29 ಮಾರ್ಚ್ 2023, ಉಳ್ಳಾಲ: ‘ಶಾರದಾಮೃತ’ ಸ್ಮರಣಸಂಚಿಕೆ ಮುಂದಿನ ಪೀಳಿಗೆಗೆ ಮಾರ್ಗದರ್ಶಿ – ಯು.ಎಸ್.ಪ್ರಕಾಶ್
ಉಳ್ಳಾಲದ ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿಯು ತನ್ನ ಅಮೃತ ವರ್ಷಾಚರಣೆಯ ಸವಿನೆನಪಿಗಾಗಿ ಪ್ರಕಟಿಸಿದ ‘ ಶಾರದಾಮೃತ’ ಸ್ಮರಣಸಂಚಿಕೆಯ ಅನಾವರಣ ಸಮಾರಂಭ ಇತ್ತೀಚೆಗೆ ಉಳ್ಳಾಲದ ಮುಖ್ಯ ರಸ್ತೆಯಲ್ಲಿರುವ ಶ್ರೀ ಶಾರದಾ ನಿಕೇತನದಲ್ಲಿ ಜರಗಿತು.
ಉತ್ಸವ ಸಮಿತಿಯ ಗೌರವಾಧ್ಯಕ್ಷ ಶ್ರೀ ಯು.ಎಸ್.ಪ್ರಕಾಶ್ ಸಂಚಿಕೆಯನ್ನು ಅನಾವರಣಗೊಳಿಸಿ ಮಾತನಾಡುತ್ತಾ, ಉಳ್ಳಾಲದಲ್ಲಿ ಕಳೆದ 75 ವರ್ಷಗಳಿಂದ ಸಮಸ್ತ ಹಿಂದು ಸಮಾಜ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿರುವ ಶಾರದಾ ಉತ್ಸವವು,ಉಳ್ಳಾಲ ನರಸಿಂಹ ಮಲ್ಯ, ಉಳ್ಳಾಲ ದಯಾನಂದ ನಾಯಕ್ ರಂತಹ ಹಿರಿಯರ ದೂರದರ್ಶಿತ್ವದ ಫಲಸ್ವರೂಪವಾಗಿ ನಿರಂತರವಾಗಿ ನಡೆದುಬಂದಿದೆ. ಈ ಉತ್ಸವವು ಅನೂಚಾನವಾಗಿ ನಡೆದುಕೊಂಡು ಬಂದ ದಾರಿ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವಲ್ಲಿ ‘ ಶಾರದಾಮೃತ ‘ ಸ್ಮರಣ ಸಂಚಿಕೆಯು ಖಂಡಿತವಾಗಿಯೂ ಸಹಕಾರಿಯಾಗಲಿದೆ. ಈ ಅಮೂಲ್ಯ ಸಂಚಿಕೆಯನ್ನು ರೂಪುಗೊಳಿಸಿದ ಪ್ರಧಾನ ಸಂಪಾದಕ ಎಂ.ವಾಸುದೇವ ರಾವ್ ಸಹಿತವಾಗಿ ಸಂಪಾದಕೀಯ ಮಂಡಳಿಯ ಸದಸ್ಯರೆಲ್ಲರೂ ಅಭಿನಂದನಾರ್ಹರು ಎಂದು ನುಡಿದರು.
ಉತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀಕರ ಕಿಣಿಯವರು ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ‘ಶಾರದಾಮೃತ’ ಸ್ಮರಣ ಸಂಚಿಕೆಯು ಸಂಗ್ರಹ ಯೋಗ್ಯವಾದ ಮಾಹಿತಿಗಳನ್ನೊಳಗೊಂಡಿದ್ದು ಇದಕ್ಕಾಗಿ ಶ್ರಮಿಸಿದವರೆಲ್ಲರೂ ಅಭಿನಂದನಾರ್ಹರು ಎಂದರು.ವೇದಿಕೆಯಲ್ಲಿ ಶಾರದಾ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ರೇಣುಕಾ ಕಾಂಚನ್, ಉತ್ಸವ ಸಮಿತಿಯ ಪದಾಧಿಕಾರಿಗಳಾದ ಶ್ರೀ ವಿಜಯ್ ಪಂಡಿತ್, ಸುದೇಶ್ ಮರೋಳಿ, ಕಾರ್ಯದರ್ಶಿ ಭರತ್ ಕುಮಾರ್, ಪ್ರಧಾನ ಸಂಪಾದಕ ಎಂ.ವಾಸುದೇವ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಸಹ ಸಂಪಾದಕರಲ್ಲೋರ್ವರಾದ ಪಶುಪತಿ ಉಳ್ಳಾಲ್ ಸ್ಮರಣ ಸಂಚಿಕೆಯ ಕುರಿತು ಮಾಹಿತಿ ನೀಡಿದರು, ಉತ್ಸವ ಸಮಿತಿಯ ಕಾರ್ಯದರ್ಶಿ ಭರತ್ ಕುಮಾರ್ ಸ್ವಾಗತಿಸಿದರು, ಉಪಾಧ್ಯಕ್ಷ ಲಕ್ಷ್ಮಣ್ ಟೈಲರ್ ವಂದನಾರ್ಪಣೆಗೈದರು.