ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪುರುಷ ಸಾಹಿತಿಗಳಿಗೆ ಮೀಸಲಾಗಿ ಇಟ್ಟಿರುವ ಪ್ರಪ್ರಥಮ ಹಾಗೂ ಪ್ರತಿಷ್ಠಿತ ದತ್ತಿ ‘ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ’ಗೆ ಜಿಲ್ಲೆಯ ಹಿರಿಯ ಸಾಹಿತಿಗಳಾದ ನಾಗೇಶ್ ಕಾಲೂರು ಇವರು ರಚಿಸಿದ ‘ಶ್ರೀ ಕಾವೇರಿ ದರ್ಶನಂ – ಸಮಗ್ರ ಕಾವೇರಿ ಚರಿತೆ’ ಕೃತಿಯು ಪುರಸ್ಕೃತಗೊಂಡಿದೆ. ಜಿಲ್ಲೆಯ ದೈನಿಕ ಶಕ್ತಿ ಪತ್ರಿಕೆಯ ಸ್ಥಾಪಕ ಸಂಪಾದಕರಾದ ಬಿ.ಎಸ್ ಗೋಪಾಲಕೃಷ್ಣರವರ ಹೆಸರಿನಲ್ಲಿ ಅವರ ಪುತ್ರರು ಸ್ಥಾಪಿಸಿರುವ ಈ ದತ್ತಿಯ ಮೊದಲ ಪ್ರಶಸ್ತಿ ಇದಾಗಿದ್ದು, ಈ ದತ್ತಿ ಪ್ರಶಸ್ತಿಯ ಆಯ್ಕೆಗಾಗಿ ಜಿಲ್ಲೆಯ ಬರಹಗಾರರ ಕೃತಿಗಳನ್ನು ಆಹ್ವಾನಿಸಿದಾಗ ಹತ್ತು ಸಾಹಿತಿಗಳು ತಮ್ಮ ಕೃತಿಗಳನ್ನು ಪ್ರಸ್ತುತಪಡಿಸಿದ್ದರು. ಜಿಲ್ಲೆಯ ಹಿರಿಯ ಮೂರು ಸಾಹಿತಿಗಳು ಪ್ರತ್ಯೇಕವಾಗಿ ಈ ಪುಸ್ತಕಗಳನ್ನು ಪರಿಶೀಲಿಸಿ ನೀಡಿದ ಅಂಕಗಳನ್ನು ಜಿಲ್ಲಾ ಸಮಿತಿ ಒಟ್ಟುಗೂಡಿಸಿ ಹತ್ತು ಜನ ಲೇಖಕರಲ್ಲಿ ಅತಿ ಹೆಚ್ಚು ಅಂಕ ಪಡೆದ ‘ಶ್ರೀ ಕಾವೇರಿ ದರ್ಶನಂ – ಸಮಗ್ರ ಕಾವೇರಿ ಚರಿತೆ’ ಕೃತಿ ಈ ಪ್ರಶಸ್ತಿ ಪಡೆದುಕೊಂಡಿದೆ. ಮುಂದೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಸ್.ಐ. ಮುನೀರ್ ಅಹ್ಮದ್ ತಿಳಿಸಿದ್ದಾರೆ.
ನಾಗೇಶ್ ಕಾಲೂರು