ಉಡುಪಿ : ಯಕ್ಷಗಾನ ಕೇಂದ್ರ ಇಂದ್ರಾಳಿ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇದರ ಸಹಯೋಗದಲ್ಲಿ ಕೋಟ ಶಿವರಾಮ ಕಾರಂತರ 123ನೇ ಜನ್ಮದಿನಾಚರಣೆ ಹಾಗೂ ಯಕ್ಷಗಾನ ಪೂರ್ವರಂಗ ಕೃತಿ ಅನಾವರಣ ಸಮಾರಂಭವು ದಿನಾಂಕ 10 ಅಕ್ಟೋಬರ್ 2025ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾಹೆಯ ಸಹಕುಲಪತಿಗಳಾದ ಡಾ. ನಾರಾಯಣ ಸಭಾಹಿತ್ ಮಾತನಾಡಿ “ಡಾ. ಶಿವರಾಮ ಕಾರಂತರು ಸಾಹಿತಿ, ಮಾನವತಾವಾದಿ, ಪರಿಸರಪ್ರೇಮಿ, ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ ಅಣುಸ್ಥಾವರವಾದಾಗ ಅದರ ವಿರುದ್ಧ ಪ್ರತಿಭಟನೆಗೆ ಇಳಿದ ಮೊದಲಿಗರು. ಅದಕ್ಕೋಸ್ಕರ ದೇಶದ ಲೋಕಸಭಾ ಮಹಾಚುನಾವಣೆಯಲ್ಲಿ ಕಾರವಾರದಿಂದ ಚುನಾವಣೆಗೆ ನಿಂತು ಸ್ಪರ್ಧಿಸಿದರು. ನಾನು ರಾಜಕೀಯ ವ್ಯಾಮೋಹಿಯಲ್ಲ, ಬದಲು ಪರಿಸರ ಹಾನಿಯ ವಿರೋಧಿ. ಕೈಗಾ ಅಣುಸ್ಥಾವರ ಬಂದರೆ ಉತ್ತರಕನ್ನಡದ ಜೀವವೈವಿಧ್ಯ, ಕಾಡು ಪರಿಸರ ನಾಶವಾಗುತ್ತದೆ. ಅದಕ್ಕಾಗಿ ನಾನು ಚುನಾವಣೆಗೆ ನಿಲ್ಲುತ್ತೇನೆ. ಪರಿಸರ ಜಾಗೃತಿಗಾಗಿ ನಾನು ಮನೆಮನೆ ಸುತ್ತಾಡುವೆ, ಹೊರತು ಅಧಿಕಾರಕ್ಕಾಗಿ ಅಲ್ಲ, ಎಂಬುದಾಗಿ ಲೋಕಸಭಾ ಚುನಾವಣೆಗೆ ನಿಂತು 60,000 ಮತಗಳನ್ನು ಪಡೆದು ಸೋತರೂ ಉತ್ತರ ಕನ್ನಡದ ಪರಿಸರಕ್ಕಾಗಿ ಹೋರಾಡಿದ ಮಹಾನುಭಾವ. ಅವರಂತಹ ಚಿಂತಕರು, ಸಮಾಜ ಪ್ರೇಮಿಗಳನ್ನೂ ನಾವು ಕಾಣಲಾರೆವು. ಕಾರಂತರು ನಡೆದಾಡುವ ವಿಶ್ವಕೋಶ. ಯಕ್ಷಗಾನದ ಮೇಲೆ ಅವರ ಪ್ರಯೋಗಗಳು, ಚಿಂತನೆಗಳು ಇಂದ್ರಾಳಿಯ ಯಕ್ಷಗಾನ ಕೇಂದ್ರದ ಮೂಲಕವೇ ಆಗುತ್ತಿತ್ತು. ಯಕ್ಷಗಾನ ಕೇಂದ್ರ ಹಾಗೂ ಕರಾವಳಿಯ ಯಕ್ಷಗಾನದ ಬೆಳವಣಿಗೆಯಲ್ಲಿ ಅವರ ಅಪಾರ ಕೊಡುಗೆಯನ್ನು ಗಮನಿಸಿ ಅವರ ಜನ್ಮದಿನವನ್ನು ಪ್ರತಿವರ್ಷವೂ ಅದ್ದೂರಿಯಾಗಿ ಮಾಡಬೇಕೆಂಬುದು ಮಾಹೆಯ ಸಂಕಲ್ಪ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆದಿದೆ. ಜೊತೆಗೆ ಡಾ. ಶಿವಕುಮಾರ್ ಅಳಗೋಡು ಅವರ ‘ಯಕ್ಷಗಾನ ಪೂರ್ವರಂಗ’ ಕೃತಿಯ ಲೋಕಾರ್ಪಣೆಯನ್ನು ಈ ಸಂದರ್ಭದಲ್ಲಿ ನಡೆಸಿದುದು ಔಚಿತ್ಯಪೂರ್ಣ” ಎಂದು ಹೇಳಿದರು.
ಕಾರಂತರ ಸಂಸ್ಮರಣೆಯ ಮಾತುಗಳನ್ನಾದಿದ ಕಾಪು ಸರಕಾರಿ ಪ್ರ. ದ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ. ರವಿರಾಜ ಶೆಟ್ಟಿ “ಕಾರಂತರು ತಮ್ಮ ಅಧ್ಯಯನದ ಕಾರಣಕ್ಕೆ 400ಕ್ಕೂ ಮಿಕ್ಕಿ ಕೃತಿಗಳನ್ನು ಸಾರಸ್ವತಲೋಕಕ್ಕೆ ನೀಡಿದ್ದಲ್ಲದೆ, ಯಕ್ಷಗಾನ, ನಾಟಕದಂತಹ ಕಲಾಪ್ರಕಾರಗಳನ್ನು ಭಿನ್ನವಾಗಿ ರೂಪಿಸಿದ ಪ್ರಯೋಗಶೀಲ ವ್ಯಕ್ತಿತ್ವ. ಅವರ ಸ್ಮರಣೆ ಸದಾ ಅಗತ್ಯ” ಎಂದರು.
ಲೋಕಾರ್ಪಣೆಗೊಂಡ ಕೃತಿ ಡಾ. ಶಿವಕುಮಾರ್ ಅಳಗೋಡು ಅವರ ‘ಯಕ್ಷಗಾನ ಪೂರ್ವರಂಗ’ದ ಕುರಿತು ಕೃತಿಪರಿಚಯ ಮಾಡಿ ಮಾತನಾಡಿದ ಹಿರಿಯ ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣುಭಟ್ಟ “ಇದೊಂದು ಅಪೂರ್ವ ಕೃತಿ. ಯಕ್ಷಗಾನ ಶಾಸ್ತ್ರೀಯ ಚೌಕಟ್ಟಿನಲ್ಲಿ ಬರುವ ಪ್ರಕಾರ. ಅದರ ಪೂರ್ವರಂಗದ ಕುರಿತು ಅಧ್ಯಯನಗಳನ್ನು ಗಮನಿಸಿ, ವಿಸ್ತೃತ ಕ್ಷೇತ್ರಕಾರ್ಯವನ್ನೊಳಗೊಂಡು ಸಮಗ್ರ ಮಾಹಿತಿಗಳನ್ನೊಳಗೊಂಡ ಅಧ್ಯಯನ ಗ್ರಂಥವಿದು. ಇಂತಹ ಹಲವು ಅಧ್ಯಯನಗಳು ಕೃತಿಕಾರರಿಂದ ಇನ್ನಷ್ಟು ನಡೆಯಲಿ” ಎಂಬುದಾಗಿ ಕೃತಿ ಪರಿಚಯದೊಂದಿಗೆ ಹಾರೈಸಿದರು.
ವೇದಿಕೆಯಲ್ಲಿ ಯಕ್ಷಗಾನ ಕೇಂದ್ರದ ಸಲಹಾಸಮಿತಿಯ ಅಧ್ಯಕ್ಷರಾದ ಶ್ರಿ ಪಳ್ಳಿಕಿಶನ್ ಹೆಗ್ಡೆಯವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ. ಶಿವಕುಮಾರ್ ಅಳಗೋಡು ಕೃತಿಕಾರನ ನೆಲೆಯಲ್ಲಿ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಬಿ. ಜಗದೀಶ್ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಗಾನ ಕೇಂದ್ರದ ಗುರು ಉಮೇಶ್ ಸುವರ್ಣ ಮತ್ತು ಬಳಗದವರಿಂದ ಪ್ರಾರ್ಥನಾರೂಪದ ಯಕ್ಷಗಾನದ ಹಾಡಿನ ಪ್ರಸ್ತುತಿಯಿತ್ತು. ಆರ್.ಆರ್.ಸಿ. ಯ ವತಿಯಿಂದ ಕಾರಂತರ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಕಾರಂತರ ಅಪೂರ್ವ ಭಾವಚಿತ್ರಗಳ ಪ್ರದರ್ಶನ ನಡೆಯಿತು. ಆರ್. ಆರ್. ಸಿ. ಇದರ ಸಹ ಸಂಶೋಧಕರಾದ ಡಾ. ಅರುಣ ಕುಮಾರ್ ಎಸ್. ಆರ್. ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಿಂದ ‘ಭೀಷ್ಮೋತ್ಪತ್ತಿ’ ಯಕ್ಷಗಾನ ಪ್ರದರ್ಶನ ನಡೆಯಿತು.