ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ.) ಇದರ ವತಿಯಿಂದ ಪ್ರಿಯದರ್ಶಿನಿ ಪ್ರೌಢಶಾಲೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ದಿನಾಂಕ 01 ಜನವರಿ 2025ರ ಗುರುವಾರ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಶಿವಮೊಗ್ಗ ತಾಲೂಕು ಮಟ್ಟದ 12ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ.
ಬೆಳಗ್ಗೆ 10-30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಜಾವಳ್ಳಿಯ ಜ್ಞಾನದೀಪ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಕವಿ ಶ್ರೀಕಾಂತ ಪಿ.ಬಿ. ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ತಮ್ಮಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕವಯಿತ್ರಿ ಕುಮಾರಿ ಹಂಸಿಕಾ ಜೆ. ಉದ್ಘಾಟಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ. ಮಂಜುನಾಥ ಆಶಯ ಮಾತುಗಳನ್ನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಪ್ರಿಯದರ್ಶಿನಿ ಶಿಕ್ಷಣ ಸಂಸ್ಥೆ ಸ್ಥಾಪಕ ಅಧ್ಯಕ್ಷರಾದ ಎನ್. ರಮೇಶ್, ಕ.ಸಾ.ಪ. ತಾಲೂಕು ಅಧ್ಯಕ್ಷರಾದ ಶ್ರೀಮತಿ ಮಹಾದೇವಿ, ಸನ್ ಸಿಟಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಸಪ್ಪ ಎನ್., ವಿದ್ಯಾವರ್ಧಕ ಪಬ್ಲಿಕ್ ಸ್ಕೂಲ್ ಸಂಸ್ಥೆ ಕಾರ್ಯದರ್ಶಿ ಡಾ. ತಾನೋಜಿ ರಾವ್, ಶಿವಮೊಗ್ಗ ಪಬ್ಲಿಕ್ ಸ್ಕೂಲ್ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಅನ್ವರ್ ಭಾಗವಹಿಸಲಿದ್ದಾರೆ.
ನಂತರ ನಡೆಯುವ ‘ಕವಿಗೋಷ್ಠಿ’ಯಲ್ಲಿ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿ ಪ್ರಣವಿ ಕೆ.ವಿ., ‘ಪ್ರಬಂಧ ಬರಹ’ದಲ್ಲಿ ಶ್ರೀ ಆದಿಚುಂಚನಗಿರಿ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ದರ್ಶಿನಿ ಆರ್., ‘ಕಥಾಗೋಷ್ಠಿ’ಯಲ್ಲಿ ಪಿ.ಇ.ಎಸ್. ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಅಮೋಘ್ ಜಿ. ಅಡ್ಡೇರಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಶಾಲೆಗಳ ಮಕ್ಕಳು ತಮ್ಮ ಸ್ವರಚಿತ ಕವನ ಹಾಗೂ ಕಥೆಗಳನ್ನು ವಾಚಿಸಲಿದ್ದಾರೆ.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ನಂತರ ಜಿಲ್ಲಾ ಸಮ್ಮೇಳನ ಹಾಗೂ ದಿನಾಂಕ 14 ಮತ್ತು 15 ಜನವರಿ 2026ರಂದು ರಾಜ್ಯ ಮಟ್ಟದ ಸಮ್ಮೇಳನವು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿ ಏರ್ಪಡಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಡಿ. ಮಂಜುನಾಥ ತಿಳಿಸಿದ್ದಾರೆ. ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಮಕ್ಕಳ ಜೊತೆಯಲ್ಲಿ ಅವರ ಪೋಷಕರು ಭಾಗವಹಿಸಬೇಕು. ಅದರಿಂದ ಮಕ್ಕಳ ಓದಿನ ಜೊತೆಯಲ್ಲಿ, ಸೃಜನಶೀಲ ಚಟುವಟಿಕೆಗಳ ಕಡೆಗೂ ಪ್ರೋತ್ಸಾಹ ನೀಡಲು ನೆರವಾಗಲಿದೆ ಎಂದು ಮನವಿ ಮಾಡಿದ್ದಾರೆ.


