ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು, ಜಿಲ್ಲಾ ಘಟಕ ಹಾಸನ ಸಹಯೋಗದಲ್ಲಿ 2025 ಡಿಸೆಂಬರ್ 14 ಭಾನುವಾರ ಹಮ್ಮಿಕೊಳ್ಳುವ ಹಾಸನ ಜಿಲ್ಲಾ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಕವಿ, ಗಾಯಕ, ರಂಗಭೂಮಿ ಕಲಾವಿದರಾದ ಗ್ಯಾರಂಟಿ ರಾಮಣ್ಣನವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ.
ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ವೇದಿಕೆಯ ಗೌರವ ಸಲಹೆಗಾರ ನಾಗರಾಜ್ ಹೆತ್ತೂರು, ರಾಜ್ಯ ಕಾರ್ಯದರ್ಶಿ ಡಾ. ಪಿ. ದಿವಾಕರ ನಾರಾಯಣ, ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್, ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ ದೊಡ್ಡಮನಿ, ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ, ರಾಜ್ಯ ಸಹ ಕಾರ್ಯದರ್ಶಿ ದೇಸು ಆಲೂರು, ಸಾಮಾಜಿಕ ಹೋರಾಟಗಾರ ಮಲ್ನಾಡ್ ಮೆಹಬೂಬ್, ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ವೈ.ಎಸ್. ರಮೇಶ್, ಹಾಸನ ತಾಲೂಕು ಅಧ್ಯಕ್ಷೆ ಕೆ.ಸಿ. ಗೀತಾರವರುಗಳನ್ನೊಳಗೊಂಡ ಸಮಿತಿ ಕಳೆದ ಐದು ದಶಕಗಳಿಂದ ಬೀದಿ ನಾಟಕ, ಹೋರಾಟಗೀತೆಗಳು, ರೈತ ಚಳವಳಿ, ದಲಿತ-ಬಂಡಾಯ ಚಳವಳಿಗಳಲ್ಲಿ, ರಂಗಭೂಮಿ, ಸಾಹಿತ್ಯ ಕ್ಷೇತ್ರದಲ್ಲಿ ನೂರಾರು ಹೋರಾಟಗೀತೆಗಳನ್ನು ಸ್ವತಃ ರಚಿಸಿ ಹಾಡುವುದರ ಮೂಲಕ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಗ್ಯಾರಂಟಿ ರಾಮಣ್ಣನವರನ್ನು ಹಾಸನ ಜಿಲ್ಲಾ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.
ಆಯ್ಕೆ ಸಂದರ್ಭದಲ್ಲಿ ಗ್ಯಾರಂಟಿ ರಾಮಣ್ಣನವರನ್ನು ಸೇರಿದಂತೆ ಹಿರಿಯ ಸಾಹಿತಿ ಸುಶೀಲಾ ಸೋಮಶೇಖರ್, ಪ್ರಭಾಮಣಿ ನಾಗರಾಜ್, ಪ್ರೊ. ಸೈಯದ್ ಶಹಬುದ್ದೀನ್, ತಿರುಪತಿಹಳ್ಳಿ ಶಿವಶಂಕರಪ್ಪ, ಗೊರೂರು ಅನಂತರಾಜು ಇವರುಗಳ ಹೆಸರುಗಳು ಚರ್ಚೆಗೆ ಬಂದವು. ವಿವಿಧ ಕ್ಷೇತ್ರಗಳಲ್ಲಿನ ಸೇವೆ, ಹಿರಿತನವನ್ನು ಪರಿಗಣಿಸಿ ಗ್ಯಾರಂಟಿ ರಾಮಣ್ಣನವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
