ಮಂಗಳೂರು : ಕ.ಸಾ.ಪ. ಮಂಗಳೂರು ತಾಲೂಕು ಘಟಕ ಇದರ ವತಿಯಿಂದ ದಿನಾಂಕ 10-10-2023ನೇ ಮಂಗಳವಾರದಂದು ಡಾ. ಕೆ.ಶಿವರಾಮ ಕಾರಂತರ 122ನೇ ಜನ್ಮ ದಿನಾಚರಣೆಯನ್ನು ನಗರದ ಶಾರದಾ ವಿದ್ಯಾಲಯದಲ್ಲಿ ಆಚರಿಸಿ ಸಂಭ್ರಮಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ಅವರು ಕಾರಂತರ ಬಗ್ಗೆ ಉಪನ್ಯಾಸ ನೀಡಿದರು. “ಕಾದಂಬರಿಕಾರ, ನಾಟಕಕಾರ, ಯಕ್ಷಗಾನ ಪಂಡಿತ, ಪರಿಸರ ತಜ್ಞ, ಕವಿ, ಕಲಾವಿದ, ಕುಶಲಕರ್ಮಿ ಹೀಗೆ ನೂರಾರು ಮುಖಗಳನ್ನು ಹೊಂದಿದ್ದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರದು ಪದಗಳಲ್ಲಿ ಹಿಡಿದಿಡಲಾಗದ ಅದ್ಭುತ ವ್ಯಕ್ತಿತ್ವ ಎಂದು ವಿಶ್ಲೇಷಿಸಿದರು. ಒಳಗೊಂದು ಹೊರಗೊಂದು ಇಲ್ಲದ, ಪ್ರತಿಯೊಂದರಲ್ಲೂ ತಮ್ಮದೇ ಆದ ಚಿಂತನಾತ್ಮಕ ಧೋರಣೆಯ, ಕೇವಲ ಇಂಟರ್ ಮೀಡಿಯೆಟ್ ವರೆಗೆ ಮಾತ್ರ ಓದಿ ಆ ಬಳಿಕ ತಮ್ಮ ಸ್ವಂತ ಅನುಭವದ ಮೂಲಕ ಸತ್ಯಾನ್ವೇಷಣೆಯನ್ನು ಮಾಡಿದ, ವಿಶಿಷ್ಟ ವ್ಯಕ್ತಿತ್ವದ ಕಾರಂತರಿಗೆ ಗೊತ್ತಿಲ್ಲದ ವಿಷಯಗಳೇ ಇರಲಿಲ್ಲ. ಕಾರಂತರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ದಿನಗಳನ್ನೂ ಸ್ಮರಿಸಿ, ಯಾವ ಪಂಥಕ್ಕೂ ಸೇರದ ಅವರದು ಕಾರಂತ ಪಂಥ” ಎಂದು ಬಣ್ಣಿಸಿದರು.
ಹಿರಿಯ ನಾಟ್ಯ ಗುರು ಚಂದ್ರಶೇಖರ ನಾವಡರು ಮಾತನಾಡಿ ಕಾರಂತರ ನೃತ್ಯ ಕ್ಷೇತ್ರದ ಅಪಾರ ಪಾಂಡಿತ್ಯದ ಪರಿಚಯ ಮಾಡಿಕೊಟ್ಟರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಂಜುನಾಥ್ ಎಸ್. ರೇವಣಕರ್ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ ಇದರ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಡಾ. ಶಿವರಾಮ ಕಾರಂತರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ರಘು ಇಡ್ಕಿದು, ಶ್ರೀ ಮೆದು ತಿರುಮಲೇಶ್ವರ ಭಟ್, ಶ್ರೀ ಕೃಷ್ಣಪ್ಪ ನಾಯಕ್, ಶ್ರೀ ಕೃಷ್ಣ ಭಟ್, ಶ್ರೀ ಚಂದ್ರಶೇಖರ ನಾವಡ, ಶ್ರೀ ದೊಡ್ಡಮನಿ, ಶ್ರೀಮತಿ ಉಷಾ ಜಿ. ಪ್ರಸಾದ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಶ್ರೀಮತಿ ರತ್ನಾವತಿ ಜೆ. ಬೈಕಾಡಿ ಇವರು ಪ್ರಾರ್ಥಿಸಿ, ಕ.ಸಾ.ಪ.ದ ಗೌರವ ಕಾರ್ಯದರ್ಶಿಗಳಾದ ಡಾ. ಮುರಲೀ ಮೋಹನ್ ಚೂಂತಾರು ಸ್ವಾಗತಿಸಿದರು. ಕ.ಸಾ.ಪ.ದ ಇನ್ನೋರ್ವ ಕಾರ್ಯದರ್ಶಿಗಳಾದ ಎನ್. ಗಣೇಶ್ ಪ್ರಸಾದ್ ಜೀ ಅವರು ಕಾರ್ಯಕ್ರಮ ನಿರೂಪಿಸಿ, ಗೌ. ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ವಂದಿಸಿದರು.
1 Comment
ಸ್ತುತ್ಯರ್ಹ ಕಾರ್ಯಕ್ರಮ , ಸೂಕ್ತ ಗೌರವ ನೀಡಿದ ವರದಿ