ಬಂಟ್ವಾಳ : ಪಂಚಾಯತ್ ರಾಜ್ ನ ರಾಷ್ಟ್ರೀಯ ತರಬೇತುದಾರ, ಹಿರಿಯ ರಂಗಕರ್ಮಿ, ರಂಗ ನಿರ್ದೇಶಕ ಮಂಜು ವಿಟ್ಲ (77) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಕುಂಟಿಕಾನದಲ್ಲಿರುವ ತಮ್ಮ ಪುತ್ರಿಯ ಮನೆಯಲ್ಲಿ ದಿನಾಂಕ 06-09-2023ರಂದು ನಿಧನರಾಗಿದ್ದಾರೆ. ಧಾರ್ಮಿಕ, ಸಾಮಾಜಿಕ, ವ್ಯಕ್ತಿತ್ವ ವಿಕಸನ, ಮಹಿಳಾ ಸಬಲೀಕರಣ, ನಾಟಕ, ರೂಪಕ, ವರ್ಣಾಲಂಕಾರ, ರಂಗ ಸಜ್ಜಿಕೆ ಸಹಿತ ಮೊದಲಾದ ಚಟುವಟಿಕೆಯಲ್ಲಿ ಮಂಜು ವಿಟ್ಲ ಅವರು ತೊಡಗಿಸಿಕೊಂಡಿದ್ದರು.
ಬಿ.ಸಿ.ರೋಡು ಪರಿಸರ ಮತ್ತು ಅವರ ಆಪ್ತ ವಲಯದಲ್ಲಿ ‘ಮಂಜಣ್ಣ’ ಎಂದೇ ಚಿರಪರಿಚಿತರಾಗಿದ್ದ ಇವರು ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದರು. ಅಲ್ಲದೇ ಹಿರಿಯ ಚಿತ್ರ ಕಲಾವಿದರಾಗಿ, ಕಾರ್ಯಕ್ರಮ ನಿರೂಪಕನಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಅಪಾರ ಜನಮನ್ನಣೆ ಗಳಿಸಿದ್ದರು. ಮೂಲತಃ ಇವರು ವಿಟ್ಲದ ನಿವಾಸಿ. ಸದಾ ನಗುಮುಖದ ಸರಳ, ಸ್ನೇಹಜೀವಿಯಾಗಿದ್ದ ಇವರು ಹಲವಾರು ತುಳು, ಕನ್ನಡ, ಪೌರಾಣಿಕ ನಾಟಕಗಳ ಹಾಸ್ಯ ಪಾತ್ರದಲ್ಲಿ ಮಿಂಚಿದ್ದಲ್ಲದೆ 1000ಕ್ಕೂ ಮಿಕ್ಕಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೇ ಇವರು ಅಭಿನಯಿಸಿದ್ದ ‘ಚೋಮನ ದುಡಿ’ ನಾಟಕದ ಚೋಮನ ಪಾತ್ರ ಇವರಿಗೆ ಹೆಚ್ಚು ಮನ್ನಣೆ ದೊರಕಿಸಿಕೊಟ್ಟಿತ್ತು.