ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗವು, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಪುಸ್ತಕ ಪ್ರೀತಿ ಪರಿಚಯ ಸರಣಿ ಕಾರ್ಯಕ್ರಮದಲ್ಲಿ ತೃತೀಯ ಬಿ. ಸಿ. ಎ. ವಿದ್ಯಾರ್ಥಿನಿ ದಿವ್ಯಶ್ರೀ ಕೆ. ಎನ್. ಭಟ್ ಇವರು ಸಪ್ನ ಬುಕ್ ಹೌಸ್ ಬೆಂಗಳೂರು 2002ರಲ್ಲಿ ಮುದ್ರಿಸಿದ ಟಿ. ಆರ್. ಅನಂತರಾಮು ಇವರ ‘ಶಕ್ತಿ ಸಾರಥಿ ರಾಷ್ಟ್ರಪತಿ ಅಬ್ದುಲ್ ಕಲಾಂ’ ಎಂಬ ಪುಸ್ತಕವನ್ನು ಪರಿಚಯಿಸಿದರು.
120 ಪುಟಗಳ ಈ ಪುಸ್ತಕವು ಹದಿನಾಲ್ಕು ಲೇಖನಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಬಾನಾಡಿಗಳಂತೆ ಬಾನಿನಲ್ಲಿ ಹಾರಬೇಕೆಂದು ಬಯಸಿದ ಹುಡುಗ ಮುಂದೆ ತಂತ್ರಜ್ಞಾನದಿಂದ ನಮ್ಮ ಆಕಾಶವನ್ನು ಆಳಿದ ಕಥೆ, ನಮ್ಮ ಪ್ರಜಾಪ್ರಭುತ್ವದ ರಥಕ್ಕೇ ಸಾರಥಿಯಾದ ಕಥೆ, ಸೋಲನ್ನು ಅರಗಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಂಡ ಮಹಾನ್ ವ್ಯಕ್ತಿಯ ಜೀವನ ಚಿತ್ರಣ ಸುಂದರವಾಗಿ ಮೂಡಿಬಂದಿವೆ ಎಂದರು.
ಅಬ್ದುಲ್ ಕಲಾಂರವರು ತಮಿಳುನಾಡಿನ ರಾಮೇಶ್ವರಂನಲ್ಲಿ, 15-10-1937ರಂದು ಜನಿಸಿದರು. ತಂದೆ ಜೈನುಲಾಬ್ದಿನ್ ಮರಕಯಾರ್, ತಾಯಿ ಆಶಿಯಮ್ಮ. ಕಲಾಂ ಏಳು ಮಕ್ಕಳಲ್ಲಿ ಕೊನೆಯವರು. ತಂದೆ ದೋಣಿಗಳ ಮಾಲೀಕರಷ್ಟೇ ಅಲ್ಲ, ದೋಣಿಗಳನ್ನು ರೂಪಿಸುವುದರಲ್ಲೂ ಎತ್ತಿದ ಕೈ. ಇವರ ಆತ್ಮೀಯ ಗೆಳೆಯ ರಾಮೇಶ್ವರದ ಶಿವಾಲಯದ ಪ್ರಧಾನ ಅರ್ಚಕ ಪಕ್ಷಿ ಲಕ್ಷ್ಮಣ ಶಾಸ್ತ್ರಿಗಳ ಮಗ ರಾಮನಾಥ ಶಾಸ್ತ್ರಿ. ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಈ ಇಬ್ಬರು ಹುಡುಗರು ಒಂದೇ ಬೆಂಚಿನಲ್ಲಿ ಕುಳಿತಿದ್ದನ್ನು ಕಂಡು ಅಧ್ಯಾಪಕರು ಇದು ನಿಷಿದ್ದ ಎಂದು ಗುಡುಗಿ ಬೇರೆ ಬೇರೆ ಬೆಂಚಿನಲ್ಲಿ ಕೂಡುವಂತೆ ಮಾಡಿದಾಗ, ಕೋಪ ನೆತ್ತಿಗೇರಿದ ಪಕ್ಷಿ ಲಕ್ಷ್ಮಣ ಶಾಸ್ತ್ರಿ ದಡದಡನೆ ಶಾಲೆಗೆ ಬಂದು ಆ ಅಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡು ಇನ್ನೆಂದೂ ಇಂಥ ಭೇದಭಾವವನ್ನು ಶಾಲೆಯಲ್ಲಿ ನಡೆಸಬಾರದೆಂದು ಎಚ್ಚರಿಸಿ ಹೋಗಿದ್ದರು. ಇಂಥಹ ವಾತಾವರಣದಲ್ಲಿ ಬೆಳೆದವರು ಕಲಾಂ. ಕಲಾಂರ ಅಪ್ಪ ಕಲಾಂರವರ ಮೇಲೆ ಬಂಡವಾಳವನ್ನು ಹೂಡಿರಲಿಲ್ಲ. ಬದಲಿಗೆ ಭರವಸೆಯನ್ನು ಹೂಡಿದ್ದರು. ಮಗ ಕಲೆಕ್ಟರ್ ಆಗಬೇಕೆಂಬ ಹೆಬ್ಬಯಕೆ ತಂದೆಯದು. ಕಲಾಂರವರ ಜೀವನದಲ್ಲಿ ಪ್ರಭಾವ ಬೀರಿದ ವ್ಯಕ್ತಿ ಎಂದರೆ ಅವರ ಅಕ್ಕನ ಗಂಡ ಜಲ್ಲಾಲುದ್ದೀನ್. ಆಗಿನ ವಿದ್ಯಾವಂತರನ್ನು, ವೈಜ್ಞಾನಿಕ ಅನ್ವೇಷಣೆಯನ್ನು, ಸಮಕಾಲೀನ ಸಾಹಿತ್ಯವನ್ನು ಕುರಿತು ಅಷ್ಟೇ ಏಕೆ ವೈದ್ಯ ಕ್ಷೇತ್ರದಲ್ಲಾಗುತ್ತಿದ್ದ ಪ್ರಗತಿ ಕುರಿತು ಬಾಲಕ ಕಲಾಂರವರಿಗೆ ಹೇಳುತ್ತಿದ್ದರು. ಕಲಾಂ ಮಟ್ಟಿಗೆ ಜಲ್ಲಾಲುದ್ದೀನ್ ತೋರಿಸಿದ ವಿಶ್ವರೂಪ ಮುಂದೆ ಬದುಕನ್ನು ಧೈರ್ಯವಾಗಿ ಎದುರಿಸಲು ಹೆಬ್ಬಾಗಿಲಾಯಿತು. ತತ್ರಾಪಿ ದೋಣಿಗಳನ್ನು ತಯಾರಿಸುತ್ತಿದ್ದ ಪರಿಸರದಲ್ಲಿ ಜ್ಞಾನದೋಣಿಯಲ್ಲಿ ತೇಲಲು ಕಲಾಂ ರವರಿಗೆ, ಸ್ಥಳಿಕ, ಕ್ರಾಂತಿಕಾರಿ, ಉಗ್ರ ರಾಷ್ಟ್ರೀಯವಾದಿ ಎಸ್. ಟಿ. ಆರ್ ಮಾಣಿಕಂ ಇವರ ಪುಸ್ತಕ ಭಂಡಾರ ಸಹಾಯಮಾಡಿತು. ರಾಮೇಶ್ವರದಲ್ಲಿ ಮನೆಮನೆಗೆ ಪೇಪರ್ ಹಾಕುತ್ತಿದ್ದ ಹಾಗೂ ಸುದ್ದಿ ಪತ್ರಿಕೆ ಮಾರುತ್ತಿದ್ದ ಹುಡುಗ ಪತ್ರಿಕೆಯ ಸುದ್ದಿಗೇ ಮೂಲವಾಗಿದ್ದ. ಕಲಾಂ ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಸಂದರ್ಭದಲ್ಲಿ ಮಾಣಿಕಂಗೆ ಪಡ್ಡೆ ಹುಡುಗ ಕಲಾಂ ಆ ದಿನಗಳಲ್ಲಿ ಸಿಕ್ಕ ಸಿಕ್ಕದ್ದನ್ನೆಲ್ಲ ಗಬಗಬನೆ ಓದುತ್ತಿದ್ದ ಚಿತ್ರ ಕಣ್ಣ ಮುಂದೆ ಸುಳಿದು ಎದೆ ಉಬ್ಬಿ ಬಂದಿತ್ತು. ಎತ್ತಣ ಗಲ್ಲಿ, ಎತ್ತಣ ರತ್ನ? “ನಿಮ್ಮ ಪುಸ್ತಕ ಭಂಡಾರ ನನ್ನ ಬದುಕಿನ ಒಳ ಜಗತ್ತನ್ನೇ ತೆರೆಯಿತು” ಎಂದು ಕಲಾಂ ಪೋಸ್ಟ ಕಾರ್ಡ್ ಬರೆದುದನ್ನು ಮಾಣಿಕಂ ಮಾಣಿಕ್ಯದಂತೆ ಕಾಪಾಡಿಕೊಂಡಿದ್ದಾರೆ.
ಕಲಾಂರವರ ಜೀವನದಲ್ಲಿ ಪ್ರಭಾವ ಬೀರಿದ ಮತ್ತೊಬ್ಬ ವ್ಯಕ್ತಿಯೆಂದರೆ ರಾಮನಾಥಪುರದ ಶಾಲೆಯ ಅಧ್ಯಾಪಕ ಅಯೈದೊರೈ ಸಾಲೋಮನ್. ಯಶಸ್ಸು ಗಳಿಸಲು ಆಸೆಯಿರಬೇಕು, ನಂಬಿಕೆಯಿರಬೇಕು ಹಾಗೂ ನಿರೀಕ್ಷೆಯಿರಬೇಕು ಎಂದು ಆಗಾಗ ಹೇಳುತ್ತಿದ್ದ ಮಾತು ಕಲಾಂ ಮಟ್ಟಿಗೆ ಎಷ್ಟು ನಿಜವಾಯಿತೆಂದರೆ ಚಿಕ್ಕಂದಿನಲ್ಲೇ ಆಗಸದತ್ತ ರೆಕ್ಕೆ ಬಡಿದು ಹಾರುತ್ತಿದ್ದ ಪಕ್ಷಿಗಳನ್ನು ನೋಡಿ ಒಂದು ದಿನ ತಾನೂ ಕೂಡ ಹೀಗೆ ಆಕಾಶಕ್ಕೆ ಹಾರಬಹುದೆ? ಎಂಬ ಕಲ್ಪನೆಯಲ್ಲಿ ಮುಳುಗಿ ತೇಲುತ್ತಿದ್ದ ಕಲಾಂ, ಮುಂದೆ ಕ್ಷಿಪಣಿಗಳನ್ನು ಹಾರಿಸಿ ಭಾರತದ ಹೆಸರನ್ನು ನಭದಲ್ಲೂ ಬರೆದರು.
ಕಲಾಂ ಅವರಿಗೆ ಮದ್ರಾಸಿನ ಎಂ. ಐ. ಟಿ ಯಲ್ಲಿ, ಏರೋನಾಟಿಕಲ್ ಇಂಜಿನಿಯರಿಂಗ್ ಸೇರಲು ಅಕ್ಕ ಜೋಹರ ತನ್ನ ಚಿನ್ನದ ಬಳೆ ಮತ್ತು ಸರ ಕೊಟ್ಟಳು. ಮದ್ರಾಸಿನ ಎಂ. ಐ. ಟಿ. ನಂತರ ಕಲಾಂ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕಲ್ ಸಂಸ್ಥೆಗೆ ಬಂದು ಹೆಚ್ಚಿನ ತರಬೇತಿ ಪಡೆದರು. ಅವರೆಲ್ಲೇ ಹೋದರೂ ಅವರ ಬುದ್ಧಿಮತ್ತೆಗೆ ತಲೆಬಾಗದ ಅಧ್ಯಾಪಕರಿರಲಿಲ್ಲ. ಕಲಾಂ ವಿದ್ಯಾಭ್ಯಾಸ ಮುಗಿಸಿ, ಪೈಲೆಟ್ ಆಗಬೇಕೆಂದು ರೈಲು ಪ್ರಯಾಣ ಮಾಡಿ ದೆಹಲಿಗೆ ಬಂದರು. ಆದರೆ ಅದು ಅವರ ಬೌದ್ಧಿಕ ಮಟ್ಟಕ್ಕೆ ತಕ್ಕುದಲ್ಲ ಎನಿಸಿತು. ಅನಂತರ ಡೆಹರಾಡೂನಿಗೆ ವಾಯುದಳದ ಪೈಲೆಟ್ ಹುದ್ದೆಗೆ ಸಂದರ್ಶನಕ್ಕೆ ಬಂದರು. ಆದರೆ ಅಲ್ಲಿ ಒತ್ತು ಕೊಟ್ಟಿದ್ದು ಶರೀರ ಸಾಮರ್ಥ್ಯಕ್ಕೆ, ಕಲಾಂ ಹತಾಶೆಗೊಂಡು ಸೀದಾ ಹೃಷಿಕೇಶಕ್ಕೆ ಬಂದು ಸ್ವಾಮಿ ಶಿವಾನಂದರ ಎದುರು ಎದೆ ಬರಿದುಮಾಡಿಕೊಂಡರು. ಬಾಲ್ಯದ ಕನಸು ಹೇಗೆ ನುಚ್ಚು ನೂರಾಯಿತು, ವಾಯುದಳಕ್ಕೆ ಸೇರಬೇಕೆಂಬ ಇಚ್ಛೆ ಹೇಗೆ ಮುರಿದುಬಿತ್ತೆಂದು ಕಲಾಂ ವಿವರಿಸಿದಾಗ, ಸ್ವಾಮಿ ಶಿವಾನಂದರು ಎಲ್ಲವನ್ನೂ ಆಲಿಸಿ, “ನೀನೇನಾಗಬೇಕೆಂಬುದು ಆಗಲೇ ಪೂರ್ವ ನಿರ್ಧಾರಿತವಾಗಿದೆ, ಆ ಗುರಿ ಸಾಧಿಸಲು ಮುಂದೆ ಹೋಗು, ವಾಯು ದಳದ ಪೈಲೆಟ್ ಆಗುವ ಯೋಗ ಇಲ್ಲವೆಂದ ಮೇಲೆ ಇನ್ನೇನೋ ಇದೆ ಎನ್ನುವುದು ಸ್ಪಷ್ಟ. ಈಗಿನ ತತ್ಕಾಲದ ವೈಫಲ್ಯವನ್ನು ಮರೆತುಬಿಡು ಮುಂದಿನ ಗುರಿ ಸಾಧಿಸಲು ಅದು ಅತ್ಯವಶ್ಯಕ. ನಿನ್ನ ಆಸ್ತಿತ್ವ ನೈಜ ಉದ್ದೇಶ ಏನೆನ್ನುವುದನ್ನು ಹುಡುಕು ಹೋಗು ಮಗೂ, ನಿನ್ನಲ್ಲಿ ನೀನು ಲೀನವಾಗು, ದೇವರ ಇಚ್ಛೆಗೆ ಶರಣಾಗು.” ಸ್ವಾಮೀಜಿಯವರ ಈ ನುಡಿಗಳು ಕಲಾಂ ಅವರ ನೊಂದ ಎದೆಗೆ ತಂಗಾಳಿ ಬೀಸಿದಂತಾಯಿತು. 1960ರಲ್ಲಿ ಡಿ. ಆರ್. ಡಿ. ಒ. ದ ಏರೋನಾಟಿಕಲ್ ಅಭಿವೃದ್ಧಿ ಸ್ಥಾಪನೆಯಲ್ಲಿ ವಿಜ್ಞಾನಿಯಾಗಿ ಸೇರಿಕೊಂಡರು. 1969ರಲ್ಲಿ ಇಸ್ರೋಗೆ ವರ್ಗಾಯಿಸಲಾಯಿತು. ಅಲ್ಲಿ ಅವರು ಮಾಡಿದ ಸಾಧನೆ ಅಪಾರ.
ಭಾರತವನ್ನು ಪರಮಾಣು ಶಕ್ತಿಯಲ್ಲಿ ಬಲಾಡ್ಯವನ್ನಾಗಿ ಮಾಡುವುದರಲ್ಲಿ ಕಲಾಂರವರ ಪಾತ್ರ ಗಣನೀಯ. ನಂತರ ಕಲಾಂ 1992ರಿಂದ 1998ರ ತನಕ ಪ್ರಧಾನ ಮಂತ್ರಿಗಳ ಮುಖ್ಯ ವೈಜ್ಞಾನಿಕ ಸಲಹೆಗಾರರಾದರು. 2002ರಲ್ಲಿ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಐದು ವರ್ಷಗಳ ಅವಧಿ ಪೂರೈಸಿದ ನಂತರ ಅವರು ಶಿಕ್ಷಣ, ಬರವಣಿಗೆ ಮತ್ತು ಸಾರ್ವಜನಿಕ ಸೇವೆಯ ಜೀವನಕ್ಕೆ ಮರಳಿದರು. ಅವರು ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಬ್ದುಲ್ ಕಲಾಂ ರಿಗೆ 1988ರಲ್ಲಿ ದೆಹಲಿಯಲ್ಲಿ ಭಾರತರತ್ನ ನೀಡಿ ಗೌರವಿಸಿದಾಗ ಕಲಾಂ ಹುಟ್ಟಿದ ಮನೆ ನೆಹರೂ ಮನೆತನದ ಆನಂದ ಭವನದ ತರಹವೇ ಅಥವಾ ಮಧ್ಯಮ ವರ್ಗದ ತಾರಸಿ ಮನೆ ಇರಬಹುದೇ ಎಂಬ ಕುತೂಹಲದಿಂದ ಬಂದ ಪತ್ರಕರ್ತರ ಹಿಂಡನ್ನು ಸ್ವಾಗತಿಸಿದ್ದು ಗಾರೆ ಕಿತ್ತು ಬಂದು ಅರೆಬತ್ತಲೆಯಾಗಿದ್ದ ಮನೆ.
ಅಬ್ದುಲ್ ಕಲಾಂರನ್ನು “ಮಿಸೈಲ್ ಮ್ಯಾನ್ ಆಫ್ ಇಂಡಿಯ” ಎಂದು ಕರೆಯುತ್ತಾರೆ. ಕಲಾಂ ಎಷ್ಟು ಸರಳ ಮತ್ತು ಸ್ನೇಹ ಜೀವಿ, ಮಾನವೀಯ ಗುಣಗಳ ಆಗರ, ಔದಾರ್ಯದ ಖನಿ, ಅಸಾದ್ಯ ತಾಳ್ಮೆ ಉಳ್ಳವರು, ಅವರೊಬ್ಬ ಅಜಾತ ಶತ್ರು, ಇಷ್ಟೆಲ್ಲಾ ನಮಗೆ ಗೊತ್ತೇ ಇದೆ. ಆದರೆ ಅವರ ಬಗ್ಗೆ ಇರುವ ಅಭಿಮಾನ ಇಮ್ಮಡಿ, ಮುಮ್ಮಡಿ ಆಗುವುದು ಅವರ ಕೆಲವು ಘಟನೆಗಳನ್ನು ಕೇಳಿದಾಗ.
1988ರ ಮಾತು ಇಲಾಖೆಗೆ ಸಂಬಂಧಿಸಿದ ಬಗ್ಗೆ ಒಂದು ಸಭೆ ನಡೆಯುತ್ತಾ ಇತ್ತು. ಊಟದ ಸಮುಯ ಆಗ್ತಾ ಇದ್ದ ಹಾಗೆ ಎಲ್ಲರ ಕಣ್ಣೂ ಗಡಿಯಾರದ ಮೇಲೆ ಕೇಂದ್ರೀಕೃತವಾಗಿತ್ತು. ಅಷ್ಟು ಹೊತ್ತಿಗೆ ಅಲ್ಲಿಗೆ ಬಂದರು ಕಲಾಂ. ಅವರ ಸೌಮ್ಯ ಮುಖ ನೋಡಿಯೇ ಊಟಕ್ಕೆ ಹೊರಟವರು ಹಿಂತಿರುಗಿ ಬಂದು ಕುಳಿತುಕೊಂಡರು. ಸಭೆ ಮುಕ್ತಾಯದ ಘಟ್ಟಕ್ಕೆ ಬಂದಾಗ, ಕಲಾಂ ಅವರು ತಮ್ಮ ಕೈಯಲ್ಲಿದ್ದ ದಿನಪತ್ರಿಕೆಯನ್ನು ಪೃಥ್ವಿ ಕ್ಷಿಪಣಿ ಯೋಜನೆಯ ಉಪನಿರ್ದೇಶಕ ಸಾರಸ್ವತ ಅವರಿಗೆ ತೋರಿಸಿದರು. ಅದರಲ್ಲಿ ಸಿಕಂದರಾಬಾದಿನ ಹತ್ತು ವರ್ಷದ ಶಾಲಾ ಬಾಲಕಿಯೊಬ್ಬಳು ತಯಾರಿಸಿದ್ದ ಪೃಥ್ವಿ ಕ್ಷಿಪಣಿಯ ಪುಟ್ಟ ಮಾದರಿಯ ಚಿತ್ರವಿತ್ತು. ಆಗ ಸಾರಸ್ವತರು ಆ ಹುಡುಗಿ ಕ್ಷಿಪಣಿಯ ಆಕಾರ, ಗಾತ್ರದ ಕುರಿತು ಒಂದಷ್ಟು ವಿವರಣೆ ತನ್ನ ಬಳಿ ಕೇಳಿದ್ದನ್ನು ಹೇಳಿದಾಗ, ಕಲಾಂರವರು ನೈಜ ಕ್ಷಿಪಣಿಯನ್ನು ನೋಡಲು ಪ್ರಯೋಗಾಲಯಕ್ಕೇ ಕರೆಸಿದ್ದಲ್ಲದೇ, ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದ ತಂತ್ರಜ್ಞರ ಜತೆ ಸಹಭೋಜನ. ಅಲ್ಲದೇ ಕಲಾಂರವರು ತಮ್ಮ ಮೀಟಿಂಗಿನ ಮಧ್ಯೆ ನಿನ್ನ ಸ್ಕೂಲು ಯಾವುದು? ನಿಮ್ಮ ತಂದೆ ಏನು ಮಾಡುತ್ತಿದ್ದಾರೆ? ನಿನ್ನ ಹವ್ಯಾಸಗಳೇನು? ಎಂದು ಕೇಳಿದಾಗ ಆ ಹುಡುಗಿ ಈ ಪೃಥ್ವಿಯಲ್ಲಂತೂ ಇರಲಿಲ್ಲ.
ನಿಜ, ಕಲಾಂ ಅವರ ತಾಂತ್ರಿಕ ಜೀವನದ ವಿಸ್ತೃತ ಅವಧಿಯಲ್ಲಿ ಇಂಥ ಔದಾರ್ಯದ ಕ್ಷಣಗಳೆಷ್ಟೋ. ಅವರಿಗೆ ಅದು ನೆನಪಿರಲಾರದು, ಆದರೆ ಆತಿಥ್ಯ ಸ್ವೀಕರಿಸಿದವರಿಗೆ? ಬದುಕಿನ ಸುವರ್ಣ ಕ್ಷಣಗಳೆಂದರೆ ಇಂಥವೆ. ಎದೆಯನ್ನೇ ಗೋದಾಮು ಮಾಡಿ, ಇಂಥ ಗಳಿಗೆಗಳನ್ನು ಬಚ್ಚಿಟ್ಟು, ಕಾಲ ಸರಿದಂತೆ ಎದೆಯಿಂದ ಅವನ್ನು ಮೇಲೆತ್ತಿ ಎಳೆಎಳೆಯಾಗಿ ಮೆಲ್ಲುವುದು ಯಾರಿಗೆ ಬೇಡ? ಅಂಥ ಗಳಿಗೆ ಎದುರಾಗಬೇಕಷ್ಟೇ.
ಕಲಾಂ ಅರ್ಥವಾಗುವುದಾದರೂ ಹೇಗೆ? ಈ ಕುರಿತು ಒಂದು ಪ್ರಸಂಗ ಹೀಗಿದೆ – ಕಲಾಂ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿ ಎಂದು ತಿಳಿದ ನಂತರ ಪತ್ರಕರ್ತರು ಜೆನ್ನೊಣದಂತೆ ಮುತ್ತಿದ್ದರು. ಇದು ಅವರಿಗೆ ಹೊಸದೇನೂ ಅಲ್ಲ. ಅವರ ಮಟ್ಟಿಗೆ ಇದೂ ಒಂದು ಶಿಷ್ಯ ಕೋಟಿಯ ತುಕುಡಿ. ಅಲ್ಲೂ ಮೇಷ್ಟ್ರುಗಿರಿ. “ನೀವೆಲ್ಲಾ ಗಮನವಿಟ್ಟು ಕೇಳಬೇಕಾದ ಒಂದು ಮಾತಿದೆ. ಇದುವರೆಗೆ ಏನಾಗಿದೆಯೋ ಅದೆಲ್ಲ ಒಳ್ಳೆಯದಕ್ಕೇ, ಈಗ ಆಗುತ್ತಿರುವುದು ಒಳ್ಳೆಯದಕ್ಕಾಗಿಯೇ ಮತ್ತೇ ಮುಂದೆ ಏನಾಗಲಿರುವುದೋ ಅದೂ ಒಳ್ಳೆಯದಕ್ಕಾಗಿಯೇ, ಅರ್ಥವಾಯಿತೇ?’ ಎಂದು ನಾಲ್ಕಾರು ಬಾರಿ ಶಾಲಾ ಮಕ್ಕಳನ್ನು ಕೇಳುವಂತೆ ಕೇಳಿ. ಧಾರಾಳವಾಗಿ ಭಗವದ್ಗೀತೆಯ ಪ್ರಖ್ಯಾತ ಸಾಲುಗಳನ್ನು ಹೇಳಿದರು. ಪತ್ರಕರ್ತರೂ ತಲೆಯಾಡಿಸಿದರು. ಆದರೂ ಕಲಾಂ ಬಿಡಲಿಲ್ಲ. ಈಗ ನಾನು ಹೇಳುವುದನ್ನು ಎಲ್ಲರೂ ಕೋರಸ್ ನಲ್ಲಿ ಹೇಳಿ : “ವ್ಯಕ್ತಿಗಿಂತ ರಾಷ್ಟ್ರ ದೊಡ್ಡದು, ವ್ಯಕ್ತಿಗಿಂತ …” ಎಂದು ವಾಕ್ಯ ಮುಗಿಸುವ ಮುನ್ನವೆ ಪತ್ರಕರ್ತರು ಕೋರಸ್ ನಲ್ಲಿ “ರಾಷ್ಟ್ರ ದೊಡ್ಡದು” ಎಂದು ತಾರಕದಲ್ಲಿ ಹೇಳಿದಾಗ ಪತ್ರಕರ್ತರಿಗೂ ಹೊಸ ಅನುಭವ.
ರಾಷ್ಟ್ರಪತಿ ಹುದ್ದೆಗೆ ಕಲಾಂ ಕನಸು ಕಂಡವರಲ್ಲ. ಭಾರತದ ಮಿಲಿಟರಿ ತಂತ್ರಜ್ಞಾನವನ್ನು ಆಗಸದುದ್ದಕ್ಕೂ ಏರಿಸಬೇಕೆಂಬುದು ಅವರ ನಿತ್ಯ ಮಂತ್ರ. ದೇಶದುದ್ದಕ್ಕೂ ಕೊನೆಯ ಪಕ್ಷ ಒಂದು ಲಕ್ಷ ಮಂದಿ ವಿದ್ಯಾರ್ಥಿಗಳಿಗೆ ತಾಂತ್ರಿಕ ದೀಕ್ಷೆ ಕೊಡುವ ಹಂಬಲ ಕಲಾಂ ಅವರದು. ತಾಳೆಗರಿಯಲ್ಲಿ ಅವಿತು ಕುಳಿತಿದ್ದ ಅಮೂಲ್ಯ ಜ್ಞಾನ ಸಂಪತ್ತನ್ನು ಡಿಜಿಟಲ್ ರೂಪಕ್ಕೆ ಇಳಿಸಿ ಜ್ಞಾನ ಭಂಡಾರವನ್ನು ಒಡೆಯುವಾಸೆ ಮತ್ತು ಅನಾವರಣ ಮಾಡಿದ ಜ್ಞಾನ ಸಂಪತ್ತನ್ನು ಇಂಟರ್ ನೆಟ್ ಮೂಲಕ ಹಂಚುವ ಕನಸು. ಮಿಲಿಟರಿ ಸಾಧನ, ಸಾಮಗ್ರಿಗಳಿಗೆ ಬಳಸುವ ಅವೇ ವಸ್ತುಗಳನ್ನು, ರೋಗಗ್ರಸ್ತ ದೀನದಲಿತರ ನಿತ್ಯ ಬದುಕಿಗೇಕೆ ಬಳಸಬಾರದು? ಇಂತಹ ತಹತಹ ಮನದಾಳದಲ್ಲಿ ಇಟ್ಟುಕೊಂಡು ಪೋಲಿಯೊ ಪೀಡಿತರಿಗೆ ಕಾರ್ಬನ್ ಸಮ್ಮಿಶ್ರದ ಕ್ಲಿಪರ್ ಮತ್ತು ಇಂತದೇ ವಸ್ತು ಬಳಸಿ ಹೃದ್ರೋಗಿಗಳಿಗೆ ಪೇಸ್ ಮೇಕರ್ ತಯಾರಿಸುವುದು ಇಂತಹ ಯೋಜನೆಗಳು ಬದುಕನ್ನು ಪ್ರೀತಿಸುವವರನ್ನು ಹಾಗೂ ಪ್ರೀತಿಯಿಂದ ವಂಚಿತರಾದವರನ್ನು ಸದಾ ಸೆಳೆಯುತ್ತದೆ.
ಗಾಂಧೀಜೀಯವರ ನುಡಿಯನ್ನು ಅಕ್ಷರಶಃ ಬದುಕಿನಲ್ಲಿ ಅನ್ವಯಿಸಿ ಸಾರ್ಥಕತೆ ಕಂಡ ಜೀವ ಕಲಾಂ ಅವರದ್ದು. ಎಲ್ಲೂ ಪ್ರಚಾರವಿಲ್ಲ, ಅಬ್ಬರವಿಲ್ಲ, ಆರ್ಭಟವಿಲ್ಲ. ಎಲ್ಲವೂ ಸ್ವಗತ. ಸ್ವಗತದಲ್ಲಿ ಮನನವಾದ ಸಂಗತಿಗಳಿಗೆ ಹೆಚ್ಚಿನ ಅರ್ಥವಿದೆ, ಸಮಾಜದಲ್ಲಿ ಅವುಗಳಿಗೆ ಎಂದೂ ಸ್ವಾಗತ. ಕಲಾಂ ಈ ಪೈಕಿಯ ಮಂದಿ. ಕಾಲ ಅಳಿಸಲೂ ಅಳುಕುವ ಅವರ ಹೆಜ್ಜೆ ಗುರುತುಗಳು, ಅವರು ಸವೆಸಿದ ದೀರ್ಘದಾರಿ ಅಲ್ಲದೇ ಸಹೋದರರಿಗೆ ನೆರವಾಗಲೆಂದು ವೃತ್ತ ಪತ್ರಿಕೆ ಮಾರಿದವನ ಕಥೆ, ಶಿವಸುಬ್ರಮಣಿಯ ಅಯ್ಯರ್ ಮತ್ತು ಅಯ್ಯಾದೊರೆ ಸಾಲೋಮನ್ ಮೇಸ್ಟರಿಂದ ರೂಪುಗೊಂಡ ಶಿಷ್ಯನ ಕಥೆ, ಪಾಂದಲೈ ಮೇಸ್ಟರಿಂದ ಪಾಠ ಹೇಳಿಸಿಕೊಂಡ ಹುಡುಗನ ಕಥೆ, ಎಂ. ಜಿ. ಕೆ. ಮೆನನ್ ಅವರ ಕಣ್ಣಿಗೆ ಬಿದ್ದ ಇಂಜಿನಿಯರ್‌ನ ಕಥೆ, ಬದುಕಿದ್ದಾಗಲೇ ದಂತಕಥೆಯಾಗಿದ್ದ ಧೀಮಂತ ವಿಕ್ರಂ ಸಾರಾಭಾಯಿ ಅವರ ಗರಡಿಯಲ್ಲಿ ಪಳಗಿದವನೊಬ್ಬನ ಕಥೆ. ವೃತ್ತಿ ಜೀವನದಲ್ಲಿ ಅರ್ಪಣಾ ಮನೋಭಾವದ ಮಹಾ ಮೇಧಾವಿಗಳ ಬೆಂಬಲ ಪಡೆದು ಮುಂದೆ ಬಂದವನ ಕಥೆ ಎಲ್ಲವನ್ನೂ ಲೇಖಕ ಟಿ. ಆರ್. ಅನಂತರಾಮು ಈ ಕೃತಿಯಲ್ಲಿ ಸೊಗಸಾಗಿ ವಿವರಿಸಿದ್ದಾರೆ. ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ “ಶಕ್ತಿಸಾರಥಿ ರಾಷ್ಟ್ರಪತಿ ಅಬ್ದುಲ್ ಕಲಾಂ”.
ದಿವ್ಯಶ್ರೀ ಕೆ. ಎನ್. ಭಟ್.
ತೃತೀಯ ಬಿ. ಸಿ. ಎ,
ಗೋವಿಂದ ದಾಸ ಕಾಲೇಜು ಸುರತ್ಕಲ್.