ರಾಯಚೂರು : ಸಂಸ ಥಿಯೇಟರ್ ಬೆಂಗಳೂರು ಮತ್ತು ಗುರುಪುಟ್ಟ ಕಲಾ ಬಳಗ (ರಿ.) ಆಸ್ಕಿಹಾಳ್ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ‘ಶಾಂತರಸ 100’ ಶಾಂತರಸ ಶತಮಾನೋತ್ಸವ ಆಚರಣೆಯನ್ನು ದಿನಾಂಕ 07 ಏಪ್ರಿಲ್ 2025ರಂದು ಬೆಳಿಗ್ಗೆ 10-30 ಗಂಟೆಗೆ ರಾಯಚೂರು ಪಂ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಎಚ್.ಎಸ್. ಮುಕ್ತಾಯಕ್ಕ ಅವರ ‘ಅಪ್ಪ ನಾನು ಕಂಡಂತೆ’ ಶಾಂತರಸರ ನೆನಪುಗಳ ಓದು ಪ್ರಸ್ತುತಿ ರಂಗ ನಿರ್ದೇಶಕ ಪ್ರವೀಣ್ ಗುಂಜಳ್ಳಿ ಮತ್ತು ಸ್ಥಳೀಯ ಕಲಾವಿದರಿಂದ ವಚನ ಸಂಗೀತ ಪ್ರಸ್ತುತಗೊಳ್ಳಲಿದೆ. ಬಂಡುರಾವ್ ಚಾಗಿ ಇವರ ಅಧ್ಯಕ್ಷತೆಯಲ್ಲಿ ಸಿದ್ಧನಗೌಡ ಪಾಟೀಲ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಡಾ. ಬಸವಪ್ರಭು ಪಾಟೀಲ್ ಬೆಟ್ಟದೂರು ಇವರು ಅನ್ವೇಷಣೆ ಸಾಹಿತ್ಯ ಪತ್ರಿಕೆಯ ಶಾಂತರಸರ ಕುರಿತ ವಿಶೇಷಾಂಕ ಮತ್ತು ಆರ್.ಜಿ. ಹಳ್ಳಿ ನಾಗರಾಜ್ ಇವರು ಉಷಾ ಜ್ಯೋತಿಯವರ ‘ಇರುವಿಕೆಯ ಹಾದಿಯಲ್ಲಿ’ ಗಜಲ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ವಿಚಾರಗೋಷ್ಠಿ 01ರಲ್ಲಿ ‘ಶಾಂತರಸರ ಸಾಹಿತ್ಯ’ ಇದರ ಬಗ್ಗೆ ಪ್ರಾಧ್ಯಾಪಕರಾದ ಡಾ. ಅಪ್ಪಗೆರೆ ಸೋಮಶೇಖರ್, ‘ಶಾಂತರಸರ ಬದುಕು’ ಇದರ ಬಗ್ಗೆ ಕತೆಗಾರ ಹಾಗೂ ನಾಟಕಕಾರರಾದ ಮಹಾಂತೇಶ್ ನವಲಕಲ್, ‘ಶಾಂತರಸರ ಕಂಡಂತೆ’ ಸಾಹಿತಿ ವೀರ ಹನುಮಾನ್ ವಿಚಾರ ಮಂಡನೆ ಮಾಡಲಿದ್ದಾರೆ. ಗೋಷ್ಠಿ 02ರ ಅಧ್ಯಕ್ಷತೆಯನ್ನು ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಇವರು ವಹಿಸಲಿದ್ದು, ‘ಶಾಂತರಸರ ಗಜಲ್’ಗಳ ವಾಚನ ನಡೆಯಲಿದೆ. ಗಜಲ್ ಗೋಷ್ಠಿ 03ರ ಅಧ್ಯಕ್ಷತೆಯನ್ನು ಕವಿ ಹಾಗೂ ವಿಮರ್ಶಕರಾದ ಅಬ್ದುಲ್ ಹೈ ತೋರಣಗಲ್ ಇವರು ವಹಿಸಲಿದ್ದು, ಅನೇಕ ಗಜಲ್ ಕವಿಗಳು ಭಾಗವಹಿಸಲಿದ್ದಾರೆ.