ಬಲಿ (ದೀಪಾವಳಿ)
ಕಾಡು ಪ್ರಾಣಿ ಹಾವಳಿಗೆ ಗದ್ದೆ ತೋಟ ಬಲಿ
ವೋಟಿನ ಆಸೆಗಾಗಿ ರಾಜ್ಯದ ಹಿತ ಬಲಿ
ಆಧುನಿಕತೆಯ ರಭಸದಲ್ಲಿ ಮನ:ಶಾಂತಿ ಬಲಿ
ಇವನೆಲ್ಲ ನೋಡಿ ಕಳವಳಗೊಂಡನು ಬಲಿ !
ದಾಂಪತ್ಯ
ಸರಿಯಾಗಿ ಸಾಗಿದರೆ ಹಾಲ್ಜೇನು ಸತ್ಯ
ಕಿರಿ ಕಿರಿಯು ಇದ್ದರದು ನರಕವೇ ನಿತ್ಯ
ಅರಿತು ಬಾಳಲು ಬಾಳು ಅರಳಿರುವ ಸುಮವು
ಅದರ ಗಂಧದ ಘಮವು ಸಗ್ಗಕ್ಕೆ ಸಮವು !
ಸರ್ದಾರ್ ವಲ್ಲಭ ಭಾಯ್ ಪಟೇಲ್
ದೇಶದೇಕತೆಗಾಗಿ ನೀವ್ ಟೊಂಕ ಕಟ್ಟಿ
ಬದ್ಧತೆಯ ಮೌಲ್ಯದಿಂ ಮನ ಮನವ ಮುಟ್ಟಿ
ದೃಢ ಚಿತ್ತ ಗುರಿಯತ್ತ ಎಂದೆಂದು ಗಟ್ಟಿ
ಭವ್ಯ ಭವಿತವ್ಯಕ್ಕೆ ನೀಡಿ ಹೊಸ ದಿಟ್ಟಿ !
ಕನ್ನಡ ನಾಡು
ಅನ್ನ ನೀಡಿದೆ ಚಿನ್ನ ನೀಡಿದೆ
ಎನ್ನ ತನವನು ನೀಡಿದೆ
ಚೆನ್ನ ಬಾಳಿಗೆ ಬೆಳಕ ನೀಡುವ
ಹೊನ್ನಿನಕ್ಷರ ಕಲಿಸಿದೆ
ನಿನ್ನ ಉನ್ನತ ಹಿರಿಮೆ ಗರಿಮೆಯ
ಮುನ್ನ ಎಲ್ಲೆಡೆ ಸಾರಿದೆ
ಕನ್ನಡಮ್ಮನೆ ನಿನ್ನ ಇದಿರಲಿ ಎನ್ನ
ತಲೆಯಿದು ಬಾಗಿದೆ !
ನಮನ
ಮಡಿಲಲ್ಲಿ ಮುದ್ದಿಸುತ ಸಿಹಿ ತುತ್ತನಿತ್ತು
ಸಲಹುತ್ತ ಕರುಣಿಸುವೆ ಅಕ್ಷರದ ಸೊತ್ತು
ಕನ್ನಡಮ್ಮನ ಪ್ರೀತಿಗಾವುದಿದೆ ಸಾಟಿ ?
ತಲೆಬಾಗಿ ಸಲ್ಲಿಸುವೆ ನಾ ನಮನ ಕೋಟಿ !
ತುಳಸಿ
ನಮ್ಮ ಮನೆಯಂಗಳದಿ ಕಂಗೊಳಿಸಿ ತುಳಸಿ
ಸ್ವಾಸ್ಥ್ಯ ಪೂರಕ ಗಾಳಿ ಬೀಸುತಿಹ ತುಳಸಿ
ಪರಿಸರಕೆ ನಿಜ ಶೋಭೆ ನೀಡುತಿಹ ತುಳಸಿ
ಪೂಜೆಯನು ಸ್ವೀಕರಿಸಿ ವರ ಕೊಡುವ ತುಳಸಿ !
ಜಾಣರೇ ಉತ್ತರಿಸಿ..!
ನೆಲ ಜಲದ ನಡುವಿನಲಿ ನಾನೊಂದು ಬಿಂದು
ಸರಕು ನಿರ್ವಹಣೆಯಲಿ ನಿಮ್ಮೆಲ್ಲ ಬಂಧು
ನೆಲದಲ್ಲಿ ಸಾಗಿಸಲು ಲಾರಿ ಯಾ ರೈಲು
ಕಡಲಲ್ಲಿ ತುಂಬಿದೊಡಲಿನ ಹಡಗು ಸಾಲು !
ಜಾಣರೇ ಉತ್ತರಿಸಿ..!
ನೋಟಕ್ಕೆ ನಿಲುಕದಿಹ
ನಸು ನೀಲಿ ಮೈಯವನು
ಒಮ್ಮೊಮ್ಮೆ ಬಿಳಿಯಾಗಿ
ಬದಲಾಗುವೆ
ಕೆಲವೊಮ್ಮೆ ಕಪ್ಪಾಗಿ ದಪ್ಪ ದಪ್ಪ
ಆಗ ನಾ ಬೊಬ್ಬಿಡುತ
ಖುಷಿಯನ್ನು ಹಂಚುವೆನು
ಹೊನ್ನ ಗೆರೆಯಲಿ ಬರೆದು ರಪ್ಪ ರಪ್ಪ
ಇದ ಕಂಡು ಮುದಗೊಂಡು ಪ್ರಕೃತಿಯು ಕುಣಿಯುತಿರೆ
ತಿರೆ ತಣಿಯುವಂತೆನ್ನ ಆನಂದ ಬಾಷ್ಪ !
(ರಪ್ಪ ರಪ್ಪ = ಬಹಳ ವೇಗವಾಗಿ)
ಎನ್. ಸುಬ್ರಾಯ ಭಟ್ ಮಂಗಳೂರು
