ಪೆರ್ಡೂರು : ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ‘ಹಿರಿಯೆರೊಟ್ಟಿಗೊಂಜಿ ದಿನ’ ಕಾರ್ಯಕ್ರಮವು ದಿನಾಂಕ 01 ಡಿಸೆಂಬರ್ 2024ರಂದು ಸಂಭ್ರಮದಿಂದ ಜರಗಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ 60ರಿಂದ 92 ವರ್ಷಗಳವರೆಗಿನ ನೂರಾರು ಹಿರಿಯ ನಾಗರಿಕರು ಪಾಲ್ಗೊಂಡು ಆಡಿ, ಹಾಡಿ, ನರ್ತಿಸಿ ಸಂಭ್ರಮಿಸಿದ್ದು ಈ ಕಾರ್ಯಕ್ರಮ ಅವರಲ್ಲಿ ಹೊಸಹುರುಪನ್ನು ನೀಡಿತು.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಐಸಿರಿ ಕೋಟ್ಯಾನ್ ಇವರ ನೃತ್ಯ ಪ್ರದರ್ಶನದೊಂದಿಗೆ ಆರಂಭವಾಯಿತು. ದೀಪ ಬೆಳಗಿ ಉದ್ಘಾಟಿಸಿದ ಗ್ರಾಮದ ಮುಖಂಡರೂ, ಸಮಿತಿಯ ಗೌರವಾಧ್ಯಕ್ಷರೂ ಆದ ಶಾಂತಾರಾಮ ಸೂಡ ಇವರು ಮಾತನಾಡಿ “ಇಂದಿನ ಕಾಲಮಾನದಲ್ಲಿ ವೃದ್ಧಾಪ್ಯ ಒಂದು ನೀರಸ ಜೀವನವಾಗಿ ಹೆಚ್ಚಿನವರು ಮನರಂಜನೆಯಿಂದ ವಂಚಿತರಾಗಿದ್ದಾರೆ. ಅಂತಹ ಹಿರಿಯರಿಗೆ ಇಂತಹ ಕಾರ್ಯಕ್ರಮಗಳು ಅತೀ ಅಗತ್ಯವಾಗಿದೆ. ಈ ಸಮಿತಿ ನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಹೊಸತನವನ್ನು ನೀಡುತ್ತಿರುವುದು ಸಂತಸದ ಸಂಗತಿ” ಎಂದರು.
ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್ ಅವರು ಮಾತನಾಡಿ “ತಮ್ಮ ಜೀವನವಿಡೀ ಮಕ್ಕಳು, ಮೊಮ್ಮಕ್ಕಳು, ಕುಟುಂಬಕ್ಕಾಗಿ ನಿಸ್ವಾರ್ಥದಿಂದ ದುಡಿದು ಬಾಳಿನ ಮುಸ್ಸಂಜೆಯಲ್ಲಿ ನಿಸ್ತೇಜರಾಗಿ ಬದುಕುವಂತಹ ಪರಿಸ್ಥಿತಿ ಇಂದಿನ ಹಿರಿಯರದ್ದಾಗಿದೆ. ಕುಟುಂಬದಲ್ಲಿ, ಸಮಾಜದಲ್ಲಿ ಇಂದು ಹಲವಾರು ಹಿರಿಯರು ತಮ್ಮ ಇಷ್ಟದಂತೆ ಬದುಕುವ ಸ್ವಾತಂತ್ರ್ಯರವನ್ನು ಕಳೆದುಕೊಂಡಿದ್ದಾರೆ. ಇವುಗಳನ್ನು ಗಮನಿಸಿ ಹಿರಿಯರೂ ಕಿರಿಯರಂತೆಯೇ ಸಂತಸ, ಸಂಭ್ರಮದಿಂದ ಕಾಲ ಕಳೆಯಬೇಕು ಎನ್ನುವ ದೃಷ್ಟಿಯನ್ನಿರಿಸಿಕೊಂಡು ಹಿರಿಯರಿಗಾಗಿಯೇ ಇಡೀ ದಿನದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇಂದು ನೂರಾರು ಹಿರಿಯರು ಸಂಭ್ರಮಿಸಿದ ಪರಿಕಂಡಾಗ ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಿರಂತರವಾಗಿ ನಡೆಯಬೇಕಾದ ಅನಿವಾರ್ಯತೆ ಇದೆ. ಎಲ್ಲ ಊರುಗಳಲ್ಲಿಯ ಸಂಘ-ಸಂಸ್ಥೆಗಳು ಈ ಕಾರ್ಯಕ್ರಮವನ್ನು ಮಾಡುವಂತಾಗಲಿ” ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಕಿರಿಯ ಆರೋಗ್ಯ ಸಹಾಯಕಿ, ಸೂಲಗಿತ್ತಿಯಾಗಿ 37 ವರ್ಷ ಸೇವೆ ಸಲ್ಲಿಸಿರುವ 80ರ ಹರಯದ ನಳಿನಿ ಸಿಸ್ಟರ್, ಹಿರಿಯ ರಂಗ ಕಲಾವಿದ ಸುಧಾಕರ ದೇವಾಡಿಗ ಇವರನ್ನು ಸಮ್ಮಾನಿಸಲಾಯಿತು ಹಾಗೂ ಮಂಡ್ಯ ಅಗ್ನಿಶಾಮಕ ಠಾಣೆಯ ಪ್ರಮುಖ ಅಗ್ನಿಶಾಮಕ, 2023-24ನೇ ಸಾಲಿನಲ್ಲಿ ವಿಶಿಷ್ಟ ಸೇವೆಗಾಗಿ ಕೊಡಲ್ಪಡುವ ‘ಚಿನ್ನದ ಪದಕ’ಕ್ಕೆ ಭಾಜನರಾದ ಸಮಿತಿಯ ಪದಾಧಿಕಾರಿ ಪೆರ್ಡೂರು ಬುಕ್ಕಿಗುಡ್ಡೆಯವರಾದ ಪ್ರಭಾಕರ ಶೆಟ್ಟಿಯವರನ್ನು ಸಮ್ಮಾನಿಸಲಾಯಿತು. ಖ್ಯಾತ ಕಲಾವಿದ 75ರ ಹರೆಯದ ಪಿ.ಎನ್. ಆಚಾರ್ಯರು ಪ್ರಾತ್ಯಕ್ಷಿಕೆ ನೀಡಿ ಥ್ರೆಡ್ ಆರ್ಟ್ ಮತ್ತು ಪ್ರಕೃತಿ ಚಿತ್ರಗಳನ್ನ ರಚಿಸಿ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು. ಪ್ರಕಾಶ್ ನಾಯಕ್ ಉಡುಪಿರವರು ಹಿರಿಯರು ವೃದ್ದಾಪ್ಯದಲ್ಲಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಹಲವಾರು ಮಾಹಿತಿಗಳನ್ನು ಪ್ರಾತ್ಯಕ್ಷತೆಯೊಂದಿಗೆ ನೀಡಿದರು.
ಹಲವು ಹಿರಿಯರು ತಮ್ಮಲ್ಲಿ ಹುದುಗಿದ್ದ ಪ್ರತಿಭೆಗಳನ್ನು ಪ್ರದರ್ಶಿಸಿ ಸಂಭ್ರಮಿಸಿದರು. ಹಿರಿಯ ಜೀವಗಳು ಮತ್ತೊಮ್ಮೆ ಮೈ ಕೊಡವಿ ನಿಂತು ಇಂದಿನ ಕಾಲಘಟ್ಟ ಹಾಗೂ ಕಾಲನ ನಿಯಮ ಎರಡನ್ನೂ ತುಸು ಕೆಣಕಿ ಅಣುಕಿಸಿ ಅಭಿನಯಿಸಿ ಅನುಭವಿಸಿ ಹಿರಿಯರಿಗೆ ವಯಸ್ಸು ಎನ್ನುವುದು ಕೇವಲ ಒಂದು ನಂಬರ್ ಅಷ್ಟೇ ಅನ್ನುವುದನ್ನ ಮನದಟ್ಟು ಮಾಡಿಕೊಟ್ಟ ಕಾರ್ಯಕ್ರಮ. ಹಿರಿಯ ತರುಣ ತರುಣಿಯರ ಈ ಮಟ್ಟದ ಪ್ರತಿಭಾ ಪ್ರಾವೀಣ್ಯವನ್ನು ತೋರಿಸುವುದರ ಜೊತೆಗೆ ಕಾರ್ಯಕ್ರಮದ ಕೊನೆ ತನಕ ಕುಳಿತು ಅಸ್ವದಿಸಿದ ಪ್ರತಿಯೊಂದು ಹಿರಿಯರ ಮೊಗದಲ್ಲಿ ಕಂಡಂತ ಖುಷಿ ಹಾಗೆ ಕೌತುಕಭರಿತವಾದ ಆ ನೋಟ ಅವರ ಮೊಗದಲ್ಲಿ ಇದ್ದ ಭಾವ ಇದೆಲ್ಲ ನೋಡುವಾಗ ನಿಜವಾಗಿಯೂ ಇಲ್ಲಿ ಒಂದು ಸಂಸ್ಕೃತಿಯ ಒರತೆ ಸದಾ ಹರಿಯುವಲ್ಲಿ ಆ ಭಗವಂತ ತನ್ನದೇ ಆದ ನಿಲುವನ್ನು ಇಟ್ಟ ಹಾಗೆ ಬಾಸವಾಗುತಿತ್ತು. ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್, ಗೌರವಾಧ್ಯಕ್ಷ ಕೆ. ಶಾಂತಾರಾಮ ಸೂಡ, ಉಪಾಧ್ಯಕ್ಷ ಪಳಜೆ ಪ್ರಮೋದ್ ರೈ ಹಾಗೂ ಕಾರ್ಯದರ್ಶಿ ರವೀಂದ್ರ ನಾಡಿಗ್ ಉಪಸ್ಥಿತರಿದ್ದರು. ಉಪೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಪ್ರಭಾಕರ ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿ, ವಂದಿಸಿದರು.