ಉಡುಪಿ : ಖ್ಯಾತ ಭರತನಾಟ್ಯ ಕಲಾವಿದೆ ವಿದುಷಿ ಶೀತಲ್ ರಾವ್ ಇವರು ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ. ಶ್ರೀ ಪ್ರದೀಪ್ ಕುಮಾರ್ ಹಾಗೂ ಶ್ರೀಮತಿ ಗೀತಾಂಜಲಿ ಇವರ ಸುಪುತ್ರಿಯಾಗಿರುವ ಡಾ. ಶೀತಲ್ ಉಡುಪಿಯ ಎಸ್. ಡಿ. ಎಂ. ಆಯುರ್ವೇದ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದಿರುತ್ತಾರೆ. ಪ್ರಸ್ತುತ ಕೇರಳದ ಕೊಲ್ಲಂನಲ್ಲಿರುವ ‘ಅಮೃತ ಸ್ಕೂಲ್ ಆಫ್ ಆಯುರ್ವೇದ’ ಇಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿಯನ್ನು ಅಭ್ಯಾಸ ಮಾಡುತ್ತಿದ್ದಾರೆ.
ಬಾಲ್ಯದಿಂದಲೇ ಭರತನಾಟ್ಯ ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಕಳೆದ ಸುಮಾರು 12 ವರ್ಷಗಳಿಂದ ಭರತನಾಟ್ಯವನ್ನು ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ಇವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಭರತನಾಟ್ಯದ ವಿದ್ವತ್ ಪದವಿ ಪೂರ್ತಿಗೊಳಿಸಿರುವ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದುಷಿ ಚೇತನಾ ಆಚಾರ್ಯ ಇವರಲ್ಲಿ ಕಲಿತಿದ್ದು, ಜೂನಿಯರ್ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ನೃತ್ಯ ನಿಕೇತನ ಕೊಡವೂರಿನ ಹಲವಾರು ನೃತ್ಯ ಪ್ರದರ್ಶನಗಳಲ್ಲಿ ಹಾಗೂ ನೃತ್ಯ ನಾಟಕಗಳಲ್ಲಿ ಭಾಗವಹಿಸಿರುತ್ತಾರೆ.