ಬೆಂಗಳೂರು: ಹಿರಿಯ ಪತ್ರಕರ್ತ, ಅಂಕಣಕಾರ ಎಂ. ಕೆ. ಭಾಸ್ಕರ್‌ರಾವ್ (75) ಅವರು ಅಸೌಖ್ಯದಿಂದ ಬೆಂಗಳೂರಿನಲ್ಲಿ ದಿನಾಂಕ 03-04-2024ರ ಬುಧವಾರದಂದು ನಿಧನರಾದರು. ಎರಡು ವರ್ಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಸಾಹಿತ್ಯಾಭಿಮಾನಿಗಳನ್ನು ಆಗಲಿದ್ದಾರೆ.
ಮೂಲತಃ ಶಿರಸಿ ತಾಲೂಕಿನವರಾದ ಎಂ. ಕೆ. ಭಾಸ್ಕರ ರಾವ್ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಶಿಕ್ಷಣ ಮುಗಿಸಿ ಪತ್ರಿಕೋದ್ಯಮ ಸೇರಿದರು. ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ವೃತ್ತಿಜೀವನ ಆರಂಭಿಸಿದ್ದ ಭಾಸ್ಕರ್‌ರಾವ್ ಆನಂತರ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ದಶಕಗಳ ಕಾಲ ವರದಿಗಾರ, ಸಿನಿಮಾ ಪತ್ರಕರ್ತ, ರಾಜಕೀಯ ವಿಶ್ಲೇಷಕ, ಸಾಂಸ್ಕೃತಿಕ ಬರಹಗಾರರಾಗಿ ಕಾರ್ಯನಿರ್ವಹಿಸಿ ಸಹಾಯಕ ಸಂಪಾದಕರಾಗಿ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ ಅಂಕಣಕಾರರಾಗಿ ಹಲವು ಪತ್ರಿಕೆಗಳಲ್ಲಿ ರಾಜಕೀಯ ವಿದ್ಯಮಾನ, ಸಾಂಸ್ಕೃತಿಕ ಪಲ್ಲಟಗಳನ್ನು ವಿಶ್ಲೇಷಿಸಿ ಜನಪ್ರಿಯರಾಗಿದ್ದರು.
ಭಾಸ್ಕರ್ ರಾವ್ ಅವರು ಉಪೇಂದ್ರ ಅಭಿನಯದ ‘ಹಾಲಿವುಡ್’ ಸಿನಿಮಾ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ, ಕೆ. ಯು. ಡಬ್ಲೂ. ಜೆ. ಪ್ರಶಸ್ತಿ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಮಹದೇವ ಪ್ರಕಾಶ್ ಪ್ರಶಸ್ತಿಗೆ ಪಾತ್ರರಾಗಿದ್ದರು.
ಮೃತರ ಅಂತ್ಯಸಂಸ್ಕಾರವು ಬೆಂಗಳೂರಿನ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ದಿನಾಂಕ 03-04-2024ರ ಸಂಜೆ ನೆರವೇರಿತು.