ಸುರತ್ಕಲ್ : ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ (ರಿ) ಸುರತ್ಕಲ್ ಮತ್ತು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಸಹಭಾಗಿತ್ವದಲ್ಲಿ ಶೇಣಿ ಸಂಸ್ಮರಣೆ ಹಾಗೂ ಶೇಣಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 29-10-2023ರಂದು ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ “ಶ್ರೇಷ್ಠ ಕಲಾವಿದ ಶೇಣಿಯವರು ತಮ್ಮ ಕಲಾ ಚಿಂತನೆಯ ಮೂಲಕ ಯುವ ತಲೆಮಾರುಗಳನ್ನು ಪ್ರಭಾವಿಸಿದವರು” ಎಂದರು. ‘ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ವೇ.ಮೂ. ವಾದಿರಾಜ ಉಪಾದ್ಯಾಯ “ನಿಷ್ಕಲ್ಮಶ ಮನಸ್ಸಿನಿಂದ ಯಾವುದೇ ಕಾರ್ಯ ಮಾಡಿದರೂ ಅದರ ಪ್ರತಿಫಲ ಮತ್ತಷ್ಟು ಉತ್ತಮವಾಗಿಯೇ ಇರುತ್ತದೆ. ಅದಕ್ಕೆ ಶ್ರೇಣಿ ಗೋಪಾಲ ಕೃಷ್ಣ ಭಟ್ ಅವರ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವೇ ಸಾಕ್ಷಿ” ಎಂದು ನುಡಿದರು.
ಇದೇ ಸಂದರ್ಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಸೂರಿಕುಮೇರು ಇವರಿಗೆ ಶೇಣಿ ಪ್ರಶಸ್ತಿ ಪ್ರದಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು “ಜೀವನ ನಿರ್ವಹಣೆಗಾಗಿ ಯಕ್ಷಗಾನ ಆಯ್ಕೆ ಮಾಡಿಕೊಂಡೆ. ಕಲಾವಿದರು ಹಾಗೂ ಸಹೃದಯಿ ಸಾಮಾಜಿಕರು ಗುರುತಿಸಿ ತನ್ನನ್ನು ಬೆಳೆಸಿದರು. ಗುರು ಶೇಣಿ ಗೋಪಾಲ ಭಟ್ಟರ ಹೆಸರಿನ ಶೇಣಿ ಪ್ರಶಸ್ತಿಯ ಗೌರವ ಒಲಿದಿರುವುದು ಸಂತೋಷ ತಂದಿದೆ.” ಎಂದರು.
ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡಿದ ಯಕ್ಷಗಾನ ಕಲಾವಿದೆ ಸುಮಂಗಲಾ ರತ್ನಾಕರ್ “ಕೆ. ಗೋವಿಂದ ಭಟ್ ಸೂರಿಕುಮೇರು ಯಕ್ಷಗಾನದಲ್ಲಿ ಯಾವುದೇ ಪಾತ್ರವನ್ನು ನೀಡಿದರೂ ಪಾತ್ರಕ್ಕೆ ಜೀವತುಂಬುತ್ತಿದ್ದರು. ಅವರು ಕಲಾವಿದ ಮಾತ್ರವಲ್ಲದೆ,ಯಕ್ಷಗಾನ ಕಥಾನಕವನ್ನು ನಾಡಿಗೆ ಪರಿಚಯಿಸಿದ್ದಾರೆ. ಅವರಿಗೆ ಸರ್ಕಾರ ಈ ಬಾರಿಯ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.” ಉಪ ಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಎಸ್.ಜಿ ಉಪಸ್ಥಿತರಿದ್ದರು. ಟ್ರಸ್ಟಿನ ಕೋಶಾಧಿಕಾರಿ ಜಿ.ಕೆ. ಭಟ್ ಸೇರಾಜೆ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಸರ್ಪಂಗಳ ಈಶ್ವರ ಭಟ್ ವಂದಿಸಿದರು.
ಕಾರ್ಯಕ್ರಮದಲ್ಲಿ ಹರಿದಾಸ ಶ್ರೀ ಶೇಣಿ ಮುರಳಿಯವರು ಶಿವಭಕ್ತ ಬಾಣಾಸುರ ಹರಿಕಥೆ ನಡೆಸಿಕೊಟ್ಟರು. ಇವರಿಗೆ ಸತ್ಯನಾರಾಯಣ ಐಲ ಹಾಗೂ ಮಂಗಲದಾಸ ಗುಲ್ವಾಡಿ ಹಿಮ್ಮೇಳದಲ್ಲಿ ಸಹಕರಿಸಿದರು. ಬಳಿಕ ‘ಕರ್ಣಾನಾಸಚ್ಛೇದ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಸರ್ವಶ್ರೀಗಳಾದ ಪುತ್ತಿಗೆ ರಘುರಾಮ ಹೊಳ್ಳ, ಮುರಾರಿ ಕಡಂಬಳಿತ್ತಾಯ, ಕೃಷ್ಣಪ್ರಕಾಶ ಉಳಿತ್ತಾಯ, ಚಂದ್ರಶೇಖರ ಕಾರಂತ ಮತ್ತು ಮುಮ್ಮೇಳದಲ್ಲಿ ಸರ್ವಶ್ರೀಗಳಾದ ಕೆ. ಗೋವಿಂದ ಭಟ್ ಸೂರಿಕುಮೇರು, ಡಾ.ಪ್ರಭಾಕರ ಜೋಷಿ, ಕೆ. ಮಹಾಬಲ ಶೆಟ್ಟಿ, ಜಿ.ಕೆ. ಭಟ್ ಸೇರಾಜೆ, ಸರ್ಪಂಗಳ ಈಶ್ವರ ಭಟ್, ಪಿ.ವಿ. ರಾವ್, ಶೇಣಿ ವೇಣುಗೋಪಾಲ ಭಟ್ ಭಾಗವಹಿಸಿದರು.
ಇದೇ ಸಂದರ್ಭದಲ್ಲಿ ಪೌರಾಣಿಕ ರಸಪ್ರಶ್ನೆ ಸ್ಪರ್ಧೆ ಮತ್ತು ಮುಖವರ್ಣಿಕೆ ಸ್ಪರ್ಧೆ ನಡೆಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸುಮಾರು 200ವಿದ್ಯಾರ್ಥಿಗಳು ಪೌರಾಣಿಕ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದರು. ಪಿ.ವಿ ರಾವ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಮುಖವರ್ಣಿಕೆ ಸ್ಪರ್ಧೆಯಲ್ಲಿ ಸುಮಾರು 80ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸರ್ಪಂಗಳ ಈಶ್ವರ ಭಟ್ ಮತ್ತು ಲಕ್ಷ್ಮಣ್ ಕುಮಾರ್ ಮರಕಡ ತೀರ್ಪುಗಾರರಾಗಿ ಸಹಕರಿಸಿದರು.
ಟ್ರಸ್ಟಿನ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಅಭಿನಂದಿಸಿ, ಗೋವಿಂದ ಭಟ್ ಅವರ ಕಲಾ ಸಾಧನೆ ವಿಶಿಷ್ಟವಾದುದು ಎಂದರು. ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ಬ್ಯಾಂಕ್ ಆಫ್ ಬರೋಡಾದ ಪ್ರಧಾನ ವ್ಯವಸ್ಥಾಪಕಿ ಗಾಯತ್ರಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ಉದಯಕುಮಾರ್ ಬಿ.ವಿ., ಎಂ.ಆರ್.ಪಿ.ಎಲ್.ನ ಆಧಿಕಾರಿ ಮಾಲತೇಶ್, ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ಉದ್ಯಮಿ ದಿವಾಣ ಗೋವಿಂದ ಭಟ್ ಮುಖ್ಯ ಅತಿಥಿಗಳಾಗಿದ್ದರು. ಟ್ರಸ್ಟಿನ ಉಪಾಧ್ಯಕ್ಷ ಕೂಡ್ಲು ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪಿ.ವಿ ರಾವ್ ಸ್ವಾಗತಿಸಿದರು. ಕೋಶಾಧಿಕಾರಿ ಜಿ.ಕೆ ಭಟ್ ಸೇರಾಜೆ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪೂರ್ಣಿಮ ಯತೀಶ್ ರೈಯವರ ನಿರ್ದೇಶನದಲ್ಲಿ ‘ಸುದರ್ಶನ ಗರ್ವಭಂಗ’-‘ಭಾರ್ಗವ ವಿಜಯ’ ಯಕ್ಷಗಾನ ಬಯಲಾಟ ನಡೆಯಿತು. ಹಿಮ್ಮೇಳದಲ್ಲಿ ಸರ್ವಶ್ರೀಗಳಾದ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಮುರಾರಿ ಕಡಂಬಳಿತ್ತಾಯ, ಗಣೇಶ್ ಭಟ್ ಬೇಳಾಲು, ಶ್ರೀನಿಧಿ ಸುರತ್ಕಲ್ ಮತ್ತು ಮಮ್ಮೇಳದಲ್ಲಿ ಛಾಯಾಲಕ್ಷ್ಮೀ ಆರ್.ಕೆ., ಶಿವಾನಿ ಸುರತ್ಕಲ್, ವೃಂದಾ ಕೊನ್ನಾರ್, ಬಿಂದಿಯಾ ಶೆಟ್ಟಿ, ಪೂಜಾ, ಚೈತ್ರಾ ಹೆಚ್, ವೈಷ್ಣವಿ ರಾವ್, ಪ್ರತಿಷ್ಟಿತ ಎಸ್. ರೈ, ತನುಶ್ರೀ, ಮೇಘ, ದೀಕ್ಷಾ, ರಕ್ಷಾ, ಅನನ್ಯ ಐತಾಳ್, ಕಾರ್ತಿಕ್, ವೈಶಾಖ್, ಯಶ್ವಿನ್, ಆದಿತ್ಯ, ಶ್ರವಣ್, ಸಂಚಿತ್ ಗಗನ ಭಾಗವಹಿಸಿದ್ದರು.