ಬೆಂಗಳೂರು : ನಾಡಿನ ಪ್ರಸಿದ್ಧ ಚಿತ್ರಕಲಾವಿದರಾದ ಕೆ.ಜಿ. ಲಿಂಗದೇವರು ಇವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ದಿನಾಂಕ 21 ಜನವರಿ 2025ರಿಂದ 30 ಜನವರಿ 2025ರವರೆಗೆ ಬೆಳಗ್ಗೆ 11-00 ಗಂಟೆಯಿಂದ ಸಂಜೆ 7-00 ಗಂಟೆವರೆಗೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಕಲಾ ಗ್ಯಾಲರಿಯಲ್ಲಿ ನಡೆಯಲಿದೆ. ‘ಶೋಧ’ ಶೀರ್ಷಿಕೆಯಡಿ ನಡೆಯುತ್ತಿರುವ ಈ ಚಿತ್ರಕಲಾ ಪ್ರದರ್ಶನದಲ್ಲಿ ಸುಮಾರು 63 ಕಲಾಕೃತಿಗಳಿರಲಿವೆ. ಕೆ.ಜಿ. ಲಿಂಗದೇವರು ಕ್ಯಾನ್ಸಾಸ್‌ನಲ್ಲಿ ಮೂಡಿದ ಹತ್ತು ಹಲವು ರೇಖೆಗಳು ಅಸಂಗತ ಆಕೃತಿಗಳಾಗಿ ಬಣ್ಣ ತುಂಬಿಕೊಂಡು ವಿಶಿಷ್ಟ ಚಿತ್ರಗಳಾಗಿ ಹೊರಹೊಮ್ಮಿವೆ.
ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದು ರೀತಿಯ ಶೋಧದಲ್ಲಿ ತೊಡಗಿರುವುದು ಸಹಜ ಮತ್ತು ಅದು ನಮಗೆ ಅನಿವಾರ್ಯ. ಈ ಸರಣಿಯಲ್ಲಿ ಬರುವ ಚಿತ್ರಗಳಲ್ಲಿ ಹುಟ್ಟಿನಿಂದ ಶುರುವಾಗುವ ಹುಡುಕಾಟವಿದೆ. ಬಳಿಕ ಅಧ್ಯಾತ್ಮಿಕ ದೀಪದಿಂದ ಮಾಡುವ ತನ್ನೊಳಗಿನ ಶೋಧವೂ ಇದೆ. ಲಿಂಗದೇವರು ಇವರ ಈ ಸರಣಿಯಲ್ಲಿ ಕಾಣಿಸುವ ಎರಡು ಆಕೃತಿಗಳಲ್ಲಿ ಒಂದು ಪಂಚಮಹಾಭೂತಗಳಿಂದಾದ ಅರಿಷಡ್ವರ್ಗಗಳ ತೊಗಲು ಹೊತ್ತ ದೇಹವಾದರೆ ಇನ್ನೊಂದು ಚಿತ್ರವು ಅವೆಲ್ಲವನ್ನು ಮೀರಿ ನಿಂತ ಶುದ್ಧ ಶೋಧದ ಕಾರಣೀಭೂತನಾದ ಮುಕ್ತಾತ್ಮ. ಇವರ ಚಿತ್ರಸರಣಿಯನ್ನು ನೋಡುತ್ತಾ ಹೋದರೆ ಅವುಗಳೆಲ್ಲವೂ ಮೂರ್ತರೂಪದಿಂದ ಆರಂಭಿಸಿ ಅಮೂರ್ತ ರೂಪ ಪಡೆಯುವವರೆಗೆ ಅದರ ಅದ್ಭುತ ಚಿತ್ರ ರಚನೆ, ವಿನೂತನ ಶೈಲಿ ವಿಧಾನ ಅನುಭವಿಸುವ ಅವಕಾಶ ನಮಗೆಲ್ಲರಿಗೂ ಸಿಗುತ್ತವೆ. ಒಟ್ಟಾರೆ ಇಲ್ಲಿನ ಕಲಾಕೃತಿಗಳಲ್ಲಿ ಅದ್ಭುತ ರೇಖೆಗಳ ಮೋಡಿ, ಸಂದೇಶವಾಹಕ, ವಿಸ್ಮಯಕಾರಿ ಕಥಾವಸ್ತು, ಮನ ಮಿಡಿಯುವ ಚಿತ್ರರಚನೆ, ಸಮಯ ಸಂದರ್ಭದಲ್ಲಿ ತಕ್ಕಂತ ಬಣ್ಣಗಳ ಬಳಕೆ, ಅದ್ಭುತ ವಿನ್ಯಾಸ, ಅಚ್ಚರಿಯ ಸ್ಪೋಟ, ಚಿತ್ರಗಳಿಗೆ ಹೊಂದಾಣಿಕೆಯಾಗುವಂಥ ಚೌಕಟ್ಟು ಜನಮನ ಸೆಳೆಯುವ ನೆರಳು ಮತ್ತು ಬೆಳಕಿನ ಮೋಡಿ, ವಿಭಿನ್ನ ಹಲವು ವಿಚಾರಗಳು ಈ ಕಲಾಕೃತಿಗಳಲ್ಲಿ ಎದ್ದು ಕಾಣುತ್ತದೆ.