ಬೆಳ್ತಂಗಡಿ : ಉಜಿರೆ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಉಪನ್ಯಾಸಕ ಹಿರಿಯ ಸಾಹಿತಿ ಪ್ರೊ. ಎನ್.ಜಿ. ಪಟವರ್ಧನ್ (81) ಅವರು ದಿನಾಂಕ 01-07-2024ರಂದು ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮುಂಡಾಜೆ ಗ್ರಾಮದ ಕಡಂಬಳ್ಳಿ ಮೂಲದವರಾಗಿದ್ದ ಅವರು ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ 32 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಕನ್ನಡ ವಿಭಾಗದ ಮುಖ್ಯಸ್ಥರೂ ಆಗಿದ್ದರು. ಅವರ ಸಾಹಿತ್ಯ ಪ್ರೀತಿಯಿಂದಾಗಿ ಹಂಸಧ್ವನಿ ಪ್ರಕಾಶನದ ಮೂಲಕ ಕನ್ನಡ ವ್ಯಾಕರಣ, ಕವನ ಸಂಕಲನಗಳು ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಉಜಿರೆಯ ಶಿವಾಜಿನಗರದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಅವರು ಪ್ರೇಮ ಲಹರಿ, ಅಕ್ಷಯ, ಮಾನಸ, ಚಿಲುಮೆ, ಸಿಂಚನ, ತುಂತುರು, 200 ಮುಕ್ತಕಗಳು, ಹೂಮಳೆ, ಸಾವಿರಾರು ಮುಕ್ತಕಗಳು, 58 ಕವನಗಳು ಇತ್ಯಾದಿ ಕವನ ಸಂಕಲನ, ಮೃತ್ಯುಂಜಯದ ಮಡಿಲಲ್ಲಿ ಮುಗುಳ್ಳಗೆ, ತೆರೆದ ಮನ, ವಿಚಾರ ವಿಹಾರ ಮೊದಲಾದ ಪ್ರಬಂಧ ಸಂಕಲನ, ಸ್ಥಿತ್ಯಂತರ ಮತ್ತು ಇತರ ಕಥೆಗಳು ಕೊರಡು ಕೊನರಿತು, ಮರೀಚಿಕೆ ಮೊದಲಾದ ಕಥಾ ಸಂಕಲನ, ಅದ್ಭುತ ರಾಮಾಯಣ ಅನುವಾದ, ಛಂದಸ್ಸಾರ, ಸಾಹಿತ್ಯ ಕ್ಷೇತ್ರಕ್ಕೆ ಬೆಳ್ತಂಗಡಿ ತಾಲೂಕಿನ ಕೊಡುಗೆ, ಬಾಳ ಪಯಣ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.
ಉತ್ತಮ ಶ್ರೋತೃ ಹಾಗೂ ಸಾಹಿತ್ಯದ ವಿಷಯದಲ್ಲಿ ಆಸಕ್ತಿ ಹೊಂದಿದ್ದ ಇವರು ಹಲವಾರು ಯುವ ಬರಹಗಾರರ ಬರಹಗಳ ಬಗ್ಗೆ ವಿಮರ್ಶೆ ಬರೆದು ಆ ಮೂಲಕ ಅವರನ್ನು ಪ್ರೋತ್ಸಾಹಿಸಿ ಎಷ್ಟೋ ಬರಹಗಾರರನ್ನು ಸಮಾಜಕ್ಕೆ ನೀಡಿರುತ್ತಾರೆ. ಇವರು ಬೆಳ್ತಂಗಡಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ತಾಲೂಕು ಮಟ್ಟದ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. 2014ರಲ್ಲಿ ‘ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ’ ಹಾಗೂ ರಾಜ್ಯ ಚುಟುಕು ಸಾಹಿತ್ಯ ಪರಿಷತ್ತಿನ ‘ಚುಟುಕು ಭಾರ್ಗವ ಪ್ರಶಸ್ತಿ’ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಅವರ ಅನೇಕ ಬರಹಗಳು, ಚುಟುಕುಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.