ಬಂಟ್ವಾಳ : ಕಲ್ಲಡ್ಕ ಕೊಳಕೀರು ನಿವಾಸಿ, ಹಿರಿಯ ರಂಗನಟ ಚಿ. ರಮೇಶ್ ಕಲ್ಲಡ್ಕ ಇವರು ದಿನಾಂಕ 23 ಜುಲೈ 2025ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಇವರಿಗೆ 68 ವರ್ಷ ವಯಸ್ಸಾಗಿತ್ತು.
ಬಾಲನಟನಾಗಿ ರಂಗಭೂಮಿ ಪ್ರವೇಶಿಸಿದ ಇವರು ಬಳಿಕ ವೃತ್ತಿ ರಂಗಭೂಮಿ ಕಲಾವಿದನಾಗಿ ನಾಲ್ಕೂವರೆ ದಶಕಗಳಿಂದ ಸೇವೆ ಸಲ್ಲಿಸಿದ್ದು, ಕೆ.ಎನ್. ಟೇಲರ್ ಸೇರಿದಂತೆ ತುಳು ರಂಗಭೂಮಿಯ ಹಿರಿಯ ರಂಗ ನಿರ್ದೇಶಕರ ಒಡನಾಟವನ್ನು ಹೊಂದಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಕಲ್ಲಡ್ಕ ‘ಮೈತ್ರಿ ಕಲಾವಿದರು’, ‘ರಚಿಸು ಕಲ್ಲಡ್ಕ’ ತಂಡವನ್ನು ಕಟ್ಟಿದ ಇವರು 25 ವರ್ಷಗಳಿಂದ ಕಲಾಸಂಗಮ ತಂಡದಲ್ಲಿ ಹಿರಿಯ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದರು. ತುಳು ರಂಗಭೂಮಿಯಲ್ಲಿ ದಾಖಲೆ ಸೃಷ್ಟಿಸಿದ್ದ ‘ಶಿವದೂತೆ ಗುಳಿಗೆ’ ನಾಟಕದ ಭೀಮರಾಯನ ಪಾತ್ರ ನಿರ್ವಹಿಸಿದ್ದರು. 2ನೇ ಅವಧಿಯಲ್ಲಿ ‘ಒರಿಯರ್ದೊರಿ ಅಸಲ್’ ನಾಟಕದಲ್ಲಿ ‘ಮಿಲಿಟ್ರಿ ಕೇಶವಣ್ಣನ ಪಾತ್ರ ನಿರ್ವಹಿಸಿದ್ದರು. ಒಟ್ಟು 75ಕ್ಕೂ ಅಧಿಕ ನಾಟಕಗಳ ಸಾವಿರಾರು ಪ್ರದರ್ಶನಗಳಲ್ಲಿ ರಮೇಶ್ ಕಲ್ಲಡ್ಕ ಪಾತ್ರ ನಿರ್ವಹಿಸಿದ್ದು, ಕರಾವಳಿ ಜಿಲ್ಲೆಗಳ ಜತೆಗೆ ದೇಶ-ವಿದೇಶಗಳಲ್ಲಿ ತಮ್ಮ ತಂಡದ ಜತೆ ತೆರಳಿ ಅಭಿನಯಿಸಿದ್ದಾರೆ.
ಕಂಠದಾನ ಕಲಾವಿರಾಗಿಯೂ ಗುರುತಿಸಿಕೊಂಡಿದ್ದ ಇವರು ರಂಗ ಪಯಣದ ಆರಂಭದಲ್ಲಿ ಸ್ತ್ರೀ ಪಾತ್ರಗಳನ್ನೂ ನಿರ್ವಹಿಸಿದ್ದರು. ಇವರ ಕಲಾ ಸೇವೆಗೆ ‘ರಂಗ ಚತುರ’, ‘ಶಾಂತಶ್ರೀ’ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿ, ಸಮ್ಮಾನಗಳು ಸಂದಿವೆ. ಕಲ್ಲಡ್ಕ ಸ. ಶಾಲಾ ಹಿರಿಯ ವಿದ್ಯಾರ್ಥಿ ಸಂಘದಲ್ಲಿ ಸಕ್ರಿಯರಾಗಿದ್ದ ಇವರು ಶಾರದಾ ಸೇವಾ ಪ್ರತಿಷ್ಠಾನದ ಟ್ರಸ್ಟಿಯಾಗಿದ್ದರು. ಶ್ರೀರಾಮ ಕಬಡ್ಡಿ ತಂಡದಲ್ಲಿ ಕಬಡ್ಡಿ ಆಟಗಾರನಾಗಿ, ಆರೆಸ್ಸೆಸ್‌ನ ಸ್ವಯಂಸೇವಕನಾಗಿಯೂ ಗುರುತಿಸಿಕೊಂಡಿದ್ದರು. ಮೃತರು ಪುತ್ರ, ಪುತ್ರಿ ಅಪಾರ ಸಂಖ್ಯೆಯ ಕಲಾಭಿಮಾನಿಗಳನ್ನು ಅಗಲಿದ್ದಾರೆ.