ಉಡುಪಿ : ‘ಸಂಸ್ಕೃತಿ ವಿಶ್ವ ಪ್ರತಿಷ್ಠಾನ’ವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಸಂಸ್ಕೃತಿ ಉತ್ಸವ’ ಕಾರ್ಯಕ್ರಮವು ದಿನಾಂಕ 23-01-2024ರ ಮಂಗಳವಾರದಂದು ಉಡುಪಿಯ ಎಂ. ಜಿ. ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದಲ್ಲಿ ಗಡಿನಾಡ ಕನ್ನಡ ಕಲಾವಿದ ಕಾಸರಗೋಡು ಚಿನ್ನಾ ಅವರಿಗೆ ಹೆಬ್ರಿಯ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಿತ ‘ಶಾರದಾ ಕೃಷ್ಣ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಾಸರಗೋಡು ಚಿನ್ನಾ “ನನ್ನ ರಂಗ ಚಟುವಟಿಕೆ ಮತ್ತು ಸಾಹಿತ್ಯ ಸಾಧನೆಯ ಹಿಂದಿನ ಬಹುಪಾಲು ಶ್ರೇಯಸ್ಸು ಉಡುಪಿ ಮಣ್ಣಿಗೆ ಸಲ್ಲಬೇಕು. ಹುಟ್ಟಿದ ನೆಲ ಕಾಸರಗೋಡು ಕನ್ನಡಕ್ಕಾಗಿ ಹೋರಾಡುವ ಭಾವ ಬೆಳೆಸಿತು. ಭಾಷಾವಾರು ಪ್ರಾಂತ್ಯ ವೇಳೆ ಅಧಿಕಾರಿಗಳ ತಪ್ಪಿನಿಂದ ಕಾಸರಗೋಡು ಕೇರಳಕ್ಕೆ ಸೇರ್ಪಡೆಯಾಗಬೇಕಾಯಿತು. ಕಾಸರಗೋಡು ಮಣ್ಣು ಈಗಲೂ ಕನ್ನಡದ ಮಣ್ಣು.” ಎಂದು ಪ್ರತಿಪಾದಿಸಿದರು.
ಹಿರಿಯ ಸಾಹಿತಿ ಎ. ಎಸ್. ಏನ್ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ. ರಾಘವೇಂದ್ರ ಚಾರಿಟೇಬಲ್ ಟ್ರಸ್ಟಿನ ವಿಶ್ವಸ್ಥ ಎಂ. ಸೂರ್ಯನಾರಾಯಣ ಅಡಿಗ, ಸಂಸ್ಕೃತಿ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಸದಾನಂದ ಶೆಣೈ, ಉದ್ಯಮಿ ಸುಗುಣ ಶಂಕರ್ ಸುವರ್ಣ, ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಶಾರದಾ ಕೃಷ್ಣಪುರಸ್ಕಾರ ಸಮಿತಿ ಸಂಚಾಲಕ ವಿವೇಕಾನಂದ ಎನ್. ಉಪಸ್ಥಿತರಿದ್ದರು.
ಮಂಗಳೂರು ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ವಿಶ್ವೇಶ್ವರ ಅಡಿಗ ಸ್ವಾಗತಿಸಿ, ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್. ಪಿ. ಪ್ರಸ್ತಾವನೆಗೈದು, ರಾಮಾಂಜಿ ಸಮ್ಮಾನ ಪತ್ರ ವಾಚಿಸಿ, ಪೂರ್ಣಿಮಾ ಜನಾರ್ದನ್ ನಿರೂಪಿಸಿ, ಸಂಧ್ಯಾ ಶಣೈ ವಂದಿಸಿದರು.