ಕಡಬ : ಕುಟ್ರುಪ್ಪಾಡಿ ಗ್ರಾಮದ ಕೇಪು ಶ್ರೀ ಮಹಾಗಣಪತಿ ಲಕ್ಷ್ಮೀ ಜನಾರ್ದನ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ದಿನಾಂಕ 20 ಮತ್ತು 21 ಡಿಸೆಂಬರ್ 2025ರಂದು ನಡೆಯಲಿರುವ ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನಾಧ್ಯಕ್ಷರಾಗಿ ನೇತ್ರಾವತಿ ತುಳುಕೂಟ ರಾಮಕುಂಜ ಇದರ ಅಧ್ಯಕ್ಷರಾದ ಕೆ. ಸೇಸಪ್ಪ ರೈ ರಾಮಕುಂಜ ಇವರು ಆಯ್ಕೆಯಾಗಿದ್ದಾರೆ.
ರಾಮಕುಂಜ ಗ್ರಾಮದ ಬಾಂತೊಟ್ಟು ಎಂಬಲ್ಲಿ ಕೃಷಿ ಕುಟುಂಬದ ದಿ. ದೂಮಣ್ಣ ರೈ ಹಾಗೂ ದಿ. ಅಪ್ಪಿ ಹೆಂಗ್ಸು ಇವರ ಪುತ್ರರಾಗಿ 10 ಜೂನ್ 1947ರಲ್ಲಿ ಜನಿಸಿದ ಕೆ. ಸೇಸಪ್ಪ ರೈಯವರಿಗೆ ಈಗ 78ರ ಹರೆಯ. ಈ ಹರೆಯದಲ್ಲೂ ಸೇಸಪ್ಪ ರೈ ಇವರು ತುಳು ಸಂಸ್ಕೃತಿ, ಆಚಾರ-ವಿಚಾರವನ್ನು ನಾಡಿನಾದ್ಯಂತ ಪಸರಿಸುವಲ್ಲಿ ಶ್ರಮ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇವರನ್ನು ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ರಾಮಕುಂಜದಲ್ಲೇ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಕೆ. ಸೇಸಪ್ಪ ರೈ ಅವರು 1968ರಿಂದ 2005ರ ತನಕ ಸುಮಾರು 37 ವರ್ಷ ರಾಮಕುಂಜದ ಶ್ರೀ ರಾಮ ಕುಂಜೇಶ್ವರ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಕಳೆದ ಮೂರು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್‌ನ ಕಡಬ ತಾಲೂಕು ಘಟಕದ ಅಧ್ಯಕ್ಷರಾಗಿರುವ ಅವರು ಬಿಳಿನೆಲೆ ಹಾಗೂ ಕುಂತೂರಿನಲ್ಲಿ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆ. ಈ ಹಿಂದೆ ನಡೆದ ಎತ್ತಿನಹೊಳೆ ವಿರೋಧಿ ಹೋರಾಟ ಸಮಿತಿಯಲ್ಲೂ ತೊಡಗಿಕೊಂಡಿದ್ದರು.
