ಪುತ್ತೂರು : ಪುತ್ತೂರು ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ಕನ್ನಡ ಸಂಘ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ಸಿದ್ಧಮೂಲೆ ಶಂಕರನಾರಾಯಣ ಭಟ್ ಸ್ಥಾಪಿತ ‘ಶಂಕರ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ ಹಾಗೂ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ ಎಂ. ಅವರ ‘ತಿರಿ’ ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ದಿನಾಂಕ : 05-07-2023 ರಂದು ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ.ಎಂ. ಕೃಷ್ಣ ಭಟ್ ಮಾತನಾಡುತ್ತಾ “ಭಾಷೆಯು ಸಾಹಿತ್ಯದ ಲಿಖಿತ ಮಾಧ್ಯಮವಾಗಿದೆ. ಎಲ್ಲಾ ಭಾಷೆಯು ಒಂದೇ ರೀತಿಯ ಆಯಾಮವನ್ನು ಹೊಂದಿಲ್ಲ. ಇದನ್ನು ಜಗತ್ತಿಗೆ ಪರಿಚಯಿಸುವುದು ಮಹತ್ತರ ತೆರೆಯ ಕೆಲಸವಾಗಿದೆ. ಶ್ರಮಪಟ್ಟು ಮಾಡಿದ ಕೆಲಸಕ್ಕೆ ಜೀವನದುದ್ದಕ್ಕೂ ಯಶಸ್ಸನ್ನು ಪಡೆಯಲು ಅನೇಕ ದಾರಿಗಳು ಸಿಗುತ್ತವೆ ಮತ್ತು ಇವು ನೆನಪುಗಳೊಂದಿಗೆ ಸಮೀಕರಿಸುತ್ತವೆ. ‘ತಿರಿ’ ಎಂಬ ಪುಸ್ತಕದಲ್ಲಿ ಮೋಡಗಳೇ ನಮಗೆ ನೀರಿನ ಆಧಾರವಾಗಿದೆ. ಅದನ್ನು ನೀರು ಮತ್ತು ಕೃಷಿ ಎರಡರಲ್ಲೂ ಸಮೀಕರಿಸಿದ್ದು ಆಧುನಿಕತೆಯ ವಿಷಯಗಳ ಮೂಲಕ ಸುಸ್ಥಿರತೆಯಿಂದ ಅಸ್ಥಿರತೆಯ ಕಡೆಗೆ ಸಾಗುವುದು. ಈಗಿನ ಕಾಲದಲ್ಲಿ ನಾಶ ಆಗುವ ವಿಚಾರಗಳನ್ನು ಮನನ ಮಾಡುವವರು ಕಡಿಮೆ ಆಗಿದ್ದಾರೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಂಕರ ಸಾಹಿತ್ಯ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದ ಡಾ. ವಿಘ್ನರಾಜ್ ಎಸ್.ಆರ್. ಮಾತನಾಡಿ “ಗ್ರಂಥಗಳನ್ನು ಉಳಿಸುವುದು ಬಹುಮುಖ್ಯ. ಇದನ್ನು ಸಂರಕ್ಷಿಸುವುದರಿಂದ ಕೃತಿಗಳು ಉಳಿಯುತ್ತವೆ. ಅನೇಕ ಪ್ರಾಚೀನ ಮನೆಗಳಲ್ಲಿ ಇಂದಿಗೂ ಗ್ರಂಥಗಳಿವೆ. ಅವುಗಳನ್ನು ಸಂರಕ್ಷಿಸಿದರೆ ಅಪರೂಪದ ಕೃತಿಗಳು ಸಿಗುವುದಕ್ಕೆ ಸಾಧ್ಯ ಮತ್ತು ಹಳೆಯ ಕೃತಿಗಳು ಬೆಳಕಿಗೆ ಬರಬೇಕಿದೆ. ಇಂತಹ ಪುಣ್ಯ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಗ್ಗಡೆಯವರು ಮುಂದುವರಿಸುತ್ತಾ ಬರುತ್ತಿದ್ದಾರೆ. ಅವರಿಂದ ಇಂದು ನನಗೆ ‘ಶಂಕರ ಸಾಹಿತ್ಯ ಪ್ರಶಸ್ತಿ’ ದೊರಕುವುದಕ್ಕೆ ಸಾಧ್ಯವಾಯಿತು” ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ರಾಧಕೃಷ್ಣ ಬೆಳ್ಳೂರು ಇವರು ‘ತಿರಿ’ ಪುಸ್ತಕ ಲೋಕಾರ್ಪಣೆ ಮಾಡಿ ಶುಭಹಾರೈಸುತ್ತಾ “ಗ್ರಂಥಗಳು ಸುಲಭವಾಗಿ ಸಿಗುವುದಿಲ್ಲ. ಗ್ರಂಥಗಳಲ್ಲಿ ಬಳಕೆಯಾಗುವ ಲಿಪಿ ಮತ್ತು ಭಾಷೆಗೆ ಯಾವುದೇ ನೇರ ಸಂಬಂದ ಇಲ್ಲ. ಲಿಪಿ ಎಂದರೆ ಉಚ್ಛರಿಸಿದ್ದನ್ನು ಕೇಳುವ ಬದಲು ನೋಡುವ ಮಾಧ್ಯಮ. ಹಿಂದಿನ ಕಾಲದಲ್ಲಿ ತಾಳೆ ಗರಿಗಳ ಮೇಲೆ ಗ್ರಂಥವನ್ನು ಬರೆಯುತ್ತಿದ್ದರು. ಆದರೆ ಅಂತಹ ಗ್ರಂಥಗಳು ಈಗ ಕಾಣಸಿಗುವುದು ಕಡಿಮೆಯಾಗಿದೆ. ಅದನ್ನು ಸಂಶೋಧನೆ ಮಾಡಿ ಸಂಗ್ರಹಿಸುವುದೇ ಹರ ಸಾಹಸವಾಗಿದೆ. ಹಾಗೆಯೇ ಆ ಗ್ರಂಥಗಳನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ” ಎಂದರು.
ವಿಶ್ರಾಂತ ಪ್ರಾಂಶುಪಾಲರಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡುತ್ತಾ “ಕನಸು ಎಂಬಂತಹುದು ನಿಜವಾಗಿ ಕಾರ್ಯರೂಪಕ್ಕೆ ಬರುವಂಥದ್ದು. ಅದು ಯಾವುದೇ ಒಂದು ಮ್ಯಾಜಿಕ್ ರೂಪದಲ್ಲಿ ಕಾರ್ಯರೂಪಕ್ಕೆ ಬರುವುದಿಲ್ಲ. ಯಾಕೆಂದರೆ ಅದನ್ನು ಕಾರ್ಯರೂಪಕ್ಕೆ ತರುವಂತ ಒಂದು ದೃಢ ನಿರ್ಧಾರ ಅಥವಾ ಅದಕ್ಕೆ ಬೆವರು ಸುರಿಸಿ ಶ್ರಮಪಟ್ಟು ಕಾರ್ಯವನ್ನು ಮಾಡಿದಾಗ ಮಾತ್ರ ಆ ಕೆಲಸ ಯಶಸ್ಸನ್ನು ಕಾಣಲು ಸುಲಭ. ನಾವು ನಮ್ಮ ಬದುಕನ್ನು ನಮ್ಮ ಜೀವನವನ್ನು ರೂಪಿಸುವಂತಹ ಲೇಖಕರು ನಾವೇ ಯಾವಾಗ ನಮ್ಮ ಬದುಕನ್ನು ರೂಪಿಸುವಲ್ಲಿ ಗುರುಗಳಾಗಿ ತಿದ್ದುಪಡಿಗೊಳಿಸಿ ಅದರಲ್ಲಿ ಬದಲಾವಣೆ ತರುವಂತಹ ಮನಸ್ಸು ಅದು ನಮ್ಮಲ್ಲಿದ್ದರೆ ಯಾವಾಗ ಬೇಕಾದರೂ ಕೂಡ ಸಾಧನೆಯನ್ನು ಮಾಡಲು ಸಾಧ್ಯ” ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರು ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕರಾದ ಶ್ರೀ ಮುರಳೀಕೃಷ್ಣ ಕೆ.ಎನ್., ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ತಿರಿ ಗ್ರಂಥದ ಲೇಖಕ ಮತ್ತು ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ ಎಂ., ಪರೀಕ್ಷಾಂಗ ಕುಲ ಸಚಿವ ಡಾ. ಶ್ರೀ ಎಚ್.ಜಿ. ಶ್ರೀಧರ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ತೃತೀಯ ಕಾಲ ವಿಭಾಗದ ವಿದ್ಯಾರ್ಥಿನಿಯರಾದ ಸೌಮ್ಯ ಮತ್ತು ದೀಪ ಪ್ರಾರ್ಥಿಸಿ, ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಗೀತಾ ಕುಮಾರಿ ಟಿ. ಕಾರ್ಯಕ್ರಮವನ್ನು ನಿರ್ವಹಿಸಿ, ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ್ ಎಂ. ವಂದಿಸಿದರು.
ದತ್ತಿ ಸ್ಥಾಪಕರ ಬಗ್ಗೆ :
ಸಿದ್ಧಮೂಲೆ ಶಂಕರನಾರಾಯಣ ಭಟ್ ಕನ್ನಡ ಸಂಸ್ಕೃತ ವಿದ್ವಾನ್ ಆಗಿದ್ದು, ರಾಷ್ಟ್ರ ಪ್ರಶಸ್ತಿ ಪುರಸ್ಕೃತರೂ ಹೌದು. ಭಾಷಾ ಪ್ರವೀಣರಾಗಿರುವ ಇವರು ಪ್ರೌಢ ಶಾಲಾ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ವಿವಿಧ ಶಾಲಾ, ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಕನ್ನಡ ಹಾಗೂ ಕೊಡವ ಭಾಷೆಗಳಿಗೆ ನೀಡಿದ ಕೊಡುಗೆ ಅನನ್ಯ. ಪ್ರತೀ ವರ್ಷ ವಿದ್ವತ್ ವಲಯದ ವಿದ್ವಾಂಸರನ್ನು ಗುರುತಿಸಿ ಶಂಕರ ಸಾಹಿತ್ಯ ಪ್ರಶಸ್ತಿಯನ್ನು ನೀಡುವುದಕ್ಕಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದಲ್ಲಿ ರೂ.1 ಲಕ್ಷ ದತ್ತಿನಿಧಿ ಸ್ಥಾಪನೆ ಮಾಡಿದ್ದಾರೆ.
ಪ್ರಶಸ್ತಿ ವಿಜೇತರ ಬಗ್ಗೆ :
ಡಾ. ವಿಘ್ನರಾಜ ಎಸ್.ಆರ್. ಅವರು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ನಿರ್ದೇಶಕರು, ‘ಕರ್ನಾಟಕದ ಸಂಸ್ಕೃತ ಜೈನ ಕವಿಗಳು’ ಅವರ ಪಿ.ಎಚ್.ಡಿ. ಮಹಾಪ್ರಬಂಧ, ತುಳುಲಿಪಿ ಹಸ್ತಪ್ರತಿಗಳ ಸೂಚಿ, ಭಾಗವತಾಂತರ್ಗತ ತುಳು ರಾಮಾಯಣ, ದಾನಶೂರ ಕರ್ಣ, ಸಂಗೀತ ವಿದ್ವಾಂಸ ಚಕ್ರಕೋಡಿ ನಾರಾಯಣ ಶಾಸ್ತ್ರೀ, ಸಂಸ್ಕೃತ ಹಸ್ತಪ್ರತಿಗಳ ಸೂಚಿ ಭಾಗ 1 ಮತ್ತು 2, ಪ್ರಾಚೀನ ಭಾರತೀಯ ಲಿಪಿಗಳು, ಜೈನ ಗ್ರಂಥಸ್ಥ ಹಾಡುಗಳು ಮೊದಲಾದ ಕೃತಿಗಳನ್ನು ರಚಿಸುವುದರೊಂದಿಗೆ ಅನೇಕ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಇವರು ಉಂಡೆಮನೆ ಪ್ರಶಸ್ತಿ, ತುಳುವೆರೆ ಆಯನೋ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಯಂತಹ ಅನೇಕ ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿದ್ದಾರೆ.
‘ತಿರಿ’ ಕೃತಿಕಾರರ ಬಗ್ಗೆ :
ಡಾ. ಮನಮೋಹನ ಎಂ. ತಮ್ಮ ಪದವಿ ವಿದ್ಯಾಭ್ಯಾಸವನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪೂರೈಸಿ, ಕನ್ನಡ ಎಂ.ಎ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮುಗಿಸಿದ್ದಾರೆ. ಪಿಎಚ್.ಡಿ ಪದವಿಯನ್ನು ಮದರಾಸು ವಿಶ್ವವಿದ್ಯಾನಿಲಯದಲ್ಲಿ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ ಅವರ ಮಾರ್ಗದರ್ಶನದಲ್ಲಿ ಪೂರೈಸಿದ್ದಾರೆ. ಡಾಕ್ಟರೇಟ್ ಪದವಿಗೆ ಸಲ್ಲಿಸಿದ ಪ್ರೌಢ ಪ್ರಬಂಧದ ವಿಷಯ ‘ತುಳು ಸಾಹಿತ್ಯದ ಪ್ರೇರಣೆ ಮತ್ತು ಪ್ರವೃತ್ತಿಗಳು’. 2005ರಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಲೇಖನ, ಕಥೆ ಬರವಣಿಗೆಯಲ್ಲಿ ಇವರು ಆಸಕ್ತಿಯುಳ್ಳವರು. ಕಾಲೇಜಿನ ಎನ್.ಎಸ್.ಎಸ್. ವಿಭಾಗದ ಸಂಯೋಜನಾಧಿಕಾರಿಯಾಗಿ, ‘ಜಾಗೃತಿ’ ವಾರ್ಷಿಕ ಸಂಚಿಕೆಯ ಸಂಪಾದಕರಾಗಿ ಕೆಲಸ ಮಾಡಿದ ಅನುಭವವುಳ್ಳವರು.