ಹುಬ್ಬಳ್ಳಿ : ಮಂಗಳೂರಿನ ಕಿಶೋರ್ ಡಿ. ಶೆಟ್ಟಿ ನೇತೃತ್ವದ ಶ್ರೀ ಲಲಿತೆ ತಂಡದವರು ಹುಬ್ಬಳ್ಳಿಯ ಸಾವಾಯಿ ಗಂಧರ್ವ ಸಭಾ ಭವನದಲ್ಲಿ ದಿನಾಂಕ 13 ಡಿಸೆಂಬರ್ 2025ರಂದು ಪ್ರದರ್ಶಿಸಿದ ‘ಶನಿ ಮಹಾತ್ಮೆ’ ಕನ್ನಡ ಪೌರಾಣಿಕ ನಾಟಕವು ಪ್ರೇಕ್ಷಕರನ್ನು ಬೆರಗುಗೊಳಿಸಿತು.
ಹುಬ್ಬಳ್ಳಿಯ ಶನಿ ಪೂಜಾ ಸೇವಾ ಸಮಿತಿಯವರು ಸಾಮೂಹಿಕ ಶನಿ ಪೂಜೆ ನಡೆಸಿ ಶನಿ ದೇವರ ಕಥೆಯನ್ನು ನಾಟಕದ ಮೂಲಕ ಪ್ರಸ್ತುತಿ ಗೈದರು. ಶನಿ ಜನ್ಮ, ಶನಿ ಪ್ರಭಾವವನ್ನು ಬೇರೆ ಬೇರೆ ಯುಗಗಳಲ್ಲಿ ತೋರುವ ನವ ರಸ ಭರಿತ ಕಥಾ ವಸ್ತುವನ್ನು ಹೊಂದಿದ ಕದ್ರಿ ನವನೀತ ಶೆಟ್ಟಿ ಇವರು ರಚಿಸಿದ ಈ ನಾಟಕದ 48ನೇ ಪ್ರದರ್ಶನ ಇದಾಗಿದೆ.
ಅದ್ದೂರಿ ಸಂಪ್ರದಾಯಿಕ ರಂಗ ವಿನ್ಯಾಸ, ಆಧುನಿಕ ಬೆಳಕಿನ ವಿನ್ಯಾಸ, ಪೂರ್ವ ಮುದ್ರಿತ ಧ್ವನಿ, ಸೊಗಸಾದ ವೇಷ ಭೂಷಣ, ಹಿತ ಮಿತ ಸಂಗೀತ, ಪ್ರಬುದ್ಧ ಕಲಾವಿದರ ಭಾವ ಪೂರ್ಣ ಅಭಿನಯಗಳೊಂದಿಗೆ ಅಚ್ಚುಕಟ್ಟಾಗಿ ಪ್ರದರ್ಶನಗೊಂಡ ನಾಟಕವನ್ನು ಪ್ರೇಕ್ಷಕರು ಭಕ್ತಿ ಭಾವದಿಂದ ಆಸ್ವಾದಿಸಿದರು. ಇದೇ ಸಂದರ್ಭದಲ್ಲಿ ನಾಟಕ ರಚನೆ ಮಾಡಿದ ಬಹು ಮುಖ ಪ್ರತಿಭೆಯ ಕಲಾವಿದ ಕದ್ರಿ ನವನೀತ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಉದ್ಯಮಿಗಳಾದ ರಮೇಶ್ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಅರ್ಚಕ ಅಕ್ಷಯ ಉಡುಪ ಅತಿಥಿಗಳಾಗಿ ಪಾಲ್ಗೊಂಡರು. ಶನಿ ಪೂಜಾ ಸಮಿತಿಯ ಸತೀಶ್ ಡಿ. ಶೆಟ್ಟಿಯವರು ಅಭಿನಂದಿಸಿದರು. ಸಮಿತಿಯ ಪ್ರಧಾನರಾದ ಅನಂತ ಪದ್ಮನಾಭ ಐತಾಳ್, ಕೃಷ್ಣ ಶೆಟ್ಟಿ, ರಮಾನಂದ ಶೆಟ್ಟಿ, ವಿವೇಕ್ ಪೂಜಾರಿ ಉಪಸ್ಥಿತರಿದ್ದರು. ಶ್ರೀ ಲಲಿತೆ ತಂಡದ ಯಜಮಾನ ಕಿಶೋರ್ ಡಿ. ಶೆಟ್ಟಿ, ನಾಟಕ ನಿರ್ದೇಶಕ ಜೀವನ್ ಉಳ್ಳಾಲ್, ಪ್ರಸರಣ ಸಂಯೋಜಕ ಪ್ರದೀಪ್ ಆಳ್ವ ಕದ್ರಿ ಅವರನ್ನು ಗೌರವಿಸಲಾಯಿತು.

