ಬೆಂಗಳೂರು : ವೀರಶೈವ ಸೇವಾ ಸಮಾಜ ಬೆಂಗಳೂರು ವತಿಯಿಂದ ಕೊಡಮಾಡುವ ‘ಶರಣ ಮುಕುಟ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 23-04-2024ರ ಭಾನುವಾರದಂದು ಜರಗನಹಳ್ಳಿಯ ವೀರಶೈವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಎಸ್. ಎಂ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಸಮಾರಂಭದಲ್ಲಿ ಹಿರಿಯ ಸಾಹಿತಿ ಹಾಗೂ ರಂಗಕರ್ಮಿಯಾದ ಹೂಲಿ ಶೇಖರ್ ಇವರಿಗೆ 2024ನೇ ಸಾಲಿನ ‘ಶರಣ ಮುಕುಟ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ರಂಗಕರ್ಮಿ ಹೂಲಿ ಶೇಖರ್ :
ಸನ್ಮಾನ್ಯ ಶ್ರೀ ಹೂಲಿ ಶೇಖರ್ ಇವರ ಕರ್ನಾಟಕ ವಿದ್ಯುತ್ ನಿಗಮದಲ್ಲಿ 31 ವರ್ಷಗಳು ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ ನಂತರ ತನ್ನನ್ನು ತೊಡಗಿಸಿಕೊಂಡಿದ್ದು ರಂಗಭೂಮಿಗೆ. ಪ್ರೌಢಶಾಲೆಯಲ್ಲಿರುವಾಗಲೇ ಆಸಕ್ತಿ ಹೊಂದಿದ್ದ ಬರವಣಿಗೆಯಿಂದ ಆಕಾಶವಾಣಿಗಾಗಿ ಕಥೆಗಳನ್ನು ಬರೆಯಲು ಆರಂಭಿಸಿದರು. ಮುಂದೆ ರಂಗನಟರಾಗಿ, ರಂಗಕರ್ಮಿಯಾಗಿ, ರಂಗ ನಿರ್ದೇಶಕರಾಗಿ, ನಾಟಕಕಾರನಾಗಿ, ರಂಗ ಸಂಘಟಕನಾಗಿ ಹಾಗೂ ಅನೇಕ ಪತ್ರಿಕೆಗಳ ಗೌರವ ಸಂಪಾದಕರಾಗಿ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕೃಷಿ ಮಾಡಿದ್ದಾರೆ. ‘ಮೂಡಲ ಮನೆ’, ‘ಮಹಾ ನವಮಿ’, ‘ಕಿನ್ನರಿ’, ‘ಬಂಗಾರಿ’, ‘ಕರಿಮಾಯಿ’ ಮುತಾಂದವುಗಳು ಕಿರುತೆರೆಯಲ್ಲಿ ಪ್ರಸಾರವಾದ ಇವರ ನಿರ್ದೇಶನದ ಪ್ರಸಿದ್ದ ಧಾರಾವಾಹಿಗಳು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಆರ್ಯಭಟ್ಟ ಪ್ರಶಸ್ತಿ ಮುತಾಂದವುಗಳು ಇವರ ಸಾಹಿತ್ಯ ಕೃಷಿಗೆ ಸಂದ ಗೌರವಗಳು.