Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಕ್ಲೇ ಮಾಡೆಲಿಂಗ್ ಪ್ರದರ್ಶನ | ಮೇ 24

    May 21, 2025

    ಬಾನು ಮುಷ್ತಾಕ್‌ ಕೃತಿಗೆ ಪ್ರತಿಷ್ಠಿತ ಅಂತರರಾಷ್ಚ್ರೀಯ ‘ಬೂಕರ್ ಪ್ರಶಸ್ತಿ’

    May 21, 2025

    ಹರಿಹರಪುರದಲ್ಲಿ ‘ಭಾಗವತರ ಸಂಸ್ಮರಣೆ ಗಾನಾರಾಧನೆ’ | ಮೇ 25

    May 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪರಿಚಯ ಲೇಖನ – ಸಂಪ್ರೀತಿಯ ಶಿಮುಂಜೆ ಪರಾರ
    Article

    ಪರಿಚಯ ಲೇಖನ – ಸಂಪ್ರೀತಿಯ ಶಿಮುಂಜೆ ಪರಾರ

    September 25, 2024Updated:September 24, 2024No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಇತ್ತೀಚಿಗೆ ನಮ್ಮನ್ನು ಅಗಲಿದ ಸಾಹಿತಿ, ಕಲಾವಿದ ಶಿಮುಂಜೆ ಪರಾರಿ ಅವರ ಸಾಂಸ್ಕೃತಿಕ ಪರಿಚಾರಿಕೆ ಗುರುತರವಾದುದು.ಶ್ರಮ ಸಂಸ್ಕೃತಿಯ ಹಿನ್ನೆಲೆಯಿಂದ ಬಂದ ಅವರು ತಮ್ಮನ್ನು ತಾವು ರೂಪಿಸಿಕೊಂಡು ಮುಂಬೈನ ತುಳು ಕನ್ನಡಿಗರಿಗೆ ಮಾದರಿಯಾಗಿದ್ದ ಕ್ರಿಯಾಶೀಲ ಚೇತನ.ಸದ್ದುಗದ್ದಲವಿಲ್ಲದೇ ಅವರು ಮಾಡಿದ ಸಾಹಿತ್ಯ
    ಕೃಷಿಯೂ ಅನೇಕ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತದೆ.ಶಿಮುಂಜೆ ಅವರ ಜೀವನ ಯಾನದ ಕಿರು ಲೇಖನ ಇಲ್ಲಿದೆ.

    ಮುಂಬಯಿ ಕನ್ನಡಿಗರಿಗೆ ಶಿಮುಂಜೆ ಪರಾರಿ (1940-2024)ಅವರು ಚಿರಪರಿಚಿತರಾಗಿದ್ದರು.ಅವರು ನಾಟಕಕಾರರಾಗಿ, ಅಧ್ಯಾಪಕರಾಗಿ, ಅನುವಾದಕರಾಗಿ, ನಟರಾಗಿ, ಆಧುನಿಕ ವಚನಕಾರರಾಗಿ, ಸ್ನೇಹಸೇತುವಾಗಿ ಮುಂಬಯಿಯ ಸಾಂಸ್ಕೃತಿಕ ಬದುಕಿನಲ್ಲಿ ಹಾಸುಹೊಕ್ಕಾಗಿದ್ದರು. ಅವರದು ಬಹುಮುಖ ಪ್ರತಿಭೆ ಹಾಗೂ ಬಹು ಭಾಷಿಕ ಸಂವೇದನೆ.ಕನ್ನಡ, ತುಳು, ಹಿಂದಿ,ಮರಾಠಿ, ಗುಜರಾತಿ ಮೊದಲಾದ ಭಾಷೆಗಳಲ್ಲಿ ನಿರರ್ಗಳ ವ್ಯವಹಾರ, ಸಾಹಿತ್ಯ ರಚನೆ, ಆದಾನ ಪ್ರದಾನ. ಹಾಗೆಯೇ ‘ಅವಳ ತೊಡಿಗೆ ಇವಳಿಗಿಟ್ಟು’ ನೋಡುವ ಪ್ರಯೋಗಶೀಲ ಮನಸ್ಸು.ಶಿಮುಂಜೆ ಅವರು ತುಳು ಭಾಷೆಯಲ್ಲಿ ಸಾವಿರಾರು ಚುಟುಕುಗಳನ್ನು ಬರೆದ ಸರದಾರ. ರಂಗದ ಮೇಲೆ ಬಣ್ಣ ಹಚ್ಚಿ ಕುಣಿದು ಬೆಳ್ಳಿ ತೆರೆಯಲ್ಲೂ ಮಿಂಚಿ ಸೈ ಸೈ ಎನಿಸಿಕೊಂಡ ಅಪೂರ್ವ ಕಲಾವಿದ. ಅದಕ್ಕಾಗಿ ನಟ ನಾನಾ ಪಾಟೇಕರ್, ಸದಾನಂದ ಸುವರ್ಣ ಮೊದಲಾದವರಿಂದ ಕೊಂಡಾಟ. ಕೊನೆಯ ತನಕ ಕಾಪಿಟ್ಟುಕೊಂಡು ಬಂದ ಮುಗ್ಧತೆ, ಸರಳತೆ, ರಸಿಕತೆ ಸಾಹಿತ್ಯ ಸಂಸ್ಕಾರ ಪಡೆದ ಸಹೃದಯಿ, ಅಜಾತಶತ್ರು. ಹಾಗಾಗಿ ಶಿಮುಂಜೆ ಪರಾರಿ ಅವರು ಮುಂಬಯಿ ಕನ್ನಡ-ತುಳು ಅಭಿಮಾನಿಗಳಿಗೆ ಅತ್ಯಂತ ಆಪ್ತರು,ಆತ್ಮೀಯರು.

    ಶಿಮುಂಜೆ ಅವರ ಪೂರ್ಣ ಹೆಸರು ಸೀತಾರಾಮ ಮುದ್ದಣ ಶೆಟ್ಟಿ. ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ. ಬೆಳೆದದ್ದು ಬೊಂಬಾಯಿಯಲ್ಲಿ. ಅತ್ತ ಗ್ರಾಮೀಣ ಸಂವೇದನೆ, ಇತ್ತ ನಗರ ಪ್ರಜ್ಞೆ; ಇವೆರಡರ ನಡುವೆ ಅರಳಿತು ಅವರ ಕವಿ ಮನಸ್ಸು. ತಂದೆ ಹಾಕಿಕೊಟ್ಟ ಶಿಸ್ತು ಬದ್ಧ ಜೀವನ; ಅಜ್ಜನ ಅಪ್ಪುಗೆಯ ವಾತ್ಸಲ್ಯ; ಸುತ್ತಲಿನದೆಲ್ಲವನ್ನು ನೋಡುವ ಹವ್ಯಾಸ; ಬೆಳೆಯುತ್ತಿದ್ದ ಎಳೆಯ ಮನಸ್ಸಿಗೆ ಗಾಂಧೀ, ಸುಭಾಷಚಂದ್ರ ಬೋಸ್, ನೆಹರೂ, ಸರೋಜಿನಿ ನಾಯ್ಡು, ಆಜಾದ್ ಮೊದಲಾದವರ ದರ್ಶನ ಭಾಗ್ಯ ! ‘ಗುರು ನಿತ್ಯಾನಂದರ ವಿವೇಕವಾಣಿ, ರಾಮಾಯಣ, ಮಹಾಭಾರತಗಳ ಪ್ರಭಾವ, ಕನ್ನಡ ಪುಸ್ತಕಗಳ ಓದು ಇವೆಲ್ಲ ತನ್ನನ್ನು ಹೊಸಬನನ್ನಾಗಿ ಮಾಡಿದವು’ ಎಂದವರು ಸದಾ ಸ್ಮರಿಸುತ್ತಾ ಬಂದಿದ್ದರು.

    ,ಕನ್ನಡದ ಮೇರು ಸಾಹಿತಿ ಅನಕೃ ಅವರ ಉತ್ಕಟ ಅಭಿಮಾನಿ ಶಿಮುಂಜೆಯವರು. ಹೀಗಾಗಿ ಬಾಲ್ಯದಲ್ಲೇ ಓದಿನ ಗೀಳು ಅವರಿಗೆ ಅಂಟಿಕೊಂಡಿತು. ದೂರದ ಮುಂಬಯಿಯಲ್ಲೂ ಅನಕೃ ಪುಸ್ತಕಗಳಿಗೆ ಅಡ್ವಾನ್ಸ್ ಬುಕ್ಕಿಂಗ್ ! ಕನ್ನಡ ಗದ್ಯ ಸಾಹಿತ್ಯದ ಓಟ; ಓಜಸ್ಸುಗಳು ಅವರಿಗೆ ಪ್ರಿಯವೆನಿಸಿದವು. ಮುಂಬೈ ಮಹಾನಗರದಲ್ಲಿ ಬಹುಭಾಷೆಗಳ ನಡುವೆ ಬದುಕು ಕಟ್ಟಿಕೊಂಡು ಸಾಂಸ್ಕೃತಿಕ ಸರದಾರನಂತೆ ಕೆಲಸ ಮಾಡಿದರು . ತುಳು, ಕನ್ನಡ, ಹಿಂದಿ,ಮರಾಠಿ, ಗುಜರಾತಿ, ಬಂಗಾಳಿ, ಸಿಂಧೀ, ಪಂಜಾಬಿ ಸಿನೇಮಾ ನಾಟಕಗಳನ್ನು ನೋಡಿ, ಕಂಡು ಆನಂದಿಸುವ ಅಪೂರ್ವ ಅವಕಾಶ ಅವರಿಗೆ ಎಳವೆಯಲ್ಲೇ ಸಿಕ್ಕಿತು. ಅನುವಾದದಲ್ಲಿ ವಿಶೇಷ ಆಸ್ಥೆ ಬಲಿಯಿತು , ಪರಿಣಾಮ 1959 ರಲ್ಲೇ ಖ್ಯಾತ ಹಿಂದಿ ಲೇಖಕ ವಿಷ್ಣು ಪ್ರಭಾಕರ್ ಅವರ ಐತಿಹಾಸಿಕ ಕೃತಿ , ‘ನವಪ್ರಭಾತ’ ಎಂಬ ಕಿರು ನಾಟಕವನ್ನು ಕನ್ನಡಕ್ಕೆ ತಂದರು. ಪ್ರಸಿದ್ಧ ರಂಗ ನಿರ್ದೇಶಕ ಸದಾನಂದ ಸುವರ್ಣ ಅವರು ಈ ನಾಟಕವನ್ನು ‘ಧರ್ಮಚಕ್ರ’ ಎಂಬುದಾಗಿ ಹೆಸರಿಸಿ ರಂಗದ ಮೇಲೆ ತಂದರು. ಆಗ ಶಿಮುಂಚೆ ಅವರೊಳಗಿದ್ದ ‘ನಟ’ ಪ್ರತ್ಯಕ್ಷನಾದ. ಸದಾನಂದ ಸುವರ್ಣ, ಕೆ. ಜೆ. ರಾವ್, ಸುಬ್ಬ ನರಸಿಂಹ ಮೊದಲಾದವರ ನಾಟಕಗಳಲ್ಲಿ ಮನಸೋಕ್ತ ಅಭಿನಯ, ಅಭಿಮಾನಿಗಳಿಂದ ಮುಕ್ತ ಕಂಠದ ಪ್ರಶಂಸೆ. ಇದರ ಬೆನ್ನಲ್ಲೇ ಬೆಳ್ಳಿತೆರೆಗೆ ಬುಲಾವ್, ಪ್ರತಿಭಾವಂತ ನಿರ್ದೇಶಕ ಗಿರೀಶ ಕಾಸರವಳ್ಳಿ ನಿರ್ದೇಶನದ ಸದಾನಂದ ಸುವರ್ಣ ಅವರು ನಿರ್ಮಿಸಿದ ‘ಘಟಶ್ರಾದ್ದ’ದ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ. ಅದರಲ್ಲೂ ಶಿಮುಂಜೆ ಅವರು ಮಿಂಚಿದರು. 1977 ರಲ್ಲಿ ‘ಘಟಶ್ರಾದ್ಧ’ಕ್ಕೆ ಸ್ವರ್ಣ ಕಮಲ ಪ್ರಶಸ್ತಿ; ಆ ಸಿನಿಮಾ ಒಂದು ಅಪೂರ್ವ ಅನುಭವ ಅವರಿಗೆ.ಮುಂದೆ ‘ಅಣ್ಣನ ಮದುವೆ’, ‘ಆಕಸ್ಮಿಕ’, ‘ಡೊಂಕು ಬಾಲದ ನಾಯಕರು’, ‘ಗುಡ್ಡದ ಭೂತ’, ‘ಸುಳಿ’, ‘ಸೂತ್ರ’, ‘ಚಕ್ರವ್ಯೂಹ’, ‘ಯಾರು ನನ್ನವರು’ ಮೊದಲಾದ ಪ್ರಮುಖ ನಾಟಕಗಳಲ್ಲಿ ಉತ್ತಮ ನಟನಾಗಿ ಶಿಮುಂಜೆ ಹೆಸರು ಗಳಿಸಿದರು.

    ಇತ್ತ ಅನುವಾದ ಕಾರ್ಯದಲ್ಲೂ ಅವರ ದುಡಿಮೆ ದೊಡ್ಡದು . ಹಿಂದಿ, ಮರಾಠಿ, ಗುಜರಾತಿಯ ಶ್ರೇಷ್ಠ ಕತೆ, ನಾಟಕ, ಲೇಖನಗಳನ್ನು ಅವರು ಕನ್ನಡಕ್ಕೆ ತಂದರು. ಹುತಾತ್ಮರು, ನಿಯೋಗ, ಹಣತೆ, ಯಾರು ನನ್ನವರು (ಪ್ರಸಿದ್ಧ ಮರಾಠಿ ನಾಟಕ), ನಾನು… ನೀನು… ಮತ್ತು (ಚಂದ್ರಕಾಂತ ಭಕ್ಷೀ ಅವರ ಗುಜರಾತಿ ಸಣ್ಣಕತೆಗಳ ಅನುವಾದ) ಮೊದಲಾದ ಕೃತಿಗಳನ್ನು ಕನ್ನಡಕ್ಕೆ ತಂದ ಸಾಧನೆ ಅವರದು. ಅವರು ಅನುವಾದಿಸಿದ ಕೆಲವು ಒಳ್ಳೆಯ ಕೃತಿಗಳು ಇನ್ನೂ ಬೆಳಕು ಕಂಡಿಲ್ಲ ಎನ್ನುವುದು ಬೇಸರದ ಸಂಗತಿ. ಹೊರನಾಡಿನಲ್ಲಿದ್ದುಕೊಂಡು ಕೃತಿಗಳನ್ನು ಬರೆದು ಅಚ್ಚುಹಾಕಿಸಿ ಮಾರಾಟ ಮಾಡುವಾಗ ಲೇಖಕ ಸುಸ್ತು ಹೊಡೆದು ಹೋಗುತ್ತಾನೆ. ಶಿಮುಂಜೆ ಅವರೂ ಅದಕ್ಕೆ ಹೊರತಲ್ಲ. ಆದರೂ ಅವರು ಹೊಸ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವೀ ತುಳು ಸಾಹಿತ್ಯ ವಲಯದಲ್ಲಿಯೂ ಮಿಂಚಿದರು.

    ಶಿಮುಂಜೆ ಅವರು ಮೂಲತಃ ಚಿಂತನಶೀಲ ಕವಿ. ಅವರದು ಮೃದು ಮಾತು. ಪಕ್ವ ಮನಸ್ಸು ‘ನಿತ್ಯ ಆನಂದ ವಚನ’ ಮುಕ್ತಕಗಳ ಮಾಲೆಯ ಬಹು ಸಂಪುಟಗಳು ಅವರಿಗೆ ವಿಶೇಷವಾದ ಸಿದ್ಧಿ ಪ್ರಸಿದ್ಧಿಯನ್ನು ತಂದುಕೊಟ್ಟಿವೆ . ಹೀಗಾಗಿ ಆಧುನಿಕ ವಚನಕಾರರ ಸಾಲಿನಲ್ಲಿಯೂ ಶಿಮುಂಜೆ ಅವರಿಗೆ ಶಾಶ್ವತ ಕೀರ್ತಿ ಲಭಿಸಲಿದೆ. ಕನ್ನಡದಂತೆ ಅವರು ತುಳುವಿನಲ್ಲಿಯೂ ದೊಡ್ಡ ಸಾಧನೆಗೈದಿದ್ದಾರೆ. ಸಾವಿರಾರು ಚುಟುಕುಗಳನ್ನು ಬರೆದು ‘ತುಳು ಚುಟುಕು ಬ್ರಹ್ಮ ‘ನಾಗಿ ಕಂಗೊಳಿಸಿದ್ದಾರೆ. ‘ಯಾನ್ ಪಣ್ಣಿನಿ ಇಂಚ’ ಎಂಬ ಹತ್ತು ಸಂಪುಟಗಳಲ್ಲಿ ಈ ಸಾವಿರಾರು ಮುಕ್ತಕಗಳನ್ನು ಪ್ರಕಟಿಸಿ ವಿವಿಧ ಸಂಘ ಸಂಸ್ಥೆಗಳ, ದಾನಿಗಳ ನೆರವಿನಿಂದ ಮೂವತ್ತು ಸಾವಿರ ಪ್ರತಿಗಳನ್ನು ಅಚ್ಚು ಹಾಕಿಸಿ ಉಚಿತವಾಗಿ ಹಂಚಿದ್ದಾರೆ! ಇದು ಭಾರತೀಯ ಭಾಷೆಗಳ ಇತಿಹಾಸದಲ್ಲೇ ಒಂದು ಅನನ್ಯ ಸಾಧನೆ. ಚಿಕ್ಕ ಚಿಕ್ಕ ಭಾವಗಳನ್ನು ಚೊಕ್ಕವಾಗಿ, ಮನಸ್ಸಿಗೆ ನಾಟುವಂತೆ ಹೇಳಬಲ್ಲ ಸಾಮರ್ಥ್ಯ ಅವರಿಗೆ ಸಿದ್ಧಿಸಿತ್ತು . ಉದಾಹರಣೆಗೆ ಅವರ ಎರಡು ಮುಕ್ತಕಗಳನ್ನು ನಾವಿಲ್ಲಿ ಗಮನಿಸಬಹುದು.

    ‘ಮಧುರವಾಗಿ ಮಾತಾಡುವವ ಮೆಣಸನ್ನು ಮಾರಬಲ್ಲನಯ್ಯಾ ಕಹಿಯಾಗಿ ಮಾತಾಡುವವ ಜೇನನೂ ಮಾರಲಾರನಯ್ಯಾ ಗುರುನಿತ್ಯಾನಂದ’
    ‘ಅರಮನೆಗೆ ಆಗಮಿಸಿದ ಸನ್ಯಾಸಿಯ ಸತ್ಕರಿಸಿ ರಾಜ ಕೇಳಿದನಂತೆ –
    ನಿಮಗೇನು ಬೇಕು ಹೇಳಿ
    ಜಿಗಿದೆದ್ದು ನಿಂತು ಸನ್ಯಾಸಿ ಹೇಳಿದವನಂತೆ ಬೇಡುವವನಲ್ಲಿ – ಬೇಡುವವ ನಾನಲ್ಲ ಕೇಳಿ –
    ಗುರು ನಿತ್ಯಾನಂದ’

    ಹೀಗೆ ಶಿಮುಂಜೆ ವಿರಚಿತ ಮುಕ್ತಕಗಳು ಸರಳವಾಗಿವೆ, ಸುಂದರವಾಗಿವೆ. ಎಲ್ಲ ಅನುಭವಗಳ ಅಭಿವ್ಯಕ್ತಿಗೂ ಈ ಮುಕ್ತಕ ಮಾಧ್ಯಮವಾಗಬಲ್ಲುದು ಎಂಬುದನ್ನು ಅವರು ತೋರಿಸಿ ಕೊಟ್ಟಿದ್ದಾರೆ. ಶಿಮುಂಜೆ – ಅವರು ತುಳು ಹಾಗೂ ಕನ್ನಡ ಭಾಷೆಯಲ್ಲಿ ಬರೆದಿರುವ ಈ ಮುಕ್ತಕಗಳನ್ನು ‘ನಿತ್ಯೋಪನಿಷತ್ತುಗಳು’ ಎಂದು ವಿದ್ವಾಂಸರು ಕೊಂಡಾಡಿದ್ದಾರೆ. ತುಳು ಭಾಷೆಗೆ ಅವರು ಅನುವಾದಿಸಿದ ಮರಾಠಿ ನಾಟಕ ‘ಜೋಕುಲು ಬಾಲೆಲು’ ರಂಗ ಮಂಚದಲ್ಲಿ ಹೆಸರು ಮಾಡಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದೊಂದು ಒಳ್ಳೆಯ ಅನುವಾದಿತ ನಾಟಕ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ.
    ಮುಂಬಯಿಯ ಸಂಘ ಸಂಸ್ಥೆಗಳೂ ಶಿಮುಂಜೆ ಅವರ ಜೀವನ ಸಾಧನೆಯನ್ನು ಗುರುತಿಸಿ ಸತ್ಕರಿಸಿವೆ. ಕರ್ನಾಟಕ ಸಂಘದ ವರದರಾಜ ಆದ್ಯ ಪ್ರಶಸ್ತಿ, ಐ ಲೇಸಾದ ವಯೋ ಸಮ್ಮಾನ್, ಮುಂಬೈ ವಿ. ವಿ. ಕನ್ನಡ ವಿಭಾಗದ ಗೌರವಕ್ಕೂ ಅವರು ಭಾಜನರಾಗಿದ್ದರು. ಅವರ ಬದುಕು ಬರಹವನ್ನು ಅಧ್ಯಯನ ಮಾಡಿ ಡಾ. ಪೂರ್ಣಿಮಾ ಶೆಟ್ಟಿ ಅವರು ಮುಂಬೈ ವಿ. ವಿ. ಯಿಂದ ಎಂ. ಫಿಲ್ ಪದವಿಯನ್ನು ಪಡೆದುಕೊಂಡಿದ್ದರು. ಆ ಸಂಪ್ರಬಂಧ ಕೃತಿ ರೂಪದಲ್ಲಿ ಪ್ರಕಟಣೆ ಕಂಡಿದೆ. ಸಂಪ್ರೀತಿ ಶಿಮುಂಜೆ ಅವರಿಗೆ ಅರ್ಪಿಸಲಾದ ಗೌರವ ಗ್ರಂಥ. ನಮ್ಮ ನಾಡಿನ ಹಿರಿಯ ಕಲಾವಿದರಲ್ಲಿ ಶಿಮುಂಜೆ ಅವರೂ ಒಬ್ಬರಾಗಿದ್ದರು.

    ಮುಂಬಯಿಯಲ್ಲಿ ಸದ್ದು ಗದ್ದಲವಿಲ್ಲದೆ ಯಾವುದೇ ಪ್ರಚಾರದ ಗೀಳು ಅಂಟಿಸಿಕೊಳ್ಳದೆ, ಯಾವುದೋ ಒಂದು ತತ್ವ ಸಿದ್ಧಾಂತಕ್ಕೆ ಕಟ್ಟು ಬೀಳದೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಶಿಮುಂಜೆ ಅವರು ‘ಆರಕ್ಕೇರದ ಮೂರಕ್ಕಿಳಿಯದ’ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು. ಅವರ ಸಾಹಿತ್ಯ ಸಾಧನೆಯನ್ನು ಹಿರಿಯ ಸಾಹಿತಿ ರತ್ನಾಕರ ಶೆಟ್ಟಿ ಅವರು ಒಂದು ಕಡೆ ಹೀಗೆ ಗುರುತಿಸಿದ್ದಾರೆ,’ಶಿಮುಂಜೆ ಪರಾರಿ’ ಇದೊಂದು ಮಾರ್ಮಿಕ ಕಾವ್ಯನಾಮ. ಪರಾರಿ ಅವರಿಗೆ ಕುತೂಹಲದ ಕಣ್ಣು ಜನ್ಮಜಾತವಾಗಿಯೇ ಬಂದಿರಬೇಕು. ಎಲ್ಲೆಡೆ ಕಣ್ಣಾಡಿಸುವ ಅಂತೆಯೇ ಕೈಯಾಡಿಸುವ ಬುದ್ದಿ ಅವರದು. ಒಮ್ಮೆಲೆ ಬರವಣಿಗೆಯನ್ನೆಲ್ಲ ತೊರದು ನಾಟಕ, ಸಿನಿಮಾ, ದೃಶ್ಯ ಮಾಧ್ಯಮಗಳಲ್ಲಿ ತಾನೇ ನಟನಾಗಿ ಅಭಿನಯ ಕುಶಲತೆಯನ್ನು ತೋರಿ ಜನಮೆಚ್ಚುಗೆ ಗಳಿಸಿದ್ದು, ತಾನು ಓದಿ ಮೆಚ್ಚಿದ ಅನ್ಯಭಾಷಾ ಲೇಖಕರ ಬರೆಹಗಳನ್ನು ಕನ್ನಡ ಬಾಂಧವರೂ ಓದಿ ಆನಂದಿಸಲೆಂದು ಕೃತಿಗಳನ್ನು ಹೊರತಂದ ಗಮನಾರ್ಹ ಲೇಖಕ. ಈ ಹೊಗಳಿಕೆಯ ಮಾತಿನಲ್ಲಿ ತಥ್ಯವಿದೆ. “ಜನ ಓದಿ ಖುಷಿಪಟ್ಟು ತನ್ನೊಡನೆ ಆ ಸಂತೋಷವನ್ನು ಹಂಚಿಕೊಂಡಿದ್ದಾರೆ. ಇದಕ್ಕಿಂತ ದೊಡ್ಡ ಪ್ರಶಸ್ತಿ ಇನ್ನಾವುದಿದೆ?” ಎಂದವರು ಪ್ರಾಂಜಲ ಮನಸ್ಸಿನಿಂದ ಹೇಳಿಕೊಂಡಿದ್ದರು.ಅವರು ಹಾಸ್ಯ ಪ್ರಿಯ, ನೇರ ನಡೆನುಡಿಯ ಮನುಷ್ಯ.ಸರಳ ಸಜ್ಜನಿಕೆಯ ಶಿಮುಂಜೆ ಅವರದು ಸುಸಂಸ್ಕೃತ ವ್ಯಕ್ತಿತ್ವ, ಸಾರ್ಥಕ ಬದುಕು.

    – ಡಾ. ಜಿ. ಎನ್. ಉಪಾಧ್ಯ,

    ಮುಂಬಯಿ ವಿಶ್ವ ವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು

    Share. Facebook Twitter Pinterest LinkedIn Tumblr WhatsApp Email
    Previous Article‘ಕಾವ್ಯ ಸಂಸ್ಕೃತಿ ಯಾನ’ ಜನರೆಡೆಗೆ ಕಾವ್ಯ ತೃತೀಯ ಕವಿಗೋಷ್ಠಿ | ಸೆಪ್ಟೆಂಬರ್ 28
    Next Article ಪುತ್ತೂರಿನಲ್ಲಿ ಗಮಕ ವಾಚನ- ವ್ಯಾಖ್ಯಾನ
    roovari

    Comments are closed.

    Related Posts

    ಬಾನು ಮುಷ್ತಾಕ್‌ ಕೃತಿಗೆ ಪ್ರತಿಷ್ಠಿತ ಅಂತರರಾಷ್ಚ್ರೀಯ ‘ಬೂಕರ್ ಪ್ರಶಸ್ತಿ’

    May 21, 2025

    ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಮೇ 31

    May 21, 2025

    ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಿರಿಯ ಚೇತನ ಪ್ರೊ. ಹೇರಂಜೆ ಕೃಷ್ಣ ಭಟ್ಟರ ನುಡಿ ನಮನ

    May 21, 2025

    ಕರ್ನಾಟಕ ನಾಟಕ ಅಕಾಡೆಮಿಯಿಂದ ತಿಂಗಳ ನಾಟಕ ಸಂಭ್ರಮ

    May 21, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.