ಮಂಗಳೂರು: ಸಾಹಿತಿ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ಕಲ್ಕೂರ ಪ್ರತಿಷ್ಠಾನವು ಆಯೋಜಿಸಿದ್ದ ಕಾರಂತರ ಜನ್ಮದಿನಾಚರಣೆ ಹಾಗೂ ‘ಕಾರಂತ’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 10 ಅಕ್ಟೋಬರ್ 2024ರ ಗುರುವಾರದಂದು ಮಂಗಳೂರಿನ ಪತ್ತುಮುಡಿ ಸೌಧದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ 2024ನೇ ಸಾಲಿನ ಕಾರಂತ ಪ್ರಶಸ್ತಿಯನ್ನು ಬಹುಶ್ರುತ ವಿದ್ವಾಂಸ ಎಂ. ಪ್ರಭಾಕರ ಜೋಶಿ ಇವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಮಂಗಳೂರು ವಿ. ವಿ. ಕುಲಪತಿ ಪ್ರೊ. ಪಿ. ಎಲ್. ಧರ್ಮ ಮಾತನಾಡಿ “ಭವಿಷ್ಯವನ್ನು ಇಂದೇ ತಿಳಿಯುವ ಮಟ್ಟಕ್ಕೆ ತಂತ್ರಜ್ಞಾನ ಬೆಳೆದಿದೆ, ಸಂಶೋಧನೆಗಳು ನಡೆಯುತ್ತವೆ, ಆದರೆ ನಮ್ಮ ನಡುವಿನ ಸಾಧಕರ ಅದ್ಭುತ ಕೃತಿಗಳ ಬಗ್ಗೆ ಯುವಜನರಿಗೆ ಗೊತ್ತಿಲ್ಲ. ಪುಸ್ತಕಗಳ ಸ್ಪರ್ಶ ಸುಖ, ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಕಾರಂತರ ಜನ್ಮದಿನವು ಪುಸ್ತಕ ಓದುವ ಕ್ರಾಂತಿ ಸೃಷ್ಟಿಸಬೇಕು. ಕಾರಂತರ ‘ಚೋಮನ ದುಡಿ’ಯಲ್ಲಿ ಬರುವ ದುಡಿಯು ಕೇವಲ ಸಾಮಾಜಿಕ ಸಂಕೇತದ ದುಡಿಯಲ್ಲ. ಆ ದುಡಿಯಲ್ಲಿ ಸಾಮಾಜಿಕ ನೋವು, ಧ್ವನಿ ಇಲ್ಲದವರ ಧ್ವನಿ, ಕ್ರಾಂತಿ ಎಲ್ಲವೂ ಇವೆ. ಈ ಕೃತಿಯು ಕಾರಂತರ ವ್ಯಕ್ತಿತ್ವ ಮಾತ್ರವಲ್ಲ, ಆ ಕಾಲಘಟ್ಟದಲ್ಲಿ ಸಮಾಜದ ಅಂಕು ಡೊಂಕುಗಳನ್ನು ಎತ್ತಿ ತೋರಿದ ಅವರ ಧೈರ್ಯವನ್ನೂ ತೋರಿಸುತ್ತದೆ. ಇಂತಹ ಕೃತಿಗಳನ್ನು ಓದಿದಾಗ ಮಾತ್ರ ಕಾರಂತರ ವ್ಯಕ್ತಿತ್ವ ಅರಿವಿಗೆ ನಿಲುಕಲು ಸಾಧ್ಯ.” ಎಂದು ಹೇಳಿದರು.
ಕಾರಂತರ ಸ್ಮರಣೆ ಮಾಡಿದ ಕಂಪ್ಯೂಟರ್ ಭಾಷಾ ವಿಜ್ಞಾನಿ ಪ್ರೊ. ಕೆ. ಪಿ. ರಾವ್ ಮಾತನಾಡಿ, ಕಾರಂತರ ಎಲ್ಲಾ ಗ್ರಂಥಗಳು ಹಾಗೂ ಕಾದಂಬರಿಗಳಲ್ಲಿ ಪ್ರಾದೇಶಿಕತೆ ಹೇರಳವಾಗಿ ಕಾಣುತ್ತದೆ.” ಎಂದರು.
ಪ್ರಶಸ್ತಿ ಸ್ವೀಕರಿಸಿದ ಪ್ರಭಾಕರ ಜೋಶಿ ಮಾತನಾಡಿ “ನನಗೆ ಸಿಕ್ಕಿದ ಈ ಪುರಸ್ಕಾರ ನನ್ನ ಗ್ರಾಮ ಮಾಳಕ್ಕೆ ಮತ್ತು ನಾನು ಕಾರ್ಯ ನಿರ್ವಹಿಸಿದ ಯಕ್ಷಗಾನ ಕ್ಷೇತ್ರಕ್ಕೆ ಸಂದ ಗೌರವ ಎಂದು ಭಾವಿಸುವೆ. ಕಾರಂತರ ಸರಳತೆ, ನೇರವಂತಿಕೆ ಮತ್ತು ಸಿಟ್ಟನ್ನು ನಾನು ಕಂಡಿದ್ದೇನೆ. ಅವರೊಂದಿಗೆ ಒಡನಾಡಿದ್ದೇನೆ. ಅವರಂತಹ ಮಹಾನ್ ಬರಹಗಾರರ ಕೃತಿಗಳು ಉಳಿಯಬೇಕಾದರೆ ಕನ್ನಡ ಉಳಿಯಬೇಕು. ಅದಕ್ಕಾಗಿ ಮೊದಲು ಕನ್ನಡ ಶಾಲೆಗಳಲ್ಲಿ ಸರ್ಕಾರ ಅಧ್ಯಾಪಕರ ನೇಮಕ ಮಾಡಬೇಕು. ಆ ಮೂಲಕ ಮಕ್ಕಳು ಶಾಲೆಗೆ ಉತ್ಸಾಹದಿಂದ ಬರುವ ವಾತಾವರಣ ನಿರ್ಮಾಣವಾಗಬೇಕು.” ಎಂದರು.ಎಂ. ಬಿ. ಪುರಾಣಿಕ್ ಇವರು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಉಡುಪಿ ಸುಹಾಸಂ ಅಧ್ಯಕ್ಷ ಎಚ್. ಶಾಂತರಾಮ ಐತಾಳ್ ಅವರು ‘ಕಾರ್ಡಿನಲ್ಲಿ ಕಾರಂತ’ ಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ ಮಾಡಿದರು.
ಶಿಕ್ಷಣ ಕ್ಷೇತ್ರದ ಸೇವೆಗಾಗಿ ‘ಕಲ್ಕೂರ ಶಿಕ್ಷಣ ಸಿರಿ’ ಪುರಸ್ಕಾರವನ್ನು ಗೀತಾ ಜುಡಿತ್ ಸಲ್ದಾನಾ ಹಾಗೂ ಹೊರನಾಡ ಕನ್ನಡ ಮತ್ತು ಸಂಸ್ಕೃತಿ ಸೇವೆಗಾಗಿ ‘ಕಲ್ಕೂರ ಗಮಕ ಸಿರಿ’ ಪ್ರಶಸ್ತಿಯನ್ನು ತೆಕ್ಕೆಕೆರೆ ಶಂಕರ ನಾರಾಯಣ ಭಟ್ ಅವರಿಗೆ ಪ್ರದಾನ ಮಾಡಲಾಯಿತು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಹೊಟೇಲ್ ಜನತಾ ಡಿಲಕ್ಸ್ ಇದರ ಪಾಲುದಾರ ಪತ್ತುಮುಡಿ ಸೂರ್ಯನಾರಾಯಣ ರಾವ್ ಉದ್ಘಾಟಿಸಿದರು. ಪ್ರಮುಖರಾದ ಹರಿಕೃಷ್ಣ ಪುನರೂರು, ಎಚ್. ಶಾಂತರಾಜ ಐತಾಳ್, ಎಂ. ಪಿ. ಶ್ರೀನಾಥ್, ಎಂ. ಎಸ್. ಗುರುರಾಜ್ ಉಪಸ್ಥಿತರಿದ್ದರು. ಜಿ. ಕೆ. ಭಟ್ ಸೆರಾಜೆ ಅಭಿನಂದನಾ ಮಾತುಗಳನ್ನಾಡಿದರು, ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.