ವಿಟ್ಲ : ಯಕ್ಷಗಾನ ರಂಗದ ಹಿರಿಯ ಅರ್ಥಧಾರಿ ವಿಟ್ಲ ಶಂಭು ಶರ್ಮ (74) ದಿನಾಂಕ 01 ನವೆಂಬರ್ 2025ರ ಶನಿವಾರ ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಪತ್ನಿ ಹಾಗೂ ಪುತ್ರನನ್ನು ಆಗಲಿದ್ದಾರೆ. ಉಪನ್ಯಾಸಕರಾಗಿ, ಯಕ್ಷಗಾನ ಅರ್ಥಧಾರಿಯಾಗಿ ಜನಪ್ರಿಯರಾಗಿದ್ದ ಅವರು ಪ್ರಸ್ತುತ ಪುತ್ತೂರು ಸಮೀಪ ಮುರದಲ್ಲಿ ವಾಸಿಸುತ್ತಿದ್ದರು.
ವಿಟ್ಲ ಶಂಭು ಶರ್ಮರು ಉತ್ತಮ ಅರ್ಥಧಾರಿ, ಪ್ರಸಂಗದ ನಡೆ, ಪದ್ಯಗಳ ಮರ್ಮ ಅರಿತು ಅರ್ಥ ಹೇಳಬಲ್ಲ ಬೆರಳೆಣಿಕೆಯ ಕಲಾವಿದರಲ್ಲಿ ಓರ್ವರಾಗಿದ್ದರು. ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಪಾತ್ರಗಳಿಗೊಂದು ಪಾತ್ರ ಸೃಷ್ಟಿಸಬಲ್ಲ ಸಮರ್ಥ ಹಿರಿಯ ಅನುಭವೀ ಅರ್ಥಧಾರಿಗಳೂ ಆಗಿದ್ದರು. ವಿಟ್ಲ ಶಂಭು ಶರ್ಮರು ಕುಂಬ್ಳೆ ಸೀಮೆಯ ಎಡನಾಡು ಗ್ರಾಮದ ಶೆಡಂಪಾಡಿ ಎಂಬಲ್ಲಿ ಕೃಷ್ಣ ಭಟ್ – ಹೇಮಾವತಿ ದಂಪತಿ ಪುತ್ರರಾಗಿ 13-10-1951ರಂದು ಜನಿಸಿದರು. ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದ ಶರ್ಮರು ತಾಳಮದ್ದಳೆ ಅರ್ಥಧಾರಿಗಳಾಗಿ ಮಿಂಚಿದರು. ಶರ್ಮರ ಅರ್ಥಗಾರಿಕೆಯು ಬಲು ಸೊಗಸಾದುದು. ಯಾವುದೇ ಪಾತ್ರವನ್ನು ನಿರ್ವಹಿಸುವಾಗ ಪೀಠಿಕೆಯಲ್ಲಿ ಆ ಪಾತ್ರದ ಗುಣ- ಸ್ವಭಾವವನ್ನು ಪ್ರೇಕ್ಷಕರಿಗೆ ಮನದಟ್ಟು ಮಾಡಿಸುವ ವೈಖರಿ, ವಿನಾ ಕಾರಣ ಉದ್ದಕ್ಕೆ ಬೆಳೆಸದ, ಹೇಳಬೇಕಾದುದನ್ನು ಹೇಳಿಯೇ ಮುಗಿಸುವ ವಿಧಾನ ಶರ್ಮರದ್ದು ಮುಂದೆ ಜೀವನೋಪಾಯಕ್ಕಾಗಿ ಉಪನ್ಯಾಸಕರಾಗಿ ಬೇರೆ ಬೇರೆ ಊರುಗಳಿಗೆ ಹೋಗಬೇಕಾಗಿ ಬಂದ ಕಾರಣ ಶಂಭು ಶರ್ಮರಿಗೆ ಸ್ವಲ್ಪ ಮಟ್ಟಿಗೆ ಯಕ್ಷಗಾನದ ನಂಟು ಕಡಿಮೆಯಾಯಿತು. ತುರ್ತುಪರಿಸ್ಥಿತಿ ವಿರುದ್ಧದ ಪ್ರತಿಭಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಕ್ಷಗಾನದಿಂದ ದೂರವಾಗಿದ್ದರು. ತುರ್ತುಪರಿಸ್ಥಿತಿಯ ನಂತರ ಮಂಗಳೂರಿನ ಗಣಪತಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿದ ನಂತರ ಪುನಃ ಯಕ್ಷಗಾನದಲ್ಲಿ ತೊಡಗಿಸಿಕೊಂಡರು. ಬೆಸೆಂಟ್ ಸಂಜೆ ಕಾಲೇಜು, ಬೆಸೆಂಟ್ ಡೇ ಕಾಲೇಜು, ಫಿಶರೀಸ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದರು.
