ಬೆಂಗಳೂರು: ಹಿರಿಯ ಪತ್ರಕರ್ತ ಸಚ್ಚಿದಾನಂದ ಮೂರ್ತಿ (ಸಚ್ಚಿ) ಅವರು ದಿನಾಂಕ 13-10-2023ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಸಚ್ಚಿದಾನಂದ ಮೂರ್ತಿಯವರು ದೆಹಲಿಯ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದ ಕೆಲವೇ ಕೆಲವು ಹಿರಿಯ ಕನ್ನಡಿಗ ಪತ್ರಕರ್ತರಲ್ಲಿ ಒಬ್ಬರಾಗಿದ್ದರು. ರಾಜ್ಯ-ರಾಷ್ಟ್ರಗಳ ವಿದ್ಯಮಾನಗಳ ಜ್ಞಾನಕೋಶದಂತಿದ್ದ ಇವರ ಸಾವು ಮಾಧ್ಯಮರಂಗಕ್ಕೆ ತುಂಬಲಾರದ ನಷ್ಟ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಸಮಸ್ತ ಕನ್ನಡಿಗರ ಪರವಾಗಿ ಸಂತಾಪ ಸೂಚಿಸಿದ್ದಾರೆ.
ಮಾಧ್ಯಮ ವಲಯದಲ್ಲಿ ಸಚ್ಚಿ ಎಂದೇ ಖ್ಯಾತಿ ಪಡೆದಿದ್ದ ಸಚ್ಚಿದಾನಂದ ಅವರು ಕಳೆದ ವರ್ಷವಷ್ಟೇ ನಿವೃತ್ತಿ ಹೊಂದಿದ್ದರು. ನಿವೃತ್ತಿಯಾಗುವವರೆಗೂ ಮಲಯಾಳ ಮನೋರಮಾ ಗ್ರೂಪ್‍ನಲ್ಲೇ ಕಾರ್ಯನಿರ್ವಹಿಸಿದ್ದರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಣೆಯಲ್ಲಿ ಸಿದ್ಧಹಸ್ತರಾಗಿದ್ದರು. ನ್ಯೂಡೆಲ್ಲಿ ಅಂಕಣದ ಮೂಲಕ ಮನೆಮಾತಾಗಿದ್ದರು. ರಾಜ್ಯದ ಯಾವುದೇ ಸಮಸ್ಯೆಗಳು ಇದ್ದರೂ ಅದಕ್ಕೆ ಕಳಕಳಿ ವ್ಯಕ್ತ ಪಡಿಸುತ್ತಿದ್ದರು. ಕೇಂದ್ರದ ರಾಜಕಾರಣಿಗಳ ಜೊತೆಗೆ ಆಪ್ತ ಸಂಬಧ ಇಟ್ಟುಕೊಂಡ ಶ್ರೀಯುತರು ಕನ್ನಡ ನಾಡಿನ ಅಭಿವೃದ್ಧಿ ಕಾರ್ಯಕ್ಕೆ ಒತ್ತಾಯಿಸುತ್ತಲೇ ಇರುತ್ತಿದ್ದರು. ಕೋಲಾರ ಮೂಲದ ಸಚ್ಚಿದಾನಂದ ಮೂರ್ತಿಯವರು 1982ರಲ್ಲಿ ʻದಿ ವೀಕ್ʼ ಸೇರಿದ್ದು, ಮುಂದೆ ಅದೇ ಸಂಸ್ಥೆಯಲ್ಲಿ ಸ್ಥಾನಿಕ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದರು. 4 ದಶಕಗಳ ಕಾಲ ತಮ್ಮ ಸೇವೆಯನ್ನು ದೆಹಲಿಗೆ ಮೀಸಲಿಟ್ಟ ಸಚ್ಚಿ ಅವರು ಎಡಿಟರ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಸಚ್ಚಿದಾನಂದ ಮೂರ್ತಿ ಅವರು ಇತ್ತೀಚೆಗಷ್ಟೇ ಶ್ವಾಸಕೋಶದ ಕಸಿ ಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ಕೆಲವು ದಿನಗಳಿಂದ ವೆಂಟಿಲೇಟರಿನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ತಮ್ಮ 19ನೇ ವಯಸ್ಸಿನಲ್ಲಿ ಪತ್ರಕರ್ತರಾದ ಸಚ್ಚಿದಾನಂದ ಅವರು ಪತ್ರಿಕೋದ್ಯಮದಲ್ಲಿ 40ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸುಮಾರು 35 ದೇಶಗಳನ್ನು ಸುತ್ತಿ ಅವರ ಅನುಭವಗಳನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ರಾಜಕೀಯ ಮತ್ತು ಆಡಳಿತದ ಬಗ್ಗೆ ಪರಿಣಿತಿ ಹೊಂದಿದ್ದ ಅವರಿಗೆ ಪತ್ರಿಕೋದ್ಯಮದ ಸೇವೆಗಾಗಿ ‘ದರ್ಲಭ್ ಸಿಂಗ್’ ಸ್ಮಾರಕ ಪ್ರಶಸ್ತಿ ಮತ್ತು ʻಕರ್ನಾಟಕ ಮಾಧ್ಯಮ ಅಕಾಡೆಮಿಯ ವಿಶಿಷ್ಟ ಪ್ರಶಸ್ತಿʼಗೆ ಭಾಜನರಾಗಿದ್ದರು.