಲಾಲ್ ಉಪಸ್ಥಿತರಿದ್ದರು. ಉಪೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಪ್ರಭಾಕರ ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿ, ವಂದಿಸಿದರು.


