13-03-2023, ಉಡುಪಿ: ಅಂದು ಆ ಪುಟ್ಟ ಬಾಲೆ ತನ್ನ ಅಪ್ಪ ಅಮ್ಮ ರಂಗ ವೇದಿಕೆಯಲ್ಲಿ ಹೆಜ್ಜೆ ಹಾಕುತ್ತಿರಲು ಪರದೆಯ ಬದಿಯಲ್ಲಿ ನಿಂತು ತನ್ನ ಕಾಲ್ಗೆಜ್ಜೆ ಸದ್ದು ಮಾಡುತ್ತ ಎಲ್ಲರ ಗಮನ ಸೆಳೆಯುತ್ತಿದ್ದರೆ ಇಂದು ಅದೇ ಬಾಲೆ ಯುವ ಪೀಳಿಗೆಯ ಸಮೂಹವನ್ನೇ ರಂಗ ಭೂಮಿಯತ್ತ ಸೆಳೆದು ನಿಲ್ಲಿಸಲು ಕೈಗೊಂಡ ಧೃಡತೆಯ ಹೆಜ್ಜೆಯ ಸದ್ದು ಅಪಾರ ರಂಗಾಸಕ್ತರ ಹೃದಯ ಕದ್ದಿದೆ ಮನ ಮುಟ್ಟಿದೆ.
ಎ.ಎಸ್ ಮೂರ್ತಿ ಕಮಲಾ ಮೂರ್ತಿಯವರ ಮುದ್ದಿನ ಮಗಳು ಶೋಭಾ ನಾಲ್ಕನೇ ತರಗತಿಯಲ್ಲಿ ಕುರ್ತುಕೋಟಿಯವರ “ಆ ಮನಿ ” ಮಕ್ಕಳ ನಾಟಕದ ಮೂಲಕ ನಾಟಕರಂಗ ಪಯಣಕ್ಕೆ ನಾಂದಿ ಹಾಡಿದರೆ ತಂದೆಯವರ ಚಿತ್ರಾ ನಾಟಕ ತಂಡ ಅಭಿನಯದಲ್ಲಿ ಪ್ರಬುದ್ಧತೆಯನ್ನು ತಂದುಕೊಟ್ಟಿತ್ತು. ಆವತ್ತು ಬೀದಿನಾಟಕಗಳು ಸಮಾಜಮುಖಿಯಾಗಿ ಬೆಳೆಯಲು ಆ ಕಂದಮ್ಮನಿಗೆ ಸಹಕರಿಸಿದ್ದರೆ ಬಾಲ್ಯದ ಆ ದಿನದಲ್ಲಿ ಕುವೆಂಪುರವರ “ಕರಿಸಿದ್ದ ” ನಾಟಕಕ್ಕೆ ಅವರ ಮನೆ ಮುಂದೆಯೇ ಹೆಜ್ಜೆ ಹಾಕಿದ ಸವಿ ಸದಾ ಮಾಸದ ನೆನಪಾಗಿ ಉಳಿದಿತ್ತು. ಹೀಗೆ ಹುಟ್ಟಿನಿಂದಲೇ ರಂಗಭೂಮಿಯನ್ನು ಒಪ್ಪಿಕೊಂಡು ಅಪ್ಪಿಕೊಂಡು ಬೆಳೆದವರು, ಕರ್ನಾಟಕದ ಮೊಟ್ಟ ಮೊದಲ ಕಲಾ ಶಾಲೆಯ ಸಂಸ್ಥಾಪಕ ಅ.ನ. ಸುಬ್ಬರಾಯರ ಮೊಮ್ಮಗಳು ಶೋಭಾ ವೆಂಕಟೇಶ್.
ರಂಗಭೂಮಿಯನ್ನು ಹೀಗೂ ಬೆಳೆಸಬಹುದೇ ಹೀಗೂ ಬಳಸಬಹುದೇ ಎಂದು ಮೂಗಿನ ಮೇಲೆ ಬೆರಳಿಟ್ಟು ಯೋಚಿಸುವಷ್ಟು ರಂಗ ತರಬೇತಿ, ಕಾರ್ಯಾಗಾರ ಹೊಸ ಅವಿಷ್ಕಾರಗಳ ಮೂಲಕ ಪರಿಪಕ್ವತೆಯನ್ನು ಸಾಧಿಸಿದ ದಿಟ್ಟ ಮಹಿಳೆ ಬೆಂಗಳೂರಿನ ಶೋಭಾ ವೆಂಕಟೇಶ್. ಕೆನರಾ ಬ್ಯಾಂಕ್ ವೃತ್ತಿಯ ಜೊತೆ ಈ ರಂಗ ಪ್ರವೃತ್ತಿಯನ್ನು ಜೀವನದುದ್ದಕ್ಕೂ ಆದರಿಸುತ್ತಾ ಫೋಷಿಸುತ್ತಾ ಸಮಾಜದ ಸಮಸ್ಯೆಗಳ ಬಗ್ಗೆ ಬೆಳಕು ಹರಿಸುತ್ತಾ ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ನಾಟಕ, ಬೀದಿ ನಾಟಕಗಳನ್ನು ಬಳಸಿಕೊಳ್ಳುವ ಪರಿ ಯೋಚನಾ ಲಹರಿ ಶ್ಲಾಘನೀಯ.
ಅ.ನ.ಕೃ. ನಿಸಾರ್ ಅಹ್ಮದ್, ಪಿ.ಲಂಕೇಶ್, ಕಂಬಾರರು, ಸುಮತೀಂದ್ರನಾಡಿಗರಂತಹ ಅನೇಕ ರಂಗ ದಿಗ್ಗಜರ ಒಡನಾಟ ಹಾಗೂ ಇವರು ಕೈಗೊಂಡ ಲೆಕ್ಕವಿಲ್ಲದಷ್ಟು ರಂಗ ತರಬೇತಿ, ಕಾರ್ಯಗಾರಗಳು, ರಂಗಪ್ರಯೋಗಗಳು ಹಲವಾರು ರಂಗ ಸಂಸ್ಥೆಗಳನ್ನು ಹುಟ್ಟುಹಾಕಲು ಶೋಭಾರಿಗೆ ಧೈರ್ಯ ತುಂಬಿತು. ಬೆಳ್ಳಿಹಬ್ಬದ ಸಂಭ್ರಮಕ್ಕೆ ದಾಪುಗಾಲಿಡುತ್ತಿರುವ ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಶನಿವಾರ ರಂಗಶಾಲೆ ಎಂದೇ ಹೆಸರಾದ ಈ ಸಂಸ್ಥೆಯ ಮೂಲಕ ಬೇರೆ ಬೇರೆ ವಯೋಮಿತಿಯ ಮಕ್ಕಳಿಗೆ ಹಿರಿಯ ರಂಗಾಸಕ್ತರಿಗೆ ನುರಿತ ಕಲಾವಿದರಿಂದ ಎಲ್ಲಾ ರೀತಿಯ ರಂಗ ಪ್ರಾಕಾರ ಗಳ ಪರಿಚಯ ಮಾಡಿಸಿ ಹಾಡು, ನಟನೆ, ಮೌನಾಭಿನಯ, ಚಿತ್ರಕಲೆ, ಪರಿಕರ, ನಾಟಕ ರಚನೆ, ಹೀಗೆ ವಿವಿಧ ರೀತಿಯ ರಂಗ ಪ್ರಯೋಗಗಳ ಬಗ್ಗೆ ಶಿಕ್ಷಣ ನೀಡುತ್ತ ಒಂದು ವರ್ಷದ ಡಿಪ್ಲೊಮಾ ಪದವಿಯನ್ನು ಕೂಡ ನೀಡುತ್ತ ರಂಗ ಶಿಕ್ಷಕರನ್ನು ತಯಾರಿ ಮಾಡುತ್ತಿದ್ದರು. ಅವರಲ್ಲಿ ಹಲವರು ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ರಂಗ ಶಿಕ್ಷಕರಾಗಿ ವೃತ್ತಿಪರರಾಗಿರುವುದು ಮತ್ತು ಕೆಲವರು ತಮ್ಮದೇ ಆದ ರಂಗ ತಂಡಗಳನ್ನು ಕಟ್ಟಿಕೊಂಡು ಯಶಸ್ವೀ ಜೀವನ ಸಾಗಿಸುತ್ತಿರುವುದು ಹೆಮ್ಮೆಯಲ್ಲದೆ ಮತ್ತಿನ್ನೇನು. ಅದೇ ರೀತಿ ಮಕ್ಕಳಿಗಾಗಿ ಚಿಣ್ಣರ ಚಿತ್ತಾರ’ ಚಿಣ್ಣರ ಛಾವಡಿ , ಕವಿ ಮೇಳ, ಕಿರಿಯರ ಕಟಕಟೆ, ಸಂವಾದ ಇತ್ಯಾದಿ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಸಂಘಟನೆ, ಸಾಹಿತ್ಯ ಸಂಸ್ಕೃತಿಯ ಸಂಸ್ಕಾರವನ್ನು ಬೆಳೆಸುವಲ್ಲಿ ಸಫಲರಾದರು.
ಬಡಾವಣಾ ರಂಗಭೂಮಿ, ಯುವಕರ ರಂಗ ಜಗಲಿ, ಕವಿಗೋಷ್ಟಿ, ಪದ ಚಿತ್ತಾರ, ಪುಸ್ತಕ ಪ್ರಕಟಣೆ, ಚಿತ್ರ ಕಥನ (ಚಿತ್ರ ರಚಿಸಿ ಕಥೆ ಕಟ್ಟುವಿಕೆ) ಬೊಂಬೆ ಹಬ್ಬ, ಮೀಡಿಯಾ ಹಬ್ಬ ಹೀಗೆ ಯುವ ಪೀಳಿಗೆಯ ರಂಗಾಸಕ್ತಿಗೆ ಒರೆ ಹಚ್ಚಿ 23 ವರ್ಷಗಳಿಂದ ಸತತ ನಾಟಕ, ನೃತ್ಯ ರೂಪಕ, ಕೋಲಾಟ, ರಾಷ್ಟ್ರಾದ್ಯಂತ ಹಲವು ಸಂಸ್ಥೆಗಳ ಜೊತೆಗೂಡಿ ನಾಟಕೋತ್ಸವ ಆಯೋಜನೆ, ವಸ್ತ್ರ ವಿನ್ಯಾಸ, ನೇಪಥ್ಯದ ದುಡಿಮೆ ಒಂದೋ ಎರಡೋ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ಆಯೋಜಿಸುತ್ತ ರಂಗ ಚಟುವಟಿಕೆಗಳಲ್ಲಿ ನಿರಂತರವಾಗಿ ಕಾರ್ಯತತ್ಪರರಾಗಿ ಪರಿವರ್ತನೆಯ ಸಾಕಾರಮೂರ್ತಿ ಎನಿಸಿಕೊಂಡರು.
ಇನ್ನು ಇವೆಲ್ಲದರ ಜೊತೆಗೆ ಕೊಳಗೇರಿಯ ಹಾಗೂ ಅನಾಥಾಶ್ರಮದ ಮಕ್ಕಳಿಗೂ ಉಚಿತ ಕಾರ್ಯಾಗಾರ,ರಂಗ ತರಬೇತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಸಮಾಜದ ಕೆಳವರ್ಗಕ್ಕೂ ತಮ್ಮಿಂದಾದ ಸಹಾಯ, ಕಾಣಿಕೆಯನ್ನು ನೀಡುತ್ತ ಬಂದಿದ್ದಾರೆ. ಆದರೂ ಇವರ ಮುಖದಲ್ಲಿ ದಣಿವಿನ ಗೆರೆಗಳಿಲ್ಲ.
ಇನ್ನು ಥೇಮಾ ಹಾಗೂ ರಂಗಚಿತ್ತಾರ ಸಾಂಸ್ಕೃತಿಕ ಸಂಘದ ಟ್ರಸ್ಟೀ ಯಾಗಿ ರಂಗ ಪ್ರಯೋಗ ಶಾಲೆಯ ಪ್ರಮುಖ ಸಲಹೆಗಾರರಾಗಿ, ವೃತ್ತಿ ನಿಮಿತ್ತ ದಿಲ್ಲಿಯಲ್ಲಿದ್ದಾಗ ಸಮಾನ ಮನಸ್ಕರ ಜೊತೆಗೂಡಿ ಕನ್ನಡ ಚೇತನವೆಂಬ ಕನ್ನಡ ಸಂಘದ ಹುಟ್ಟಿಗೆ ಕಾರಣರಾಗಿ ಅಲ್ಲದೆ ಕರ್ನಾಟಕದ ಮೊಟ್ಟ ಮೊದಲ ಕನ್ನಡ ಲೇಖಕಿಯರ ಸಂಘದ ನಿರ್ದೇಶಕಿಯಾಗಿ ಹೀಗೆ ಉತ್ಸಾಹದ ಚಿಲುಮೆಯಾಗಿ ಒಳ್ಳೆಯ ಸಂಘಟಕಿಯೆನಿಸಿಕೊಂಡು ಜನಮಾನಸಕ್ಕೆ ಹತ್ತಿರವಾದರು.
ಹಲವಾರು ಹಾಸ್ಯ ಹಾಗೂ ಗಂಭೀರ ನಾಟಕಗಳಿಗೆ NSD ಪದವೀಧರ ಶ್ರೀನಿವಾಸ ಮೂರ್ತಿಯವರ ಮಾರ್ಗದರ್ಶನದಲ್ಲಿ ಬೊಂಬೆಯಾಟದ ರೂಪ ನೀಡಿ ಪಪ್ಪೆಟ್ ಲ್ಯಾಂಡ್ ಎಂಬ ಬೊಂಬೆಯಾಟದ ರೆಪರ್ಟ್ ಹುಟ್ಟಲು ಕಾರಣರಾದರು. ಜಿಗಿ ಬೊಂಬೆಯಾಟ ಎಂಬ ಪ್ರಥಮ ಕಿರುತೆರೆಯ ಬೊಂಬೆಯಾಟದ ಧಾರವಾಹಿಯ ಮೂಲಕ ಹೊಸ ಕಲೆಯನ್ನು ಲೋಕಕ್ಕೆ ಪರಿಚಯಿಸಿದರು ಶ್ರೀಮತಿ ಶೋಭಾ ವೆಂಕಟೇಶ್.
ಇನ್ನು ಪತಿ ವೆಂಕಟೇಶ್ ಅವರು ಕೆನರಾ ಬ್ಯಾಂಕ್ ನ ಮುಖ್ಯ ಪ್ರಬಂಧಕರಾಗಿದ್ದರೂ ತನ್ನ ಹೆಂಡತಿಯ ಈ ಎಲ್ಲಾ ಸಾಧನೆಯ ಹಲವು ಮೈಲಿಗಲ್ಲುಗಳ ರಂಗ ಪಯಣದಲ್ಲಿ ಕಾಯಾ ವಾಚಾ ಮನಸಾ ಜೊತೆಯಾಗಿದ್ದು ಸದಾ ಪತ್ನಿಗೆ ಬೆಂಗಾವಲಾಗಿ ನಿಂತವರು.
ಸಂಸ್ಥೆ ಹಾಗೂ ಇವರ ಈ ಸಾಧನೆಗೆ ಬಹಳಷ್ಟು ಪ್ರಶಸ್ತಿ ಸನ್ಮಾನಗಳು ದೊರೆತಿದ್ದು ಅವುಗಳಲ್ಲಿ ಜೀವಮಾನ ರಂಗ ಸಾಧನೆ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಮಕ್ಕಳ ಕಣ್ಮಣಿ ಆರ್ ಕಲ್ಯಾಣಮ್ಮ ಪ್ರಶಸ್ತಿ, ನಾಯಿಕಾ ಉತ್ತಮ ಅಂಟ್ರಪ್ರಾನರ್ ಶಿಪ್ ಪ್ರಶಸ್ತಿ ಇತ್ಯಾದಿ ಸದಾ ನೆನಪಿಸಿಕೊಳ್ಳುವಂತಹವುಗಳು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಮತ್ತು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಜಂಟಿಯಾಗಿ ಈ ಬಾರಿಯ ಮಲಬಾರ್ ವಿಶ್ವರಂಗ ಪುರಸ್ಕಾರ – 2023 ನ್ನು ಇವರಿಗೆ ಕೊಟ್ಟು ಗೌರವಿಸುತ್ತಿದೆ.
- ರಾಜೇಶ್ ಭಟ್ ಪಣಿಯಾಡಿ