ಮಂಗಳೂರು : ಶಿವರಾಮ ಕಾರಂತರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕೊಡಿಯಾಲ್ ಬೈಲಿನ ಪತ್ತುಮುಡಿ ಸೌಧದಲ್ಲಿ ದಿನಾಂಕ 10-10-2023ರಂದು ‘ಕಾರಂತ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಪ್ರಶಸ್ತಿಯನ್ನು ಸ್ವೀಕರಿಸಿದ ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಡಾ. ನಾ. ಸೋಮೇಶ್ವರ ಇವರು “ಶಿವರಾಮ ಕಾರಂತರ ಬದುಕು ಒಂದು ವಿರಾಟ್ ರೂಪ. ಅವರ ಜೀವನ ಅನುಕರಣೀಯ. ಹಾಗೆಂದು ಅವರನ್ನು ಅನುಕರಣೆ ಮಾಡುವುದೂ ಅಷ್ಟು ಸುಲಭ ಅಲ್ಲ. ಕಾರಂತರು ಸ್ವತಃ ಪರೀಕ್ಷಿಸದೆ ಅಂತಿಮ ತೀರ್ಮಾನ ಮಾಡುವವರಲ್ಲ. ರವೀಂದ್ರನಾಥ್ ಠಾಗೂರ್ ಮತ್ತು ಕಾರಂತರನ್ನು ಒಂದು ರೀತಿಯಲ್ಲಿ ನೋಡಿದರೂ ಕೂಡ ಕಾರಂತರು ಹೆಚ್ಚು ಸಾಹಸಮಯ ಕೆಲಸಗಳಿಂದ ಗಮನ ಸೆಳೆಯುತ್ತಾರೆ. ಕಳೆದ 21 ವರ್ಷಗಳನ್ನು ಪೂರೈಸಿಕೊಂಡು 22 ವರ್ಷಕ್ಕೆ ಕಾಲಿಡುತ್ತಿರುವ ದೂರದರ್ಶನದ ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ಹಣಕ್ಕಾಗಿ ಮಾಡುತ್ತಿಲ್ಲ. ನನ್ನದು ವೈದ್ಯ ವೃತ್ತಿ. ಅಲ್ಲೇ ಕೈ ತುಂಬಾ ದುಡಿಯಬಹುದು. ಆದರೆ ನಾನು ನಂಬಿರುವ ನಾಲ್ಕು ಋಣಗಳಲ್ಲಿ ಆಚಾರ್ಯ ಋಣ ಹಾಗೂ ಸಮಾಜದ ಋಣ ತೀರಿಸಲು ಈ ಕಾರ್ಯಕ್ರಮ ಮಾಡುತ್ತಿದ್ದೇನೆ. ಸಾಹಿತ್ಯ ಹಾಗೂ ವಿಜ್ಞಾನ ಬೇರೆ ಇರಬಹುದು. ಆದರೆ ಸತ್ಯ ಅನ್ವೇಷಣೆಯೇ ಇವೆರಡರ ಗುರಿ” ಎಂದರು.
ಗಡಿನಾಡು ಕನ್ನಡ ಹಾಗೂ ಸಂಸ್ಕೃತಿ ಸೇವೆಗಾಗಿ ವಾಮನ ರಾವ್ ಬೇಕಲ್ ಕಾಸರಗೋಡು ಅವರಿಗೆ ‘ಕಲ್ಕೂರ ಅಭಿನಂದನಾ ಪುರಸ್ಕಾರ’, ವಿಜಯ ಕುಮಾರ್ ತಂತ್ರಿಯವರಿಗೆ ‘ಕಲ್ಕೂರ ಸಾಧಕ ಪುರಸ್ಕಾರ’, ಸುಗಮ ಸಂಗೀತ ಸಾಧನೆಗಾಗಿ ತನುಶ್ರೀ ಮಂಗಳೂರು ಅವರಿಗೆ ‘ಕಲ್ಕೂರ ಬಾಲ ಸಾಧನಾ ಪುರಸ್ಕಾರ’ ಮತ್ತು ಬಹುಮುಖ ಪ್ರತಿಭೆ ಬಿಂದಿಯಾ ಎಲ್. ಶೆಟ್ಟಿ ಅವರಿಗೆ ‘ಕಲ್ಕೂರ ಯುವ ಸಾಧನಾ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.
ನಿಟ್ಟೆ ವಿ.ವಿ. ಕುಲಾಧಿಪತಿ ನಿಟ್ಟೆ ವಿನಯ್ ಹೆಗ್ಡೆ ಅವರು ಮಾತನಾಡಿ, “ಡಾ. ಶಿವರಾಮ ಕಾರಂತರ ಹೆಸರಿನಲ್ಲಿ ನೀಡುವ ‘ಕಾರಂತ ಪ್ರಶಸ್ತಿ’ಯು ದೇಶದ ಅಪ್ರತಿಮ ಪ್ರಶಸ್ತಿಯಾಗಿದೆ. ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಇವರ ನೇತೃತ್ವದಲ್ಲಿ ಅತ್ಯಂತ ಶ್ರದ್ಧೆಯಿಂದ ಈ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿರುವುದು ಮಾದರಿ” ಎಂದರು.
ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅವರು ಕಾರಂತರ ಸಂಸ್ಮರಣೆ ಮಾಡಿ “ಶಿವರಾಮ ಕಾರಂತರು ಒಂದು ವಿಸ್ಮಯ ಪ್ರತಿಭೆ, ಅವರು ಕಾಲಿಟ್ಟ ಕ್ಷೇತ್ರದ ಚರಿತ್ರೆಯನ್ನೇ ಬದಲಾಯಿಸಿದ ಸಾಹಸಿ, ಕಾರಂತ ಪ್ರಜ್ಞೆ ನಮ್ಮಲ್ಲಿ ಜಾಗೃತವಾಗಲಿ” ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿ, ಪ್ರಸ್ತಾವಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು. ಸುಧಾಕರ ರಾವ್ ಪೇಜಾವರ ಸನ್ಮಾನ ಪತ್ರ ವಾಚಿಸಿದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಶಾರದಾ ವಿದ್ಯಾಲಯದ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ಟೋಲಿನೋ, ಸುಹಾಸಂ ಅಧ್ಯಕ್ಷ ಎಚ್. ಶಾಂತಾರಾಜ ಐತಾಳ್ ಹಾಗೂ ಪತ್ತುಮುಡಿ ಜನತಾ ಡೀಲಕ್ಸ್ ನ ಪಾಲುದಾರ ಸೂರ್ಯನಾರಾಯಣ ರಾವ್ ಉಪಸ್ಥಿತರಿದ್ದರು.
ಇದೇ ಸಂದರ್ಭಕ್ಕಾಗಿ ನಡೆಸಿದ ಪ್ರಬಂಧ ಸ್ಪರ್ಧೆ ಹಾಗೂ ಕಾರ್ಡಿನಲ್ಲಿ ಕಾರಂತರ ಚಿತ್ರ ರಚನಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬದ ಸಲುವಾಗಿ ಕಲ್ಕೂರ ಪ್ರತಿಷ್ಠಾನವು ಆಯೋಜಿಸಿದ್ದ ‘ಪ್ರಬಂಧ ರಚನಾ ಸ್ಪರ್ಧೆ’ಯಲ್ಲಿ ಮೂರು ವಿಷಯಗಳನ್ನು ನೀಡಿ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗಿದೆ. ಪ್ರೌಢ ಶಾಲಾ ವಿಭಾಗಕ್ಕೆ – ‘ಕಾರಂತರ ವಿಜ್ಞಾನ ಸಾಹಿತ್ಯ’, ಕಾಲೇಜು ವಿಭಾಗಕ್ಕೆ – ‘ಕಾರಂತರು ಮತ್ತು ಯಕ್ಷಗಾನ’ ಹಾಗೂ ಮುಕ್ತ ವಿಭಾಗಕ್ಕೆ – ‘ಮೂಕಜ್ಜಿಯ ಕನಸುಗಳು ವೈಚಾರಿಕತೆ – ವಿಶ್ಲೇಷಣೆ’. ಈ ಪ್ರಬಂಧ ಸ್ಪರ್ಧೆಯ ವಿಜೇತರು :-
ಮುಕ್ತ ವಿಭಾಗದಲ್ಲಿ ಪ್ರಥಮ – ಹರ್ಷ ಸಿ.ಉಪ್ಪಳ
ದ್ವಿತೀಯ – ಡಾ.ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು
ತೃತೀಯ – ಡಾ.ಮೈತ್ರಿ ಭಟ್, ನೆತ್ರಕೆರೆ ವಿಟ್ಲ.
ಕಾಲೇಜು ವಿಭಾಗದಲ್ಲಿ ಪ್ರಥಮ – ತುಷಾರ ಶೆಟ್ಟಿ, ನಿಟ್ಟೆ ಪಿಯು ಕಾಲೇಜು ನಂತೂರು
ದ್ವಿತೀಯ – ಯಶಸ್ವಿನಿ ಶೆಟ್ಟಿ, ತೃಷಾ ಕಾಲೇಜು ಮಂಗಳೂರು
ತೃತೀಯ – ಆದಿತ್ಯ ಡಿ. ಅಲೋಶಿಯಸ್ ಕಾಲೇಜು ಮಂಗಳೂರು.
ಹೈಸ್ಕೂಲ್ ವಿಭಾಗದಲ್ಲಿ ಪ್ರಥಮ – ಕು. ಬಿಂದು ಹೋಲಿ ಫ್ಯಾಮಿಲಿ ಆಂಗ್ಲಮಾಧ್ಯಮ ಶಾಲೆ ಕಾಟಿಪಳ್ಳ
ದ್ವಿತೀಯ – ಮಹಿಮಾ ಆರ್.ಕೆ. ವಿಠಲ್ ಜೇಸಿಸ್ ಆಂಗ್ಲಮಾಧ್ಯಮ ಶಾಲೆ ವಿಟ್ಲ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬದ ಸಲುವಾಗಿ ಕಲ್ಕೂರ ಪ್ರತಿಷ್ಠಾನವು ನಡೆಸಿದ ‘ಕಾರ್ಡಿನಲ್ಲಿ ಕಾರಂತರ ಚಿತ್ರ’ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ವಿಜೇತರು.
ಮುಕ್ತ ವಿಭಾಗದಲ್ಲಿ ಪ್ರಥಮ – ಮಯೂರ ಮಂಗೇಶ ಅಗೇರ, ಚಿತ್ರ ಕಲಾವಿದ ಅಂಕೋಲಾ
ದ್ವಿತೀಯ – ದಿಶಾನ್ ಎಲ್. ಕುಲಾಲ್, ದ್ವಿತೀಯ ಬಿ.ಕಾಂ. ಡಾ. ಪಿ.ದಯಾನಂದ ಪೈ – ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು
ತೃತೀಯ – ಬಿಂದು ಕೆ. ಚಿಲಿಂಬಿ ಮಂಗಳೂರು
ಪ್ರೋತ್ಸಾಹಕರ ಬಹುಮಾನ- ಕವನಾ ಪಿ. ಸುಳ್ಯ
ಪ್ರೋತ್ಸಾಹಕರ ಬಹುಮಾನ- ರಾಘವೇಂದ್ರ ಪಾಟೀಲ
ಹೈಸ್ಕೂಲ್ ವರೆಗಿನ ವಿಭಾಗದಲ್ಲಿ ಪ್ರಥಮ – ಶ್ರೀಯಾ ಎಸ್. ಆಚಾರ್ 10ನೇ ತರಗತಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ
ದ್ವಿತೀಯ – ಪ್ರಾಂಜಲಿ ನಾವಡ 10ನೇ ತರಗತಿ ಶಾರದ ವಿದ್ಯಾಲಯ ಮಂಗಳೂರು
ತೃತೀಯ – ಧ್ರಿತಿ ವಿನಯ್ ಮೊಯ್ಲಿ 9ನೇ ತರಗತಿ ರೋಟರಿ ಕೇಂದ್ರೀಯ ಶಾಲೆ ಮೂಡುಬಿದಿರೆ
ಪ್ರೋತ್ಸಾಹಕರ ಬಹುಮಾನ- ಪ್ರಣಮ್ಯ ಎನ್. ಆಳ್ವ ಕಾಸರಗೋಡು
ಪ್ರೋತ್ಸಾಹಕರ ಬಹುಮಾನ-ಮಲ್ಲಿಕಾರ್ಜುನ ಬಾಗಲಕೋಟೆ