ಬೆಂಗಳೂರು : ಕ್ರಾನಿಕಲ್ಸ್ ಆಫ್ ಇಂಡಿಯಾ ಅಭಿನಯಿಸುವ ಗಣೇಶ್ ಮಂದಾರ್ತಿ ಇವರ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಶಿವೋಹಂ’ ನಾಟಕ ಪ್ರದರ್ಶನವನ್ನು ದಿನಾಂಕ 11 ಮಾರ್ಚ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರು ಜೆ.ಪಿ. ನಗರದ ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 8867419347, 9845384528 ಮತ್ತು 9740145042 ಸಂಖ್ಯೆಯನ್ನು ಸಂಪರ್ಕಿಸಿರಿ.
ನಾಟಕದ ಬಗ್ಗೆ :
ಏಕ ಕಾಲಕ್ಕೆ ಇದೊಂದು ಪೌರಾಣಿಕ ಮತ್ತು ಸಾಮಾಜಿಕ ನಾಟಕ. ಇಲ್ಲಿ ಎರಡು ಕಥಾಹಂದರವಿದೆ. ಒಂದು ಶಿವನ ಪುರಾಣ ಕತೆಗಳದ್ದು ; ಇನ್ನೊಂದು – ಶಿವನ ಪಾತ್ರಧಾರಿಯ, ಊರಿನ ಕತೆ. ಶಿವ ನಮ್ಮ ನಾಡಿನ ಪುರಾತನ ಪ್ರತಿಮೆ, ಆತ ತಳಸಮುದಾಯದವರ ದೇವರು. ಶಿವನಿಗೆ ನಟಶೇಖರನೆಂಬ ಹೆಸರಿದೆ ಹಾಗೂ ಕಾಮನನ್ನೇ ಸುಡುವ ಯೋಗಿ – ಶಿವ ದಾಕ್ಷಾಯಿಣಿಯ ಹೆಣ ಹೊತ್ತು ತಿರುಗುವ ಕಡುಮೋಹಿ ಕೂಡ. ಆತ ಎರಡು extreme ( ಭವ-ಪರ )ಗಳಲ್ಲಿ ತೀವ್ರವಾಗಿ ಬದುಕುವವ. ಅವನ ಭವದ ಪರಿಪಾಟಲುಗಳ, ಪ್ರೇಮದ, ಕುಟುಂಬದ ಕತೆಗಳನ್ನಷ್ಟೇ ನಾವಿಲ್ಲಿ ಆರಿಸಿದ್ದೇವೆ.
ಇಲ್ಲಿ ಅಷ್ಟೇ ತೀವ್ರವಾಗಿ ಬದುಕುವ ಶಿವನ ಪಾತ್ರಧಾರಿಯೂ ಇದ್ದಾನೆ. ಅವನೊಬ್ಬ ಕ್ರಾಂತಿಕಾರಿ – ಜತೆ ಜತೆಗೆ ಪ್ರೇಮವನ್ನು ಕಳೆದುಕೊಂಡ ಒಂದು ಕಾಲದ ವಿರಹಿ ಕೂಡ : ಥೇಟ್ ಶಿವನಂತೆ. ಇನ್ನು ಇಲ್ಲಿ ಬರುವ ಸ್ತ್ರೀ ಪಾತ್ರಗಳೆಲ್ಲ ಪುರುಷ ಅಹಂಕಾರವನ್ನು ಸಮಾಜದ ಕಟ್ಟಳೆಗಳನ್ನು ತೀವ್ರವಾಗಿ ಪ್ರಶ್ನಿಸುತ್ತದೆ. ಎಲ್ಲೆಗಳನ್ನ ಮೀರಲಿಕ್ಕೆ ಪ್ರಯತ್ನಿಸುತ್ತವೆ. ಪ್ರಯತ್ನಿಸುತ್ತಲೇ ಸೋಲುತ್ತವೆ, ಸೋಲುತ್ತಲೇ ಗೆಲ್ಲುತ್ತವೆ. ಶಿವನ ಚರ್ಮಾಂಬರಕ್ಕಾಗಿ ಆಶಿಸುವ ಶಿವ ಪಾತ್ರಧಾರಿಯ ಕನಸು ಕನಸಾಗಿಯೇ ಉಳಿವಂತೆ – ಇವತ್ತಿಗೂ ಯಾವತ್ತಿಗೂ ತಳಸಮುದಾಯದ ಕನಸು ಕನಸಾಗಿಯೇ ಉಳಿದು ಬಿಟ್ಟಿದೆ.
ಶಿವನೊಬ್ಬ ಅಸಂಗತ ದೇವರು. ಅವನನ್ನು ಸುಸಂಗತಗೊಳಿಸಿದಷ್ಟು ಆತ ಅಲ್ಲಿಂದ ಜಾರಿ ಬಿಟ್ಟಿರುತ್ತಾನೆ. ಆದ್ದರಿಂದಲೇ ಇದೊಂದು ಸುಸಂಗತ ನಾಟಕ ಎನಿಸುತ್ತಲೇ ಅಸಂಗತವಾಗಿದೆ. ನಮ್ಮ ನಮ್ಮ ಬದುಕಿನಂತೆ, ಕಣ್ಣಂತೆ ಕಾಣೆ.