ಬೆಂಗಳೂರು : ಹಿರಿಯ ಬರಹಗಾರ ಡಾ. ಸಿ. ನಾಗಣ್ಣನವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ಮಳಲಿ ವಸಂತ ಕುಮಾರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ.
ಶ್ರೇಷ್ಠ ಬರಹಗಾರರಾದ ಡಾ. ಮಳಲಿ ವಸಂತ ಕುಮಾರ್ ಅವರು ‘ಮನುಕುಲದ ವಾಗ್ಮಿ’ ಎಂದು ಹೆಸರು ಪಡೆದಿದ್ದರು. ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಬರಹಗಾರರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ತಾವೇ 46 ಮಹತ್ವದ ಕೃತಿಗಳನ್ನು ರಚಿಸಿದ್ದರು. ಅವರ ನೆನಪಿನಲ್ಲಿ ಕುಟುಂಬದವರು ದತ್ತಿ ನಿಧಿಯನ್ನು ಸ್ಥಾಪಿಸಿದ್ದು, ಕನ್ನಡಕ್ಕೆ ಮಹತ್ವದ ಕೊಡುಗೆ ನೀಡಿದ ಬರಹಗಾರರಿಗೆ, ಕನ್ನಡಪರ ಹೋರಾಟಗಾರರಿಗೆ ಈ ಪುರಸ್ಕಾರ ನೀಡುವಂತೆ ಯೋಜನೆ ರೂಪಿಸಿದ್ದಾರೆ.
ಮಳಲಿ ವಸಂತ ಕುಮಾರ್ ಪುರಸ್ಕಾರಕ್ಕೆ 2025ನೆಯ ಸಾಲಿಗೆ ಆಯ್ಕೆಯಾಗಿರುವ ಡಾ. ಸಿ. ನಾಗಣ್ಣನವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಪ್ರಸಾರಾಂಗದ ನಿರ್ದೇಶಕರಾಗಿ ಕೂಡ ಸೇವೆಯನ್ನು ಸಲ್ಲಿಸಿದ್ದಾರೆ. ಭಾಷಾಂತರ ಕ್ಷೇತ್ರದಲ್ಲಿ ಮಹತ್ವದ ಕೊಡುಗೆಯನ್ನು ಸಲ್ಲಿಸಿರುವ ಇವರು ಹಲವು ಪ್ರಮುಖ ವಿಶ್ವವಿದ್ಯಾಲಯಗಳ ತಜ್ಞರ ಸಮಿತಿ ಸದಸ್ಯರಾಗಿ ಕೂಡ ಸೇವೆಯನ್ನು ಸಲ್ಲಿಸಿದ್ದಾರೆ. ಅಂತರರಾಷ್ಟ್ರೀಯ, ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿರುವ ಇವರು ಅಂಕಣಕಾರರಾಗಿ ಕೂಡ ಹೆಸರು ಮಾಡಿದವರು.
ನಾಡೋಜ ಡಾ. ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಗೌರವ ಕಾರ್ಯದರ್ಶಿಗಳಾದ ಬಿ.ಎಂ. ಪಟೇಲ್ ಪಾಂಡು, ಗೌರವ ಕೋಶಾಧ್ಯಕ್ಷರಾದ ಡಿ.ಆರ್. ವಿಜಯ ಕುಮಾರ್ ಮತ್ತು ದತ್ತಿದಾನಿಗಳ ಪರವಾಗಿ ಶಾಂತ ವಸಂತ ಕುಮಾರ್ ಭಾಗವಹಿಸಿ ಕೂಲಂಕಶವಾಗಿ ಚರ್ಚಿಸಿ ಡಾ. ಸಿ. ನಾಗಣ್ಣನವನ್ನು ಆಯ್ಕೆ ಮಾಡಲಾಗಿದೆ. ಪುರಸ್ಕೃತರಾದ ಡಾ. ಸಿ. ನಾಗಣ್ಣನವರನ್ನು ವಿಶೇಷವಾಗಿ ಅಭಿನಂದಿಸಿರುವ ನಾಡೋಜ ಡಾ. ಮಹೇಶ ಜೋಶಿಯವರು ಅವರ ಮುಂದಿನ ಸಾರಸ್ವತ ಸೇವೆಗೆ ಶುಭವನ್ನು ಕೋರಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾಗಿರುವ ಕುರಿತು ಸಂತೋಷವನ್ನು ವ್ಯಕ್ತ ಪಡಿಸಿರುವ ಡಾ. ಸಿ. ನಾಗಣ್ಣನವರು ಅಧ್ಯಕ್ಷರಿಗೆ ಪತ್ರವನ್ನು ಬರೆದು “ನನ್ನ ಸುದೀರ್ಘ ಬರಹದ ಬದುಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೊಡ ಮಾಡುವ ಪ್ರಶಸ್ತಿಗೆ ನಾನು ಭಾಜನನಾಗುತ್ತಿರುವುದು ಇದೇ ಮೊದಲು. ತಮ್ಮ ಅಧ್ಯಕ್ಷಾವಧಿಯಲ್ಲಿ ಇದು ಸಾಕಾರವಾದ್ದು ನನ್ನ ಸಂತೋಷಕ್ಕೆ ಕಾರಣವಾಗಿದೆ. ಅದಕ್ಕಾಗಿ ತಮಗೆ ಹಾಗೂ ಆಯ್ಕೆ ಸಮಿತಿಯ ಸದಸ್ಯರಿಗೆ ನನ್ನ ವಂದನೆಗಳನ್ನು ಸಮರ್ಪಿಸುತ್ತಿದ್ದೇನೆ” ಎಂದು ತಮ್ಮ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ.