ಬೆಂಗಳೂರು : ವರ್ಷ ಪೂರ್ತಿ ಒಂದಲ್ಲ ಒಂದು ಬಗೆಯ ನೃತ್ಯ ಚಟುವಟಿಕೆಯಲ್ಲಿ ನಿರತವಾದ ‘ಅದ್ಯಷ ಫೌಂಡೇಷನ್’ ಖ್ಯಾತ ಒಡಿಸ್ಸಿ ನೃತ್ಯ ಸಂಸ್ಥೆಯು, ವಿವಿಧ ಹೊಸ ಪರಿಕಲ್ಪನೆ ಮತ್ತು ಪ್ರಯೋಗಗಳಲ್ಲಿ ತೊಡಗಿಕೊಂಡಿದ್ದು ವಿಶೇಷ ನೃತ್ಯೋತ್ಸವಗಳನ್ನು ಆಯೋಜಿಸುತ್ತ ಬಂದಿದೆ. ಸಂಸ್ಥೆಯ ಕಲಾತ್ಮಕ ನಿರ್ದೇಶಕಿ, ಅನ್ವೇಷಕಿ ಮತ್ತು ಪ್ರಖ್ಯಾತ ಒಡಿಸ್ಸಿ ನೃತ್ಯಕಲಾವಿದೆ, ಗುರು ಸರಿತಾ ಮಿಶ್ರ ಇವರದು ಬಹುಮುಖ ಪ್ರತಿಭೆ. ದೇಶ-ವಿದೇಶಗಳಲ್ಲಿ ಇವರು ಅಸಂಖ್ಯ ನಾಟ್ಯಪ್ರದರ್ಶನಗಳನ್ನು ನೀಡುತ್ತ ಬಂದಿರುವುದಲ್ಲದೆ, ಅಪಾರ ಶಿಷ್ಯರಿಗೆ ಒಡಿಸ್ಸಿ ನೃತ್ಯವನ್ನು ಕಲಿಸುತ್ತಿರುವ ಕ್ರಿಯಾಶೀಲೆ. ಭಾರತೀಯ ನೃತ್ಯ ಪರಂಪರೆಯ ರಕ್ಷಣೆ-ಅಭಿವೃದ್ಧಿ ‘ಅದ್ಯಷ’ದ ಆದ್ಯ ಉದ್ದೇಶ.
ಒಡಿಸ್ಸಿ ನೃತ್ಯದ ಬಗ್ಗೆ ಆಳವಾದ ಪಾಂಡಿತ್ಯ ಹೊಂದಿರುವ ಸರಿತಾ ಪ್ರಾಮಾಣಿಕತೆ, ಬದ್ಧತೆಯೊಂದಿಗೆ ಪರಿಶ್ರಮ, ಶಿಸ್ತನ್ನು ತಮ್ಮ ಜೀವನಾದರ್ಶದ ತತ್ವಗಳಾಗಿ ರೂಢಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಒಡಿಸ್ಸಿ ನಾಟ್ಯ ಕಲಿಸುವ ಅವರದೇ ಆದ ‘ಅದ್ಯಷ’ ನೃತ್ಯ ಶಾಲೆಯಿದೆ. ಗುರು ದೇವಪ್ರಸಾದ್ ಮತ್ತು ಕೇಳುಚರಣ್ ಮಹಾಪಾತ್ರ ನೃತ್ಯ ಶೈಲಿಯನ್ನು ಅನುಸರಿಸುವ ಸರಿತಾ, ದೂರದರ್ಶನದಲ್ಲಿ ಗ್ರೇಡೆಡ್ ಆರ್ಟಿಸ್ಟ್ ಮತ್ತು ಐ.ಸಿ.ಸಿ.ಆರ್. ಹಾಗೂ ಸ್ಪಿಕ್ ಮಕೆಯ ಮಾನ್ಯತೆ ಪಡೆದ ಕಲಾವಿದೆ. ಕಲಿಯುವ ಹಂತದಲ್ಲಿ ಸತತ ಹತ್ತು ವರ್ಷಗಳು ಭಾರತ ಸರ್ಕಾರದ ಸ್ಕಾಲರ್ಷಿಪ್ ಗಳಿಸಿದ ಹೆಗ್ಗಳಿಕೆಯೂ ಅವರದು.
ಪ್ರತಿವರ್ಷ ವಿದೇಶದಲ್ಲಿ ನಿರಂತರ ಕಾರ್ಯಾಗಾರ, ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸಗಳೊಂದಿಗೆ ತಮ್ಮ ಮನೋಹರ ನೃತ್ಯ ಪ್ರದರ್ಶನಗಳನ್ನು ನೀಡುತ್ತಿರುವ ಸರಿತಾ ಸಾಧನೆಯ ಪಥದಲ್ಲಿ ತಮ್ಮ ವಿಶಿಷ್ಟ ಛಾಪನ್ನೊತ್ತಿದ್ದಾರೆ. ಸುಮಾರು ಹದಿನೈದು ರಾಷ್ಟ್ರಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದ್ದು, ಅಲ್ಲಿನ ರಸಿಕರ ಮನರಂಜಿಸಿ, ನೃತ್ಯಾಕಾಂಕ್ಷಿಗಳಿಗೆ ವಿಸ್ತೃತ ಜ್ಞಾನದಾಸೋಹವನ್ನು ನೀಡಿದ್ದಾರೆ. ಲ್ಯಾಟಿನ್ ಅಮೇರಿಕಾ, ಸ್ಟಾಕ್ಹೋಮ್, ಕ್ರೋಯಟಿಯ, ಪೋರ್ಚುಗಲ್,ಅರ್ಜೆಂಟಿನಾ, ಪೆರು, ಬ್ರೆಜಿಲ್ ಮುಂತಾದೆಡೆ ಭಾರತೀಯ ರಾಯಭಾರಿ ಕಛೇರಿಯ ಆಯೋಜನೆಯಲ್ಲಿ ನೃತ್ಯಪ್ರದರ್ಶನ ನೀಡಿದ್ದಾರೆ. ಜೊತೆಗೆ ಭಾರತದಲ್ಲಿ ಅನೇಕ ಪ್ರತಿಷ್ಟಿತ ನೃತ್ಯೋತ್ಸವಗಳಲ್ಲಿ ಪಾಲ್ಗೊಂಡಿರುವ ಹೆಮ್ಮೆ ಅವರದು. ಅಮೇರಿಕಾದ ಒಹಾಯಿಯೋ, ಚಿಕಾಗೋ, ನಶ್ವಿಲ್ಲೇ ಮುಂತಾದೆಡೆ ಅತ್ಯುತ್ತಮ ನೃತ್ಯಪ್ರದರ್ಶನಕ್ಕೆ ಮೆಚ್ಚುಗೆಯ ಪ್ರಶಸ್ತಿಗಳು ಹಾಗೂ ಭುವನೇಶ್ವರದ ಒರಿಸ್ಸಾದಲ್ಲಿ ಪ್ರತಿಭಾ ಸಮ್ಮಾನ್, ನೃತ್ಯ ಕಲಿಕಾ, ನೃತ್ಯಶ್ರೀ, ಏಕಲವ್ಯ ಮತ್ತು ಲಾಸ್ಯಕಲಾ ಬಿರುದು, ಪ್ರಶಸ್ತಿಗಳು ಸಂದಿವೆ. ಐ.ಸಿ.ಸಿ.ಆರ್. ನಿಂದ ಕಲಾಯೋಗಿ ಪ್ರಶಸ್ತಿ, ಬೆಂಗಳೂರಿನ ನೃತ್ಯಾಂತರಂಗದಿಂದ ನೃತ್ಯ ಭಾರತಿ, ಯರ್ನಾಕುಲಂ ಸತ್ಯಾಂಜಲಿ ಕೂಚಿಪುಡಿ ಅಕಾಡೆಮಿಯಿಂದ ನಾಟ್ಯಕಲಾಪ್ರಜ್ಞಾ, ವಿಶಾಖಪಟ್ಟಣದ ನಟರಾಜ ಡಾನ್ಸ್ ಅಕಾಡೆಮಿಯಿಂದ ನಾಟ್ಯವೇದ ಮುಂತಾದ ಅಸಂಖ್ಯ ಬಿರುದು-ಪ್ರಶಸ್ತಿಗಳು ಸರಿತಾ ಅವರನ್ನು ಹಿಂಬಾಲಿಸಿವೆ.
ಈ ಶಿಶಿರ ಮಾಸವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ‘ಅದ್ಯಷ ಫೌಂಡೇಷನ್’ ಸಂಸ್ಥೆಯು ‘ಶಿಶಿರ ಛಂದ’ ನೃತ್ಯೋತ್ಸವವನ್ನು ತನ್ನ 7ನೆಯ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 11-11-2023 ಶನಿವಾರ ಸಂಜೆ 5 ಗಂಟೆಗೆ ಜಯನಗರದ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ಸುಮನೋಹರ ನಾಟ್ಯ ಪ್ರಸ್ತುತಗಳೊಂದಿಗೆ ಸಂಭ್ರಮಾಚರಣೆಯನ್ನು ಆಯೋಜಿಸಿದೆ.
‘ಅಹೆ ನೀಲಾ ಶೈಲ’ ಎಂಬುದು ‘ಅದ್ಯಷ ಫೌಂಡೇಷನ್’ ಅರ್ಪಿಸುವ ನಯನ ಮನೋಹರವಾದ ಒಡಿಸ್ಸಿ ನೃತ್ಯದ ವಿಶಿಷ್ಟ ನವನಿರ್ಮಾಣ. ಅನಂತರ ಖ್ಯಾತ ನೃತ್ಯಕಲಾವಿದ ಸೂರ್ಯ ರಾವ್ ಅವರಿಂದ ‘ರಾವಣ’ ಭರತನಾಟ್ಯ ನೃತ್ಯಾರ್ಪಣೆ. ದೈವೀಕ ಆಯಾಮದ ‘ತ್ರಿಧಾರಾ’ -ಭರತನಾಟ್ಯ ನಿಪುಣೆ ಶೀಲಾ ಚಂದ್ರಶೇಖರ್, ಶೋಭಾ ಶಶಿಕುಮಾರ್ ಮತ್ತು ಸೌಂದರ್ಯ ಶ್ರೀವತ್ಸ ಸಾದರಪಡಿಸುವ ಮನಸೆಳೆವ ನೃತ್ಯರೂಪಕ. ಈ ಸುಂದರ ವರ್ಣರಂಜಿತ ನೃತ್ಯಾವಳಿಗಳನ್ನು ಕಣ್ತುಂಬಿಕೊಳ್ಳಲು ಸರ್ವರಿಗೂ ಆದರದ ಸ್ವಾಗತ.
– ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, ‘ಅಭಿನವ ಪ್ರಕಾಶನ’ ದ ಸ್ಥಾಪಕಿ, ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ‘ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡ’ದ ಅಧ್ಯಕ್ಷೆ.