ಸುಳ್ಯ : ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಪರಿಸರ ಜಾಗೃತಿಯಾನ, ಪರಿಸರ ಗೀತೆ ಗಾಯನ ಹಾಗೂ ಔಷಧ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧಾ ಸರಣಿ ಕಾರ್ಯಕ್ರಮವು ದಿನಾಂಕ 16 ಜುಲೈ 2025ರಂದು ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ ಪರಿಸರ ಪ್ರೇಮಿ, ಪ್ರಗತಿಪರ ಕೃಷಿಕ ಯಶೋಚಂದ್ರ ಪರಮಲೆ “ನಾವು ಎಷ್ಟೇ ತಾಂತ್ರಿಕವಾಗಿ ಬೆಳೆದರು ಪರಿಸರವೇ ನಮ್ಮ ಜೀವಾಳ. ಅದನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವುದು ನಮ್ಮ ಕರ್ತವ್ಯ, ಪರಿಸರವನ್ನು ಸಂರಕ್ಷಿಸೋಣ” ಎಂದು ಹೇಳಿದರು.
ಸಭಾಧ್ಯಕ್ಷತೆಯನ್ನು ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಂಜ ಹೋಬಳಿ ಘಟಕದ ಅಧ್ಯಕ್ಷರಾದ ಬಾಬು ಗೌಡ, ಅಚ್ರಪ್ಪಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ, ಕಾರ್ಯಕ್ರಮ ಸಂಯೋಜಕರಾದ ಯೋಗೀಶ್ ಹೊಸೊಳಿಕೆ, ಕಾಲೇಜು ಪ್ರಾಂಶುಪಾಲರಾದ ಚೆನ್ನಮ್ಮ ಪಿ., ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಪೂರ್ಣಿಮಾ ಯಂ., ಎನ್.ಡಿ.ಎಂ.ಸಿ. ಅಧ್ಯಕ್ಷರಾದ ಕೇಶವ ಗೌಡ ಕಾಂತಿಲ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಿಶ್ವನಾಥ ನಾಲ್ತಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಶೋಚಂದ್ರ ಪರಮಲೆಯವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾಭೋಧಿನಿ ಬಾಳಿಲ ಇದರ ನಿವೃತ್ತ ಮುಖ್ಯ ಶಿಕ್ಷಕರಾದ ಶಿವರಾಮ ಶಾಸ್ತ್ರಿ, ಬಿಳಿನೆಲೆ ಪ್ರೌಢಶಾಲಾ ನಿವೃತ್ತ ಹಿಂದಿ ಶಿಕ್ಷಕರಾದ ದುಗ್ಗಪ್ಪ ಕುಳ್ಳಂಪ್ಪಾಡಿ, ಪದವಿ ಪೂರ್ವ ಕಾಲೇಜು ಪಂಜ ಇದರ ನಿವೃತ್ತ ಪ್ರಾಂಶುಪಾಲರಾದ ವೆಂಕಪ್ಪ ಕೇನಾಜೆ, ಸಿ.ಆರ್.ಪಿ. ಕುಶಾಲಪ್ಪ ತುಂಬತ್ತಾಜೆ, ನಿವೃತ್ತ ರಾಜ್ಯಶಾಸ್ತ್ರ ಉಪನ್ಯಾಸಕರಾದ ರಾಮಚಂದ್ರ ಪಳಂಗಾಯ ಉಪಸ್ಥಿತರಿದ್ದರು.
ಭಾವನ ಸುಗಮ ಸಂಗೀತ ಬಳಗದ ಕೆ.ಆರ್. ಗೋಪಾಲಕೃಷ್ಣ ಹಾಗೂ ಗಾಯಕಿ ಕುಮಾರಿ ಲಿಪಿಶ್ರೀ ಇವರಿಂದ ಪರಿಸರ ಗೀತಾ ಗಾಯನ ಕಾರ್ಯಕ್ರಮ ನಡೆಯಿತು. ಅಂತೆಯೇ ಔಷಧ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಪಂಜ ಹೋಬಳಿ ಘಟಕದ ಅಧ್ಯಕ್ಷರಾದ ಬಾಬು ಗೌಡ ಅಚ್ರಪ್ಪಾಡಿ ಸ್ವಾಗತಿಸಿ, ಕಾಲೇಜು ಪ್ರಾಂಶುಪಾಲರಾದ ಚೆನ್ನಮ್ಮ ಪಿ. ವಂದಿಸಿ, ಉಪನ್ಯಾಸಕರಾದ ರಂಜಿತ್ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು.