ಪುತ್ತೂರು : ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ. ಕೋಟ ಶಿವರಾಮ ಕಾರಂತರ ಬಾಲವನ ಪುತ್ತೂರು, ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ಇದರ ವತಿಯಿಂದ ಕಡಲ ತಡಿಯ ಭಾರ್ಗವ, ಜ್ಞಾನಪೀಠ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ 122ನೇ ಜನ್ಮದಿನೋತ್ಸವ ಮತ್ತು ‘ಕಾರಂತ ಬಾಲವನ ಪ್ರಶಸ್ತಿ’ ಪ್ರದಾನ ಸಮಾರಂಭ ಪುತ್ತೂರು ಪರ್ಲಡ್ಕದ ಬಾಲವನದಲ್ಲಿ ದಿನಾಂಕ 10-10-2023ರಂದು ನಡೆಯಿತು. ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಮಟ್ಟದ ವರ್ಣ ಚಿತ್ರಕಲಾವಿದ ಕೆ. ಚಂದ್ರನಾಥ ಆಚಾರ್ಯ ಅವರಿಗೆ ‘ಕಾರಂತ ಬಾಲವನ ಪ್ರಶಸ್ತಿ’ ಪ್ರದಾನ ಮಾಡಿ ಆಚಾರ್ಯ ದಂಪತಿಗಳಿಗೆ ಶಾಲು ಹೊದಿಸಿ, ಹಾರ ಹಾಕಿ ಪೇಟವಿರಿಸಿ, ಫಲಕ, ಕಾರಂತರ ಪುತ್ಥಳಿ, ಫಲಪುಷ್ಪಗಳೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, “ವಿಶ್ವಕ್ಕೇ ಸಾಧಕರಾಗಿ ಗುರುತಿಸಿಕೊಂಡ ಡಾ. ಶಿವರಾಮ ಕಾರಂತರ ಕರ್ಮಭೂಮಿ ಬಾಲವನ ಇನ್ನಷ್ಟು ಅಭಿವೃದ್ಧಿಯಾಗಬೇಕು. ಕಾರಂತರ ಒಡನಾಡಿಗಳು, ಮುಂದಿನ ಪೀಳಿಗೆಗೆ ಕಾರಂತರ ಸಾಧನೆ ತಿಳಿಯುವಂತೆ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಅನುದಾನಕ್ಕಾಗಿ ಸರಕಾರಕ್ಕೆ ಮನವಿ ಮಾಡಲಾಗುವುದು” ಎಂದು ಹೇಳಿದರು.
ಕಾರಂತ ಸಂಸ್ಮರಣೆ ಮಾಡಿದ ಮುಂಬೈ ವಿವಿ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ವಸಂತ ಕುಮಾರ್ ತಾಳ್ತಜೆ, “ಕಾರಂತರು ಎಂದರೆ ಕಡಲು. ಸೀಮಿತ ಚೌಕಟ್ಟಿನಲ್ಲಿ ಅವರ ಬಿಂಬವನ್ನು ಹಿಡಿದಿಡುವುದು ಕಷ್ಟಸಾಧ್ಯ. ಅವರೊಂದು ಯುಗದ ಚೈತನ್ಯ. ಅವರ ಪ್ರತಿಯೊಂದು ಕೃತಿಯೂ ಒಂದು ಸಂಸ್ಥೆಯಾಗಿದೆ. ವೈಚಾರಿಕ ನೆಲೆಗಟ್ಟಿನ ವಾಸ್ತವತೆಯ ಅವರ ಕೃತಿಗಳಲ್ಲಿ ಅಲೌಖಿಕತೆಯೂ ಸೇರ್ಪಡೆಗೊಂಡಿರುತ್ತದೆ. ವ್ಯಕ್ತಿಗತ ಅನುಭವಗಳು ಕೃತಿಯಲ್ಲಿ ಮೂಡಿಬರಬೇಕು ಎಂದು ನಂಬಿದವರು ಕಾರಂತರು. ತುಳುನಾಡಿನ ಯಕ್ಷಗಾನವನ್ನು ಅಂತಾರಾಷ್ಟ್ರೀಯ ಮಟ್ಟದ ಕಲೆಯಾಗಿ ಬೆಳೆಸಿದ ಕಾರಂತರು ಹತ್ತು ಹಲವು ವಿಷಯಗಳಲ್ಲಿ ಛಾಪು ಮೂಡಿಸಿದವರು” ಎಂದರು.
ವರ್ಣ ಚಿತ್ರಕಲಾವಿದ ಕೆ. ಚಂದ್ರನಾಥ ಆಚಾರ್ಯ ಅವರಿಗೆ ದಿ. ಕುರುಂಜಿ ವೆಂಕಟರಮಣ ಗೌಡ ಅವರ ಶಾಶ್ವತ ಕೊಡುಗೆಯಲ್ಲಿ ಕೊಡ ಮಾಡುವ ‘ಕೋಟ ಶಿವರಾಮ ಕಾರಂತ ಬಾಲವನ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಜತೆಗೆ ರೂ.25,000/- ನಗದಿನ ಚೆಕ್ ನೀಡಲಾಯಿತು. ಇದೇ ಸಂದರ್ಭ ಕಾರಂತರ ಒಡನಾಡಿ ಸಾಹಿತಿ ಪಡಾರು ಮಹಾಬಲೇಶ್ವರ ಭಟ್ ಮಂಚಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಶಸ್ತಿ ಸಮಿತಿಯ ಸದಸ್ಯ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅಭಿನಂದನೆಗೈದರು.
‘ಕಾರಂತ ಬಾಲವನ ಪ್ರಶಸ್ತಿ’ ಪುರಸ್ಕೃತರಾದ ಕೆ. ಚಂದ್ರನಾಥ ಆಚಾರ್ಯರು ಮಾತನಾಡುತ್ತಾ “ಪುತ್ತೂರಿನ ಮಣ್ಣಿಗೆ ವಿಶೇಷ ಶಕ್ತಿ ಇದೆ. ಶಾಂತಿನಿಕೇತನದ ಗುರು ಪ್ರೊ.ಕೆ.ಜಿ. ಸುಬ್ರಹ್ಮಣ್ಯ ಅವರೂ ಪುತ್ತೂರಿನವರು ಎಂಬುದು ಹಲವರಿಗೆ ತಿಳಿದಿಲ್ಲ. ನಾನು 9ನೇ ತರಗತಿಯಲ್ಲಿರುವಾಗಲೇ ಚಿತ್ರಕಲೆಗೆ ಸಂಬಂಧಿಸಿ ಡಾ. ಕಾರಂತರಿಂದ ಬೈಸಿಕೊಂಡವನು. ಭಾರತೀಯ ಚಿತ್ರಕಲೆಗೆ ದೊಡ್ಡ ಮಟ್ಟದ ಮಹತ್ವವಿದೆ. ಹುಟ್ಟೂರಿನಲ್ಲಿ ಡಾ. ಕಾರಂತರ ಹೆಸರಿನ ಪ್ರಶಸ್ತಿ ಲಭಿಸಿರುವುದು ನೊಬೆಲ್ ಪಾರಿತೋಷಕ ಸಿಕ್ಕಷ್ಟು ಖುಷಿಯಾಗಿದೆ” ಎಂದು ಹೇಳಿದರು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ, ಕ.ಸಾ.ಪ. ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪುತ್ತೂರು ತಹಶೀಲ್ದಾರ್ ಶಿವಶಂಕರ್, ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಿನಿ ಶೆಟ್ಟಿ ಬಳಗದವರು ಪ್ರಾರ್ಥನೆ ಹಾಗೂ ಶುಭಾ ರಾವ್ ಬಳಗದವರು ನಾಡಗೀತೆ ಹಾಡಿದರು. ಬಾಲವನ ಸಮಿತಿಯ ಅಧ್ಯಕ್ಷ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಸ್ವಾಗತಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಹಾಯಕ ನಿರ್ದೇಶಕ ರಾಜೇಶ್ ಜಿ. ವಂದಿಸಿ, ಡಾ. ರಾಜೇಶ್ ಬೆಜ್ಜಂಗಳ, ಶಿಕ್ಷಕರಾದ ರಮೇಶ್ ಉಳಿಯ ಮತ್ತು ಜಗನ್ನಾಥ ಅರಿಯಡ್ಕ ನಿರೂಪಿಸಿದರು.
ಬಾಲವನ ಪ್ರಶಸ್ತಿ ಪುರಸ್ಕೃತರಾದ ಕೆ. ಚಂದ್ರನಾಥ ಆಚಾರ್ಯ ಅವರ ಅಪೂರ್ವ ಕಲಾಕೃತಿಗಳ ಪ್ರದರ್ಶನವಿತ್ತು. ಬಾಲವನದಲ್ಲಿ ಭಾರ್ಗವ ಕೃತಿಯನ್ನು ಪುತ್ತೂರು ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಮೂಲಕ ಹಸ್ತಾಂತರಿಸಲಾಯಿತು.