ಬೆಂಗಳೂರು : ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಕಾರ್ಯಾಚರಿಸುತ್ತಿರುವ ನೃತ್ಯಸಂಗಮ ಕಲಾಸಂಸ್ಥೆಯ ಹದಿನೈದನೇ ವರ್ಷದ ವಾರ್ಷಿಕೋತ್ಸವವು ದಿನಾಂಕ 07 ಸೆಪ್ಟೆಂಬರ್ 2025ರಂದು ಸಿ.ಎಮ್.ಆರ್.ಐ.ಟಿ. ಕಾಲೇಜಿನ ಸಭಾಂಗಣದಲ್ಲಿ ಗಣ್ಯರ ಸಮ್ಮುಖ ನಡೆಯಿತು. ನೃತ್ಯಸಂಗಮ ಕಲಾಸಂಸ್ಥೆಯ ನಿರ್ದೇಶಕಿ ವಿದುಷಿ ಸ್ನೇಹಲತಾ ಪ್ರಕಾಶ್ ಅವರ ಸಂಯೋಜನೆಯಲ್ಲಿ ಸುಮಾರು 100ಕ್ಕೂ ಮಿಕ್ಕಿ ವಿದ್ಯಾರ್ಥಿನಿಯರು ಶಾಸ್ತ್ರೀಯ ಭರತನಾಟ್ಯದ ಆಕರ್ಷಕ ನೃತ್ಯಬಂಧಗಳನ್ನು ಪ್ರದರ್ಶಿಸಿದರು.
ಇವುಗಳೊಂದಿಗೆ ಸಂಸ್ಥೆಯ ಹದಿನೈದನೇ ವಾರ್ಷಿಕೋತ್ಸವವನ್ನು ಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ನಾಡಿನ ಖ್ಯಾತ ರಂಗನಿರ್ದೇಶಕ ಕೀರ್ತಿಶೇಷ ಉದ್ಯಾವರ ಮಾಧವ ಆಚಾರ್ಯರ ನಿರ್ದೇಶನದ ಸಮೂಹ ಕಲಾಲಾಂಛನದ ‘ಕಾಡು ನಾಡು ಕಡಲಿನ ನಡುವೆ ಶಬರಿಗಾಯಿತು ಶ್ರೀ ರಾಮ ದರ್ಶನ’ ಎಂಬ ನೃತ್ಯನಾಟಕವನ್ನು ನಿರ್ಮಿಸಲಾಗಿತ್ತು. ವಿದುಷಿ ಸ್ನೇಹಲತಾ ಅವರ ಸುಮಾರು 25 ಸೀನಿಯರ/ವಿದ್ವತ್ ಹಂತದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಮಂಗಳೂರಿನ ನಾದನೃತ್ಯ ಕಲಾಸಂಸ್ಥೆಯ ನಿರ್ದೇಶಕಿ ಡಾ. ಭ್ರಮರಿ ಶಿವಪ್ರಕಾಶರು ಒಂದು ತಿಂಗಳ ಅವಧಿಯಲ್ಲಿ ರಂಗತರಬೇತಿ ನೀಡಿ ಈ ನೃತ್ಯನಾಟಕವನ್ನು ಸಂಯೋಜಿಸಿದ್ದರು.
ನೃತ್ಯನಾಟಕದ ರಂಗಕೃತಿಯನ್ನು ರಂಗನಿರ್ದೇಶಕ ಉದ್ಯಾವರ ಮಾಧವ ಆಚಾರ್ಯರೇ ವಿನೂತನವಾಗಿ ಪರಿಕಲ್ಪಿಸಿ ರಚಿಸಿದ್ದು, ಮೂಲ ವಾಲ್ಮೀಕಿ ರಾಮಾಯಣದ ವೃದ್ಧೆ ಶಬರಿಯ ಕಥೆಯನ್ನು ಇಲ್ಲಿ ವಿಭಿನ್ನ ದೃಷ್ಟಿಕೋನದಿಂದ ನೋಡಲಾಗಿದೆ. ಕಾಡಿನ ಬೇಡರೊಡೆಯನ ಮಗಳು ಭಕ್ತೆ ಶಬರಿಯ ಅಧ್ಯಾತ್ಮ ಜೀವನವು ವಿಕಸನಗೊಂಡ ರೀತಿಯನ್ನು ಶಬರಿಯ ಬಾಲ್ಯದಿಂದ ತೊಡಗಿ ವೃದ್ಧಾಪ್ಯದವರೆಗಿನ ಹಂತಗಳಲ್ಲಿ – ಅರಣ್ಯ ವಾಸಿಯಾದ ಆದಿ ಕವಿ ವಾಲ್ಮೀಕಿಯ ಕಥೆಯೊಂದಿಗೆ ಹಾಗೂ ಅಯೋಧ್ಯೆ ಎಂಬ ನಾಡಿನಲ್ಲಿ ಬೆಳೆದು ಕಾಡಿನಲ್ಲಿ ಅಲೆದಾಡಿದ ರಾಮನ ಕಥೆಯೊಂದಿಗೆ ಹೆಣೆದು ಚಿತ್ರೀಕರಿಸಿದ ಬಗೆಯು ಈ ನೃತ್ಯನಾಟಕದ ವೈಶಿಷ್ಟ್ಯವಾಗಿದೆ.
ಸುಮಾರು ಒಂದು ತಾಸಿನ ಅವಧಿಯ ನೃತ್ಯನಾಟಕವು ಅಭಿನಯಿಸಿದ ವಿದ್ಯಾರ್ಥಿಗಳಿಗೆ ಕಥಾನಕದ ಅರ್ಥ-ಭಾವ-ರಸಸೃಷ್ಟಿಯ ಪ್ರಕ್ರಿಯೆಯಲ್ಲಿ ತಲ್ಲೀನತೆಯ ಅನುಭವವನ್ನು ನೀಡಿದರೆ, ವೀಕ್ಷಿಸಿದ ಗಣ್ಯರಿಗೆ ಹಾಗೂ ಸಹೃದಯರಿಗೆ ರಸಾಸ್ವಾದನೆಗೆ ಅಗತ್ಯವಿರುವ ತಲ್ಲೀನತೆಯನ್ನು ಒದಗಿಸಿತು. ಕಾರ್ಯಕ್ರಮಕ್ಕೆ ವಿಶೇಷ ಅಭ್ಯಾಗತರಾಗಿ ಆಗಮಿಸಿದ್ದ ಖ್ಯಾತ ಸುಗಮ ಸಂಗೀತ ಕಲಾವಿದೆ ಡಾ. ಜಯಶ್ರೀ ಅರವಿಂದ್, ಪ್ರಸಿದ್ಧ ಸಂಗೀತ ನಿರ್ದೇಶಕ ಸಾಹಿತಿ ವಿ. ಮನೋಹರ್, ಸಿದ್ಧಿ ಸಮಾಧಿ ಯೋಗದ ಅಧ್ಯಾತ್ಮ ಗುರು ಶ್ರೀ ಶಿವಾನಂದಪ್ಪ, ರಂಗಕಿರಣವೇದಿಕೆಯ ಅಧ್ಯಕ್ಷೆ ಶ್ರೀಮತಿ ಭಾನುಮತಿ ಶೆಟ್ಟಿಗಾರ್, ಶ್ರೀವೀರಾಂಜನೇಯ ಸ್ವಾಮಿ ದೇವಸ್ಥಾನದ ವಿಶ್ವಸ್ಥರಾದ ಶ್ರೀ ಎಚ್.ಎನ್. ಶ್ರೀನಿವಾಸ್ ಸಹಿತ ನೆರೆದ ಸಹೃದಯರ ಮೆಚ್ಚುಗೆಗೆ ಪಾತ್ರವಾಯಿತು.
ವರದಿ : ಡಾ. ಭ್ರಮರಿ ಶಿವಪ್ರಕಾಶ್
ಚಿತ್ರ ಕೃಪೆ : ಐಫೊಟೋಗ್ರಫಿ