Subscribe to Updates

    Get the latest creative news from FooBar about art, design and business.

    What's Hot

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ

    May 28, 2025

    ಕುಂದಾಪುರದಲ್ಲಿ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣೆ | ಮೇ 29

    May 28, 2025

    ಕಾವೇರಿ ಕಾಲೇಜಿನಲ್ಲಿ ಮೂರು ಪುಸ್ತಕಗಳ ಲೋಕಾರ್ಪಣೆ ಹಾಗೂ ದತ್ತಿನಿಧಿ ಕಾರ್ಯಕ್ರಮ | ಮೇ 31

    May 28, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಂಗದಲ್ಲಿ ಭರವಸೆಯ ಬೆಳಕು ಮೂಡಿಸಿದ ಶೂದ್ರಶಿವ – ನಾಟಕ ವಿಮರ್ಶೆ – ಸಾಧು ಪೂಜಾರಿ
    Drama

    ರಂಗದಲ್ಲಿ ಭರವಸೆಯ ಬೆಳಕು ಮೂಡಿಸಿದ ಶೂದ್ರಶಿವ – ನಾಟಕ ವಿಮರ್ಶೆ – ಸಾಧು ಪೂಜಾರಿ

    February 16, 2023Updated:August 19, 2023No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಶೂದ್ರ ಶಿವ…. ಈ ಒಂದು ಹೆಸರೇ ವಿಶಿಷ್ಠ ಮತ್ತು ವಿನೂತನ. ಸಾಮಾಜಿಕ ಸುಧಾರಣೆಯ ಹಾದಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಆರಂಭಿಸಿದ ದೇವಾಲಯ ಸ್ಥಾಪನೆಯ ಸಂದರ್ಭದಲ್ಲಿ ಮೇಲ್ವರ್ಗದ ಪ್ರತಿರೋಧದ ಉಪಶಮನಕ್ಕಾಗಿ ತಳೆದ ಜಾಣ ನಡೆ, “ನಾನು ಪ್ರತಿಷ್ಠಾಪಿಸಿದ್ದು ನಿಮ್ಮ ಶಿವನನ್ನಲ್ಲ… ನಮ್ಮ ಶಿವನನ್ನು… ಅವನು ಶೂದ್ರ ಶಿವ.” ಎಂಬ ಶಾಂತ ಉತ್ತರ. ಇದೇ ಪರಿಕಲ್ಪನೆಯನ್ನು ಇಟ್ಟು ಕೊಂಡು ಹೊಸದಾಗಿ ಹುಟ್ಟಿಕೊಂಡ ರುದ್ರ ಥೇಟರ್, ಮಂಗಳೂರು ಇವರು ನಿರ್ಮಿಸಿ ಫೆಬ್ರವರಿ 5ರಂದು ಗುರುಗಳು ಸ್ಥಾಪಿಸಿದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಪ್ರಸ್ತುತ ಪಡಿಸಿದ ಚೊಚ್ಚಲ ಪ್ರಯೋಗವೇ ‘ಶೂದ್ರ ಶಿವ’ ಕನ್ನಡ ನಾಟಕ.
    ಇಂತಹದ್ದೊಂದು ಪ್ರಯತ್ನ ಮಂಗಳೂರಿನಲ್ಲಿ ನಡೆಯುತ್ತಿದೆ ಎಂಬ ಸುದ್ಧಿ ಕೆಲ ತಿಂಗಳ ಹಿಂದೆ ಬಂದಿದ್ದು ರುದ್ರ ಥೇಟರ್‌ನ ಉದ್ಘಾಟನೆಯೂ ವಿದ್ಯುಕ್ತವಾಗಿ ನಡೆದಿತ್ತು. ಬಳಿಕ ರಾಜ್ಯಾದ್ಯಂತದಿಂದ ಕಲಾವಿದರನ್ನು ಆಯ್ಕೆ ಮಾಡಿ ರಂಗ ತರಬೇತಿ ನಡೆಸಿ ನಾಟಕವನ್ನು ಸಿದ್ಧಗೊಳಿಸಲಾಯಿತು. ಇಂತಹ ಒಂದು ಪ್ರಯತ್ನದ ಬಗ್ಗೆ ಸಹಜವಾಗಿಯೇ ರಂಗಾಸಕ್ತರಲ್ಲಿ, ನಾರಾಯಣ ಗುರುಗಳ ಭಕ್ತರಲ್ಲಿ ಕುತೂಹಲ ಮೂಡಿತ್ತು. ನಾಟಕದ ವೀಕ್ಷಣೆಗೆ ಕಾತರದಿಂದ ಕಾದಿದ್ದೂ ಆಯಿತು. ಕೊನೆಗೂ ಆ ದಿನ ಬಂದೇ ಬಂದಿತು. ಶ್ರೀ ಗೋಕರ್ಣನಾಥ ಸಭಾಂಗಣದಲ್ಲಿ ಸಂಜೆ 7ರಿಂದ 9.15ರ ವರೆಗೆ ನಡೆದ ನಾಟಕ ಅವಿಸ್ಮರಣೀಯವಾಯಿತು. ಪ್ರಯೋಗದ ಆರಂಭಿಕ ಚಿಕ್ಕಪುಟ್ಟ ತೊಡಕುಗಳ ಹೊರತಾಗಿಯೂ ನಾಟಕ ಸೇರಿದ್ದ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿತು. ಪ್ರತಿಯೊಂದು ದೃಶ್ಯದಲ್ಲಿ ಬರುವ ನಿರ್ಣಾಯಕ ಹೇಳಿಕೆಗಳಿಗೆ, ಕೊನೆಯಲ್ಲಿ ಬರುವ ತಾರ್ಕಿಕ ಅಂತ್ಯಕ್ಕೆ ಕರತಾಡನಗಳ ಮೂಲಕ ಪ್ರೇಕ್ಷಕ ವರ್ಗ ಮೆಚ್ಚುಗೆ ವ್ಯಕ್ತಪಡಿಸಿತು. ಬಹಳ ಸುದೀರ್ಘ ಗ್ರಂಥವಾಗಿರಬಹುದಾದ ನಾರಾಯಣಗುರುಗಳ ಜೀವನ ಚರಿತ್ರೆ, ಸುಧಾರಣಾ ಚಳವಳಿಗಳ ಸಾರಸರ್ವಸ್ವವನ್ನು ಹಿಡಿದಿಟ್ಟುಕೊಂಡು ಕೇವಲ ಎರಡೂ ಕಾಲು ಗಂಟೆಯಲ್ಲಿ ಪ್ರಸ್ತುತ ಪಡಿಸಿದ ರೀತಿಯಂತೂ ಅದ್ಭುತ. ಅಂತಿಮವಾಗಿ ಒಂದು ಸುದೀರ್ಘ ಗ್ರಂಥವನ್ನು ಓದಿ ಮುಗಿಸಿದಾಗ ಸಿಗುವ ಅನುಭವವನ್ನು ಈ ಪ್ರದರ್ಶನ ನೀಡಿತು.
    ಬ್ರಹ್ಮಶ್ರೀ ನಾರಾಯಣಗುರುಗಳ ಬದುಕು ಎಂದಿಗೂ ಆದರ್ಶ. ದ್ವೇಷ ರಹಿತವಾಗಿ ಮೈತ್ರಿ, ಸಮಾನತೆ ಮತ್ತು ಐಕ್ಯತೆಯಿಂದ ಸಂಘಟಿತರಾಗಿ, ಶಕ್ತಿವಂತರಾಗಿ ಒಗ್ಗೂಡಿದ ಶಕ್ತಿಯಿಂದ ಸಾಮಾಜಿಕ, ಔದ್ಯೋಗಿಕ ಹಾಗೂ ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂಬ ಸಂದೇಶ ಮತ್ತು ತತ್ವ ಆದರ್ಶಗಳು ಪ್ರಸಕ್ತ ಕಾಲಘಟ್ಟದಲ್ಲಿ ಸಮಾಜಕ್ಕೆ ಬಹಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಗುರುಚಳವಳಿಯ ಅರಿವು, ವ್ಯಾಪ್ತಿ, ವಿಸ್ತಾರವನ್ನು ತಿಳಿಸುವ ಸಣ್ಣ ಪ್ರಯತ್ನವೇ ‘ಶೂದ್ರ ಶಿವ’ ನಾಟಕ ಎಂಬುದಾಗಿ ನಾಟಕದ ನಿರ್ಮಾಪಕರು ಹೇಳುತ್ತಾರೆ. ಶ್ರೀ ಬಾಬು ಶಿವಪೂಜಾರಿಯವರು ಅಧ್ಯಯನ ಪೂರ್ವಕವಾಗಿ ರಚಿಸಿದ “ಶ್ರೀ ನಾರಾಯಣ ಗುರು ವಿಜಯ ದರ್ಶನ” ಗ್ರಂಥವನ್ನು ಪ್ರೇರಣಾ ಪಠ್ಯವಾಗಿಟ್ಟುಕೊಂಡು ನಾರಾಯಣಗುರುಗಳ ಬಗ್ಗೆ ಇತರ ಹಲವಾರು ಲೇಖಕರು ಬರೆದಿರುವ ಸಾಹಿತ್ಯದ ನಾನಾ ಆಕರಗಳನ್ನು ಅಭ್ಯಸಿಸಿ, ರಂಗ ಪ್ರಯೋಗದ ಸಾಧ್ಯತೆಗಳ ಮಿತಿಗಳನ್ನು ಅರ್ಥೈಸಿಕೊಂಡು ನಾಟಕವನ್ನು ಸಿದ್ಧಗೊಳಿಸಲಾಗಿದೆ.
    ದೇವಸ್ಥಾನದ ದಾರಿಯಲ್ಲಿಯೂ ನಡೆಯಲು ಅವಕಾಶವಿಲ್ಲದ ಸಮುದಾಯಗಳಿಗೆ ದೇವಸ್ಥಾನವನ್ನು ಕಟ್ಟಿಕೊಡುವುದು ಮತ್ತು ತನ್ನೊಳಗೆ ಆ ದೇವರ ಹುಟುಕಾಟದ ದಾರಿಯನ್ನು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ತೋರಿಸಿಕೊಟ್ಟು ಧರ್ಮ, ಜಾತಿ, ತಾರತಮ್ಯಗಳ ಗೋಡೆಗಳನ್ನು ಒಡೆಯುವ, ಮೌಢ್ಯಗಳ ನಿರ್ಮೂಲನೆ ಮಾಡಲು ಪಣತೊಟ್ಟ ಸುಧಾರಣಾ ಸಂತನೊಬ್ಬನ ಕಥೆ ಇದು.
    ಇಡೀ ನಾಟಕದ ಪರಿಕಲ್ಪನೆಯ ಹಿಂದಿರುವ ಶಕ್ತಿಯೇ ಶಿವ. ಆ ಪರಶಿವನ ತಾಂಡವ ನೃತ್ಯದೊಂದಿಗೆ ಕೈಯಲ್ಲಿ ಹಿಡಿದ ಡಮರುಗದ ಚಲನೆಯೊಂದಿಗೆ ಮುನ್ನಲೆಯಲ್ಲಿ ಜೀಟಿಗೆ, ವಾದ್ಯಗಳ ಮೇಳದೊಂದಿಗೆ, ಹಿನ್ನೆಲೆಯಲ್ಲಿ ನಗಾರಿ, ತಮಟೆ, ಗಂಟೆಗಳ ವಾದನದೊಂದಿಗೆ ಪರಿಣಾಮಕಾರಿಯಾಗಿ ನಾಟಕದ ಆರಂಭವನ್ನು ಪ್ರಸ್ತುತಪಡಿಸಲಾಯಿತು. ಧರ್ಮದ ಗ್ಲಾನಿಯಾದಾಗ ಅವತಾರವೆತ್ತುವ ಸಂದರ್ಭಕ್ಕಾಗಿ ಶಿವ ಕಾಯುತ್ತಿರುವಂತೆ ಈ ದೃಶ್ಯ ಭಾಸವಾಯಿತು. ಅನ್ಯಾಯ, ಅನಾಚಾರ, ಶೋಷಣೆ, ಅಂಧಶ್ರದ್ಧೆ, ಮಡಿ ಮೈಲಿಗೆಯ ಪ್ರಭಾವ ತಾರಕಕ್ಕೇರಿ ಜನರು ಕಂಗಾಲಾದ ಕಾಲದಲ್ಲಿ ನಾರಾಯಣ ಗುರುವಿನ ರೂಪದಲ್ಲಿ ಶಿವನ ಅವತಾರವಾದಂತೆ ಭಾಸವಾಗುತ್ತದೆ. ಪುರಾಣವಲ್ಲದ ಐತಿಹಾಸಿಕ ಕಾಲಘಟ್ಟದಲ್ಲಿ ದೇವರು ಪ್ರತ್ಯಕ್ಷನಾಗುವುದು ಅಸಾಧ್ಯವೆನ್ನುವ ಅರಿವಿನೊಂದಿಗೆ ಗುರುಗಳ ಜೀವನದುದ್ದಕ್ಕೂ ಅಲ್ಲಲ್ಲಿ ನಡೆದ ಘಟನೆಗಳ ಹಿಂದೆ ದೈವಸಂಕಲ್ಪವಿತ್ತು ಮತ್ತು ಅದು ಸಾಕ್ಷಾತ್ ಶಿವನೇ ಆಗಿದ್ದ ಎಂಬುವುದನ್ನು ಸೂಚ್ಯವಾಗಿ ತಿಳಿಸಲಾಗಿದೆ.
    ನಾಟಕದುದ್ದಕ್ಕೂ ಅಲ್ಲಲ್ಲಿ ಪ್ರವೇಶಗೊಂಡು ಅರಿವಿನ ಬೆಳಕಿನ ಸಂಕೇತವಾದ ಲಾಟೀನು ಹಿಡಿದು ಪ್ರಜ್ಞಾವಂತ ನಾಗರಿಕರಾಗಿಯೂ, ಕಥೆಗಾರರಾಗಿಯೂ, ಸುದ್ಧಿಗಾರರಾಗಿಯೂ, ಕೆಲವೊಮ್ಮೆ ಜನಸಮುದಾಯದ ಭಾಗವಾಗಿಯೂ, ನಾರಾಯಣ ಗುರುಗಳ ಜೀವನ ಚರಿತ್ರೆಯ ಹಾಗೂ ಸುಧಾರಣಾ ಚಳವಳಿಯ ಹಲವು ಸಂಗತಿಗಳನ್ನು ವಾಚಿಕವಾಗಿ ಪ್ರಸ್ತುತಪಡಿಸುತ್ತಾ ನಾಟಕದ ಕೊಂಡಿಗಳಾಗಿ ಮುನ್ನಡೆಸುವ ಸೂತ್ರದಾರರು ಗಮನ ಸೆಳೆಯುತ್ತಾರೆ. ಇನ್ನು ಅಂದಿಗೂ ಇಂದಿಗೂ ಎಂದೆಂದಿಗೂ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಭಟ್ಟಂಗಿಗಳು, ನಯವಂಚಕರು, ತಮ್ಮ ಮೇಲೆಯೇ ಶೋಷಣೆ ನಡೆಯುತ್ತಿದ್ದರೆ ಅದನ್ನು ಅರಿಯದೆ ಸುಧಾರಣೆಯ ಹಾದಿಯಲ್ಲಿ ನಡೆಯುವವರನ್ನು ಹಾದಿ ತಪ್ಪಿಸುತ್ತಾ ಸುಳ್ಳು ಸುದ್ಧಿಗಳನ್ನು ಹಬ್ಬಿಸುತ್ತಾ ಚಳವಳಿಯ ದಿಕ್ಕು ತಪ್ಪಿಸುತ್ತಾ ಸಾಗುವ ಕಿವಿಗೆ ಹೂ ಇಟ್ಟುಕೊಂಡಿರುವ ವಿಘ್ನ ಸಂತೋಷಿ ಪಾತ್ರಗಳು ಗಮನಾರ್ಹ. ದಲಿತರು, ಹಿಂದುಳಿದವರು ದಾರಿಯಲ್ಲಿ ಸಾಗುವಾಗ ಸದ್ದು ಮಾಡುತ್ತಾ ಸಾಗಬೇಕಾದ ಅನಿವಾರ್ಯತೆ, ಮೇಲ್ವರ್ಗದವರು ದಾರಿಯಲ್ಲಿ ಸಾಗುವಾಗ ದಾರಿಬಿಟ್ಟು ನಿಲ್ಲಬೇಕಾದ ಅಸ್ಪೃಶ್ಯತೆ, ವಿವಿಧ ಜಾತಿಗಳಿಗೆ ವಿವಿಧ ಅಳತೆಗಳ ಅಂತರದಲ್ಲಿ ನಿಂತಿರಬೇಕಾದ ಅನಿಷ್ಠ ಪದ್ಧತಿಗಳ ಪ್ರಸ್ತುತಿ ಗಮನ ಸೆಳೆಯುತ್ತದೆ. ಶೋಷಣೆಗಳ ಮುಖಗಳಾಗಿ ತಲೆ ತೆರಿಗೆ, ಸಾವಿಗೆ ವಿಧಿಸುವ ತೆರಿಗೆ, ಆಭರಣ ತೊಡಬೇಕಾದರೆ ಕೊಡಬೇಕಾದ ತೆರಿಗೆ, ಮಗುವಿಗೆ ಹಾಲುಡಿಸಲೂ ನೀಡಬೇಕಾದ ತೆರಿಗೆಗಳ ವಿಚಾರ ಅಂದಿನ ಕಾಲ ಘಟ್ಟದ ಸ್ಥಿತಿಯನ್ನು ಕಣ್ಣೆದುರು ತಂದು ನಿಲ್ಲಿಸುತ್ತದೆ. ಕೆಳವರ್ಗದವರು ಚಿನ್ನದ ಆಭರಣ ದರಿಸಬಾರದು ಎಂಬ ಕಾರಣಕ್ಕೆ ಡಾ. ಪಲ್ಪುರವರ ತಾಯಿ ತನ್ನ ಚಿನ್ನದ ಆಭರಣಕ್ಕೆ ಬೆಳ್ಳಿಯ ಲೇಪ ಕೊಟ್ಟು ಧರಿಸುತ್ತಿದ್ದ ವಿಷಯವಂತೂ ಎಂತವರ ಮನವನ್ನೂ ಕದಡದಿರದು. ಮದುವೆಯ ಮೊದಲ ರಾತ್ರಿಯೇ ನವ ವಧು ಮೇಲ್ವರ್ಗದ ನಂಬೂದಿರಿಗಳ ಜೊತೆ ಕಳೆಯಬೇಕಾದ ಆ ಅನಾಗರಿಕ ಪದ್ಧತಿ ಮನ ಕದಡುತ್ತದೆ. ತೆರಿಗೆ ಕಟ್ಟಲು ಹಣವಿಲ್ಲದವರು ಲಾಟಿ ಏಟು ತಿನ್ನುವ ಕ್ರೌರ್ಯ ಮನಕಲಕುತ್ತದೆ. “ಆದಿಯಲ್ಲಿ ನಿಮ್ಮಂತೆ ಜನಿಸಿದ ನಾವು ಇಂದು ಏಕೆ ಈ ಶೋಷಣೆಗೆ ಒಳಗಾಗಿದ್ದೇವೆ. ಓ ದೇವರೇ… ನಮ್ಮ ಈ ಸ್ಥಿತಿಗೆ ಕೊನೆಯೇ ಇಲ್ಲವೇ” ಎಂಬ ದೀನರ, ದಲಿತರ ಕೂಗಿಗೆ ಮನಕರಗುತ್ತದೆ.
    ಶಿವನ ಸಂಕಲ್ಪದಂತೆ ಜನಿಸಿದ ನಾರಾಯಣ ಗುರುಗಳು ಅರವಿಪುರಂನಲ್ಲಿ ಶಿವಲಿಂಗ ಸ್ಥಾಪಿಸಿದ ಸಂಭ್ರಮದಲ್ಲಿ ಜನ ಮುಳುಗಿದ್ದಾಗ ಅವರ ಕಣ್ಣಿಗೆ ಕಾಣದಂತಿದ್ದು ಅವರ ನಡುವೆಯೇ ಸುಳಿದಾಡುತ್ತಾ ಸಮಾಧಾನದಿಂದ ಸ್ವತಃ ಸಂಭ್ರಮಿಸುವ ದೃಶ್ಯ ಶಿವನ ಸಾನಿಧ್ಯವನ್ನು ಸಂಕೇತಿಸುತ್ತದೆ.
    ಮಂಗಳೂರಿನ ಕುದ್ರೋಳಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರಿಂದ (ಕರ್ನಾಟಕ ಏಕೈಕ) ಸ್ಥಾಪಿಸಲ್ಪಟ್ಟ ಶ್ರೀ ಗೋಕರ್ಣನಾಥ ಕ್ಷೇತ್ರದ ಸ್ಥಾಪನೆಯ ಹಿನ್ನೆಲೆ, ಅದರ ಘಟನಾವಳಿಗಳು ಬೆರಗು ಮೂಡಿಸುವಂತೆ ಪ್ರಸ್ತುತಿಗೊಂಡಿದೆ. ಬಿಲ್ಲವ ಜನಾಂಗದ ನ್ಯಾಯಾಧೀಶರೊಬ್ಬರ ಪ್ರವೇಶದಿಂದ ದೇವಸ್ಥಾನವೊಂದು ಅಪವಿತ್ರವಾಯಿತೆಂದು ಬ್ರಹ್ಮಕಲಶ ನಡೆಸಿದ ದೇವಸ್ಥಾನದ ಆಡಳಿತ ಸಮಿತಿ, ಬಿಲ್ಲವ ಮುಖಂಡ ಅರಸಪ್ಪನವರ ಮುಂದಾಳತ್ವದಲ್ಲಿ ನಡೆಯುವ ಸಮಾಲೋಚನೆ, ಬಿಲ್ಲವರಿಗಾಗಿ ದೇವಾಲಯವೊಂದರ ಸ್ಥಾಪನೆಗಾಗಿ ನಾರಾಯಣ ಗುರುಗಳ ಆಗಮನ ಈ ಎಲ್ಲಾ ಘಟನಾವಳಿಗಳು ಬಹಳ ಅರ್ಥಪೂರ್ಣವಾಗಿ ಮೂಡಿಬಂದಿವೆ. ನಾರಾಯಣ ಗುರುಗಳ ಆಗಮನದ ಶುಭ ಸಂದರ್ಭಕ್ಕೆ ತುಳುನಾಡಿನ ಜಾನಪದ ಹಾಡು, ಕುಣಿತ ಸಾಂಕೇತಿಕ ಭೂತ ಕೋಲ, ಹಿನ್ನೆಲೆ ಸಂಗೀತ ಬಹಳ ಆಹ್ಲಾದಕರವಾಗಿತ್ತು.
    ಕೇರಳದ ಪರಿಸ್ಥಿತಿಯ ಸುಧಾರಣೆ ಬಗ್ಗೆ ಡಾ. ಪಲ್ಪು ರವರಿಗೆ ಮಾರ್ಗದರ್ಶನ ನೀಡಿದ್ದ ಸ್ವಾಮಿ ವಿವೇಕಾನಂದರು,
    ನಾರಾಯಣ ಗುರುಗಳ ಚಳವಳಿಗಳ ಭಾಗವಾಗಿದ್ದ ಮತ್ತು ಅವರಿಂದ ಪ್ರೇರಣೆಗೊಂಡು ಪ್ರತ್ಯೇಕ ಚಳವಳಿಗಳನ್ನು ಹುಟ್ಟುಹಾಕಿ ಮುನ್ನಡೆಸಿದ ಡಾ. ಪಲ್ಪು, ಕವಿ ಕುಮಾರನ್ ಆಶಾನ್, ಸಹೋದರ ಅಯ್ಯಪ್ಪನ್,ಟಿ. ಕೆ. ಮಾಧವನ್, ಅಯ್ಯಂಕಾಲಿ ಮೊದಲಾದ ಪಾತ್ರಗಳು ಗಮನ ಸೆಳೆದವು.
    ದೇವಾಲಯವೊಂದರ ಪ್ರತಿಷ್ಠಾಪನೆ ಸಂದರ್ಭ ಉದ್ಭವಿಸಿದ ಮೂರ್ತಿ ಪ್ರತಿಷ್ಟಾಪನೆ ಬಗೆಗಿನ ಕಲಹವನ್ನು ಕನ್ನಡಿಯನ್ನು ಪ್ರತಿಷ್ಠಾಪಿಸಿ “ತತ್ವಮಸಿ” ಸಿದ್ಧಾಂತವನ್ನು ಪ್ರತಿಪಾದಿಸುವ ಮೂಲಕ ಪರಿಹರಿಸಿದ ಘಟನೆಯ ಪ್ರಸ್ತುತಿ ಮನಮುಟ್ಟುವಂತಿತ್ತು.
    ವಿವಿಧ ಮತ ಧರ್ಮಗಳ ಬಗೆಗಿನ ವಿಚಾರ ವಿಮರ್ಶೆ, ಆ ಮತ ಧರ್ಮಗಳ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ಏರ್ಪಡಿಸಿದ ಜಗತ್ತಿನ ಎರಡನೆಯ ಮತ್ತು ಏಶಿಯಾದ ಮೊದಲ ಸರ್ವಧರ್ಮ ಸಮ್ಮೇಳನ ನಡೆಸುವ ಕುರಿತಾದ ಗುರುಗಳ ವಿಚಾರಗಳು ಮಹತ್ವಪೂರ್ಣವಾಗಿದೆ.
    ಈ ಸಮ್ಮೇಳನದ ಸ್ವಾಗತ ದ್ವಾರದಲ್ಲಿ ಬರೆಸಲು ಗುರುಗಳು ಸೂಚಿಸಿದ ವಾಖ್ಯ “ವಾದಿಸಲು ಮತ್ತು ಗೆಲ್ಲಲು ನಾವು ಇಲ್ಲಿ ಸೇರುತ್ತಿಲ್ಲ, ತಿಳಿಯಲು ಮತ್ತು ತಿಳಿಸಲು ಸೇರುತ್ತೇವೆ ” ಗಮನ ಸೆಳೆಯುತ್ತದೆ.
    ಒಂದೊಮ್ಮೆ ನಾರಾಯಣಗುರುಗಳಲ್ಲಿ ಐಕ್ಯಗೊಂಡ ಶಿವ ಕೊನೆಯಲ್ಲಿ ನಾರಾಯಣಗುರುಗಳು ಶಿವನಲ್ಲಿ ಲೀನಗೊಳ್ಳುವ ಸಾಂಕೇತಿಕ ದೃಶ್ಯಾವಳಿ ಅರ್ಥಪೂರ್ಣವಾಗಿತ್ತು.
    ನಾರಾಯಣಗುರುವರ್ಯರ ಜೀವನ, ಸಾಧನೆ, ಚಳುವಳಿಗಳ ಕಥಾನಕವನ್ನು ರಂಗರೂಪಕ್ಕೆ ಅಳವಡಿಸಿದ ಶರತ್ ಎಸ್. ನೀನಾಸಂ ಮತ್ತು ಮನೋಜ್ ವಾಮಂಜೂರು, ಸಂಗೀತ ನೀಡಿದ ಶರತ್ ಉಚ್ಚಿಲ್, ಸಾಹಿತ್ಯ ರಚಿಸಿದ ಮನೋಜ್ ವಾಮಂಜೂರು ಮತ್ತು ಜಯಶ್ರೀ ಇಡ್ಕಿದು, ವಸ್ತ್ರ ವಿನ್ಯಾಸಕ ಶಿವರಾಮ್ ಕಲ್ಲಡ್ಕ, ಬೆಳಕಿನ ನಿರ್ವಹಣೆಯಲ್ಲಿ ಪ್ರವೀಣ್ ವಿಸ್ಮಯ ಮತ್ತು ಮನೀಶ್ ಪಿಂಟೋ, ರಂಗವಿನ್ಯಾಸ ಮಾಡಿದ ಶಶಿಧರ ಅಡಪ, ಪರಿಕಲ್ಪನೆ, ನಿರ್ದೇಶನ ಮಾಡಿದ ವಿದ್ದು ಉಚ್ಚಿಲ್, ರಂಗದಲ್ಲಿ ಅಭಿನಯಿಸಿದ ಎಲ್ಲ ಕಲಾವಿದರು ಅಭಿನಂದನಾರ್ಹರು.
    ಈ ಒಂದು ನಾಟಕದ ಸಾಕ್ಷಾತ್ಕಾರಕ್ಕೆ ದುಡಿದ ಮತ್ತು ಬೆಂಬಲ ನೀಡಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಖಜಾಂಚಿ ಶ್ರೀ ಪದ್ಮರಾಜ್ ಆರ್. ಮತ್ತು ಬೆಂಬಲ ನೀಡಿದ ಎಲ್ಲರೂ ಕೂಡ ಸ್ಮರಣೀಯರು.
    ಸನ್ಮಾನ್ಯ ಶ್ರೀ ಜನಾರ್ಧನ ಪೂಜಾರಿಯವರು ಅಭಿಪ್ರಾಯಪಟ್ಟಂತೆ ಇದಕ್ಕಿಂತ ಒಳ್ಳೆಯ ರೀತಿಯಲ್ಲಿ ಈ ನಾಟಕವನ್ನು ಪ್ರಸ್ತುತ ಪಡಿಸುವುದು ಕಷ್ಟಸಾಧ್ಯವೆಂದೇ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ನನ್ನ ಅನಿಸಿಕೆ.

    • ಸಾಧು ಪೂಜಾರಿ

    Share. Facebook Twitter Pinterest LinkedIn Tumblr WhatsApp Email
    Previous Articleಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ನಿತ್ಯಸತ್ಯ ಕೃತಿ ಲೋಕಾರ್ಪಣೆ
    Next Article ಪ್ರವರ ಥಿಯೇಟರ್ ತಂಡದಿಂದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ “ಅಣ್ಣನ ನೆನಪು” ಸಾಕ್ಷ್ಯ ನಾಟಕ
    roovari

    Add Comment Cancel Reply


    Related Posts

    ರಂಗ ಚಿನ್ನಾರಿಯಿಂದ ಸಂಸ್ಕೃತಿ ಉಳಿಸುವ ಕೆಲಸ – ಎಡನೀರು ಶ್ರೀ ಗಳು

    May 28, 2025

    ಬೆಂಗಳೂರಿನ ಮಲ್ಲತ್ತಳ್ಳಿ ಕಲಾಗ್ರಾಮದಲ್ಲಿ ನಾಟಕ ಪ್ರದರ್ಶನ | ಮೇ 30

    May 28, 2025

    ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ‘ಹುಡುಕಾಟದಲ್ಲಿ’ ನಾಟಕದ ಪ್ರಥಮ ಪ್ರದರ್ಶನ

    May 28, 2025

    ಅರೆಹೊಳೆಯ ನಂದಗೋಕುಲ ರಂಗಶಾಲೆಯಲ್ಲಿ ವಸತಿ ಸಹಿತ 45 ದಿನಗಳ ‘ರಂಗ ಶಿಕ್ಷಣ’ | ಜುಲೈ

    May 27, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.