ಬೆಂಗಳೂರು : ‘ಪದ’ ಬೆಂಗಳೂರು ಆಯೋಜಿಸುವ ‘ಶಿಶಿರ ರಂಗೋತ್ಸವ’ದಲ್ಲಿ ಮಹಿಳಾ ಏಕವ್ಯಕ್ತಿ ನಾಟಕಗಳ ಮೂರು ಪ್ರದರ್ಶನಗಳು ದಿನಾಂಕ 10-12-2023ರ ಭಾನುವಾರದಂದು ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ನಯನ ರಂಗಮಂದಿರದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಯಲಿದೆ.
ಬೆಳಿಗ್ಗೆ 10.30 ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ರಂಗಕಲಾವಿದೆಯಾದ ಡಾ. ಲಕ್ಷ್ಮೀ ಚಂದ್ರಶೇಖರ್, ಲೇಖಕರು ಮತ್ತು ಕವಿಯತ್ರಿಯಾದ ವಸುಂಧರ, ಅಧಿಕಾರಿ ಕರ್ನಾಟಕ ಆಡಳಿತ ಸೇವೆ ಹಾಗೂ ರಂಗ ನಿರ್ದೇಶಕಿಯಾದ ಡಾ. ಸುಷ್ಮ ಎಸ್.ವಿ. ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಮಹಿಳಾ ಏಕವ್ಯಕ್ತಿ ನಾಟಕಗಳಾದ ‘ಅಧಿನಾಯಕಿ’, ‘ತಾಯಿಯಾಗುವುದೆಂದರೆ’ ಹಾಗೂ ‘ಸಕುಬಾಯಿ’ ಪ್ರದರ್ಶನಗೊಳ್ಳಲಿದೆ.
ಬೆಳಿಗ್ಗೆ ಘಂಟೆ 11.30 ರಿಂದ ಎಂ.ಎಸ್. ಲಕ್ಷ್ಮೀ ಕಾರಂತ ಅಭಿನಯಿಸುವ ‘ಅಧಿನಾಯಕಿ’ ನಾಟಕ ಪ್ರದರ್ಶನಗೊಳ್ಳಲಿದ್ದು, ನಾಟಕದ ರಚನೆ, ವಿನ್ಯಾಸ ಮತ್ತು ನಿರ್ದೇಶನ ಡಾ. ಬೇಲೂರು ರಘುನಂದನ್ ಅವರದ್ದು. ವೈಷ್ಣವ ರಾವ್ ಬಿ. ಎಸ್. ಸಂಗೀತ ನಿರ್ದೇಶನ ಮತ್ತು ಗಾಯನ ಮಾಡಲಿದ್ದು, ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ ರವಿಶಂಕರ್ ಬೆಳಕು ಅವರದ್ದು.
ಅಧಿನಾಯಕಿ :
ಹೆಣ್ಣು ಸದಾ ಒಂದು ಮಿತಿಯಲ್ಲೇ ಇರಬೇಕು ಅಂತ ಸಮಾಜ ಅವಳನ್ನು ಕೂಡಿಟ್ಟಿದೆ… ಅವಳೆಷ್ಟೇ ಸಾಧನೆಗೈದರೂ. ಮನೆ-ಸಮಾಜ ಏನ್ನನ್ನೇ ಸಮರ್ಥವಾಗಿ ಸಂಭಾಳಿಸಿದರೂ, ಕೊನೆಯ ಮಾತು ಮಾತ್ರ – ಅವಳು ಹೆಣ್ಣು”..!?
ರಾಣಿಯರ ಕಾಲದಿಂದಲೂ, ಸ್ತ್ರೀ ಭೋಗದ ವಸ್ತು… ಭೂಮಿಯೊಂದಿಗೆ ಹೆಣ್ಣನ್ನು ಗೆಲ್ಲುವುದು ಗಂಡಿನ ದಾರ್ಷ್ಟ್ಯದ ಉತ್ತುಂಗ…
ಚರಿತ್ರೆ ಅದೆಷ್ಟೋ ಮಹಿಳೆಯರ ಸಾಧನೆಗಳನ್ನು ಮರೆಮಾಚಿದೆ… ಎಷ್ಟೇ ಎತ್ತರಕ್ಕೇರಿದರೂ, ಅಡುಗೆಮನೆಗೆ ಹೆಣ್ಣನ್ನು ಸೀಮಿತಗೊಳಿಸುವ ಅಪ್ಯಾಯ ಓಲೈಕೆ ಸಮಾಜದ್ದು! ತನ್ನವರನ್ನು ಸದಾ ಓಲೈಸಿ ಬದುಕುವ ದೌರ್ಭಗ್ಯ ಹೆಣ್ಣಿನದ್ದು…!
ಪ್ರಜಾಪ್ರಭುತ್ವದಲ್ಲೂ ಮಹಿಳಾ ಸಚಿವೆಯರಿಗೆಷ್ಟು ಸ್ಥಾನವಿದೆ!? ಸಮಾನತೆಯ ಕಾಲ. ಅಕ್ಕನ ಚಳುವಳಿಯ ನಂತರವೂ ಯಾಕಿನ್ನೂ ಕಾವು ಪಡೆದುಕೊಂಡಿಲ್ಲ? ಈ ಎಲ್ಲಾ ಸ್ತ್ರೀ ಪರ ವಿಚಾರಧಾರೆಗಳನ್ನು ಜನರ ಮುಂದಿಟ್ಟು. ಅವರಲ್ಲೊಂದು ಜಾಗೃತಿಯ ಪ್ರಶ್ನೆ ಮೂಡಿಸುವುದು. “ಅಧಿನಾಯಕಿ” ಏಕ ವ್ಯಕ್ತಿ ಪ್ರಯೋಗದ ಉದ್ದೇಶ…
ಕಿಟಕಿಗಳಲ್ಲೇ ಹೆಣ್ಣು ಕಂಡ ಜಗತ್ತನ್ನು, ನಿರ್ದೇಶಕ ಡಾ. ಬೇಲೂರು ರಘುನಂದನ್ ಬಹಳ ಸುಂದರವಾಗಿ ಕಟ್ಟಿಕೊಟ್ಟಿದಾರೆ. ಭೂತ-ವರ್ತಮಾನಗಳೊಂದಿಗೆ ತೂಗುಯ್ಯಾಲೆ ಆಡುವ ಕಥಾವಸ್ತು, ಕಥೆಗಳ ಮೂಲಕವೇ ಅರಿವಿಗೆ ಒರೆ ಹಚ್ಚುತ್ತದೆ.
ಮದ್ಯಾಹ್ನ ಘಂಟೆ 2.30 ರಿಂದ ಪೂಜಾ ರಘುನಂದನ್ ರಚನೆ ಮತ್ತು ಅಭಿನಯಿಸುವ ‘ತಾಯಿಯಾಗುವುದೆಂದರೆ’ ನಾಟಕ ಪ್ರದರ್ಶನಗೊಳ್ಳಲಿದ್ದು, ಇದರ ರಂಗರೂಪ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನ ಕೃಷ್ಣಮೂರ್ತಿ ಕವತ್ತಾರ್ ಅವರದ್ದು.
ತಾಯಿಯಾಗುವುದೆಂದರೆ :
ಕರುಳ ತಂತಿ ಮಾಡಿ ನಾದ ಹದಗೊಳಿಸವುದು
ತಾಯಿ.. ಇದೊಂದು ಪದವಷ್ಟೇ ಆಗಿದ್ದರೆ ಏನಾದರೂ ಬರೆದು ಬಿಡಬಹುದಿತ್ತು. ತಾಯಿ ಏನನ್ನಾದರೂ ಬರೆಸುವ, ಏನನ್ನಾದರೂ ಮಾಡಿಸುವ ಅಂತರಂಗದ ಶಕ್ತಿ ಹಾಗು ಬಹಿರಂಗದ ‘ನಾನು’. ಇಂಥ ಒಂದು ತಾಯಿಯ ವಸ್ತವನ್ನಿಟ್ಟುಕೊಂಡು “ತಾಯಿಯಾಗುವುದೆಂದರೆ” ಎಂಬ ನಾಟಕ ಪ್ರದರ್ಶನ ನಿಜಕ್ಕೂ ಅತ್ಯಂತ ಸವಾಲಿನ ಕೆಲಸ. ಪೂಜಾ ರಘುನಂದನ್ ಅವರ ಜೀವನ ಕಥೆ ಇದು. ಅವರು ಅನುಭವಿಸಿದ ದುಃಖದುಮ್ಮಾನ, ಖುಷಿ, ಸವಾಲು ಹಾಗು ಪರಿಹಾರದ ಮೊತ್ತವೇ ‘ತಾಯಿಯಾಗುವುದೆಂದರೆ’. ಎಷ್ಟೋ ಜನ ಮಕ್ಕಳ ಕಾರಣಕ್ಕೆ ಅನುಭವಿಸುವ ಪಡಿಪಾಟಲು, ಅದಕ್ಕಾಗಿ ನಡೆಸುವ ಪ್ರಯತ್ನ ಅದರಿಂದಾಗಿ ಸಮಾಜ ಹಾಗು ಕುಟುಂಬದಿಂದ ಕೇಳಬೇಕಾದ, ಕೇಳಿ ಅನುಭವಿಸಬೇಕಾದ ಸಂಗತಿಗಳು ಈ ನಾಟಕದಲ್ಲಿ ಶಕ್ತವಾಗಿ ವ್ಯಕ್ತವಾಗುತ್ತದೆ.
ದತ್ತು ಪ್ರಕ್ರಿಯೆ ಎಂಬುದು ಈ ಕಾಲದ ಪದ್ಧತಿಯೇನಲ್ಲ. ಆದರೆ ಈಗೀಗ ದತ್ತು ಪಡೆಯುವುದು ಅಷ್ಟು ಸುಲಭವಲ್ಲ ಎಂಬ ಮಾತು ನಿಜವೇ ಆದರೂ ಸಹ ಅದಕ್ಕೆ ಅನುಸರಿಸಬೇಕಾದ ಮಾರ್ಗದ ಕುರಿತು ಒಂದಿಷ್ಟು ಮಾಹಿತಿಯೂ ಸಹ ಈ ನಾಟಕದಲ್ಲಿ ದೊರೆಯುತ್ತದೆ. ದತ್ತು ತೆಗೆದುಕೊಂಡು ತಾಯಿಯಾದರೆ ಅದು ತಾಯ್ತನವಲ್ಲವೇ? ಸಾಲುಮರದ ತಿಮ್ಮಕ್ಕ ಎಂಬ ತಾಯಿ ಮರಗಳನ್ನೇ ಹೆತ್ತಳು. ತಾಯಿಯಾಗುವುದು ಎಂದರೆ ಈ ಸಮಾಜ ಹೇಳುವಂತೆ ನಿಜಕ್ಕೂ ಒಂದು ನಿರ್ದಿಷ್ಟ ವ್ಯಾಖ್ಯಾನ ಇದೆಯೇ…? ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಈ ಏಕವ್ಯಕ್ತಿ ರಂಗ ಪ್ರಯೋಗ.
ಸಂಜೆ ಘಂಟೆ 5.30 ರಿಂದ ನುಡಿ ಸುದರ್ಶನ ಅಭಿನಯದ ‘ಸಕುಬಾಯಿ’ ಕಾಮ್ ವಾಲಿ ನಾಟಕ ಪ್ರದರ್ಶನ ಗೊಳ್ಳಲಿದ್ದು, ನಾಟಕದ ವಿನ್ಯಾಸ ಮತ್ತು ನಿರ್ದೇಶನ ಹುಲುಗಪ್ಪ ಕಟ್ಟಿಮನಿ ಅವರದ್ದು, ಮೂಲ ನಾದಿರ ಬಬ್ಬರ್ ರಚಿತ ಈ ನಾಟಕವನ್ನು ಲೇಖಕ ಡಿ.ಎಸ್. ಚೌಗಲೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಅರುಣ್ ಮೂರ್ತಿ ಬೆಳಕಿನ ವಿನ್ಯಾಸ ಮಾಡಲಿದ್ದು, ಸಂಗೀತ ಉಮೇಶ್ ಸಾಲಿಯಾನ್ ಅವರದ್ದು.
ಸಕುಬಾಯಿ :
ದಿನನಿತ್ಯದ ಜಂಜಾಟದಲ್ಲಿ ಹೆಚ್ಚು ಗಮನಕ್ಕೆ ಬಾರದ ಆದರೆ ನಮ್ಮಲ್ಲಿ ಹಲವು ಮಂದಿ ಅತೀ ಹೆಚ್ಚು ಅವಲಂಬಿತರಾಗಿರುವ ಮನೆ ಕೆಲಸದವರ ಪ್ರತಿನಿಧಿಯೇ ಈ ಸಕುಬಾಯಿ.
ಮುಂಬೈ ಶಹರದ ಮಧ್ಯಮವರ್ಗದ ಮನೆಯೊಂದರಲ್ಲಿ ಕೆಲಸ ಮಾಡುವ ಮರಾಠ ಹೆಂಗಸು ಈಕೆ. ಬಾಲ್ಯದಿಂದಲೇ ತಾಯಿಯೊಂದಿಗೆ ಮನೆಗೆಲಸಕ್ಕೆ ಸೇರಿದ ಸಕುಬಾಯಿ, ಸಮಾಜದ ಹಲವಾರು ಸ್ತರಗಳಲ್ಲಿ ಗುರುತಿಸಿಕೊಂಡು, ವಿವಿಧ ರೀತಿಯ ಜನರ ಮನೆಗಳಲ್ಲಿ ಕೆಲಸ ಮಾಡುತ್ತಾ, ಅವರದ ಜೀವನದ ರಹಸ್ಯಗಳನ್ನು ತಿಳಿಯುತ್ತಾ, ತನ್ನ ಜೀವನದ ಅಂತರಂಗದೊಳಗಿಳಿಯುತ್ತಾ ಅನುಭವ ಪಡೆದುಕೊಂಡವಳು.
ಓದು, ವಿದ್ಯಾಭ್ಯಾಸದ ಬಗ್ಗೆ ಉತ್ಕಟ ಪ್ರೇಮ, ತಂದೆ, ತಾಯಿ, ತಂಗಿ ಸೇರಿದಂತೆ ಇಡೀ ಕುಟುಂಬದ ಮೇಲಿನ ನಿಷ್ಕಳಂಕ ಪ್ರೀತಿ ಇವುಗಳೊಂದಿಗೆ ತನ್ನ ಸುತ್ತಲಿನ ಸಮಾಜದ ಜೊತೆಗಿನ ಸಹಜೀವನ. ಬಡತನ, ಕಷ್ಟ ಸಹಿಷ್ಣುತೆಗಳ ನಡುವೆ ಜೀವನದ ಪ್ರೀತಿಯನ್ನು ಗಟ್ಟಿಯಾಗಿ ಉಳಿಸಿಕೊಂಡಾಕೆ. ಅದೇ ಪ್ರೀತಿಯನ್ನು ಉತ್ಸಾಹದಿಂದ ಪ್ರೇಕ್ಷಕರೊಂದಿಗೆ ಸಂಭಾಷಿಸುತ್ತಾ ಹಂಚಿಕೊಳ್ಳುವ ನಾಟಕ ‘ಸಕುಬಾಯಿ’.