ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 18-03-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರದ್ಧಾ ಶ್ರೀನಿವಾಸ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಶ್ರೀಮತಿ ವಿದ್ಯಾ ಮತ್ತು ಶ್ರೀ ಕೆ.ಪಿ. ಶ್ರೀನಿವಾಸ್ ದಂಪತಿಗಳ ಸುಪುತ್ರಿಯಾಗಿರುವ ಶ್ರದ್ಧಾರವರು ಮೂಲತಃ ಕರ್ನಾಟಕ ಶೈಲಿಯ ಗಾಯನ, ಭರತನಾಟ್ಯ ಮತ್ತು ಯೋಗ ಮುಂತಾದ ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸುವ ದಕ್ಷಿಣ ಕನ್ನಡ ಕುಟುಂಬ ವರ್ಗದ ಹಿನ್ನಲೆಯಿಂದ ಬಂದವರು. ಏಳನೇ ವರ್ಷದಿಂದಲೇ ಗುರುಗಳಾದ ಶ್ರೀಯುತ ಕಿರಣ್ ಸುಬ್ರಹ್ಮಣ್ಯಮ್ ಹಾಗೂ ಶ್ರೀಮತಿ ಸಂಧ್ಯಾ ಕಿರಣ್ ಇವರ ಮಾರ್ಗದರ್ಶನದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರವಾದ ಭರತನಾಟ್ಯವನ್ನು ಕಲಿಯಲು ಪ್ರಾರಂಭಿಸಿದರು. ಗುರುಗಳ ತಂಡದೊಂದಿಗೆ ಭಾರತದ ಅನೇಕ ಪ್ರಖ್ಯಾತ ಸ್ಥಳಗಳಲ್ಲಿ ನಡೆದ ಭರತನಾಟ್ಯ ಕಾರ್ಯಕ್ರಮ ಹಾಗೂ ಉತ್ಸವಗಳಲ್ಲಿ ಕಾಣಿಸಿಕೊಂಡಿದ್ದಾರೆ. 2014ನೇ ಇಸವಿಯಲ್ಲಿ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ಬೆಂಗಳೂರಿನ ಎ.ಡಿ.ಎ. ಕಲಾಮಂದಿರದಲ್ಲಿ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಭರತನಾಟ್ಯದಲ್ಲಿರುವ ನಿಪುಣತೆಯನ್ನು ಪ್ರದರ್ಶಿಸಿರುತ್ತಾರೆ.
ಗುರುಗಳ ನಿರ್ದೇಶನದಲ್ಲಿ ಪ್ರಮುಖ ನೃತ್ಯಗಾತಿಯಾಗಿ ಅನೇಕ ನೃತ್ಯ ನಿರ್ಮಾಣದಲ್ಲಿ ಭಾಗವಹಿಸಿದ್ದು, ಅನೇಕ ಕಡೆ ನಡೆದ ‘ಮಾನಿನಿ’, ‘ಶರವಣಭವ’, ‘ರಾಗಂ ತಾನಂ ಪಲ್ಲವಿ’ ಮುಂತಾದ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ತಮ್ಮ ನೃತ್ಯ ಕೌಶಲ್ಯತೆಯನ್ನು ಪ್ರದರ್ಶಿಸಿ, ಬೆಂಗಳೂರಿನ ಎ.ಡಿ.ಎ. ಕಲಾಮಂದಿರದಲ್ಲಿ ‘ಸಂಮ್ಯಕ್ತಾ’ ಎಂಬ ನೃತ್ಯ ಸಂಯೋಜನೆ ಹಾಗೂ ಚೆನ್ನೈನ ಕೃಷ್ಣಗಾನ ಸಭಾಹಾಲ್ ನಲ್ಲಿ ‘ಇಳಮಯಿಲ್ ತಿರಮೈ’ ಎಂಬ ಕಾರ್ಯಕ್ರಮದಲ್ಲಿ ಏಕವ್ಯಕ್ತಿ ಪ್ರದರ್ಶನವನ್ನು ನೀಡಿದ್ದಾರೆ.
ಶೃದ್ಧಾರವರು ಬೆಂಗಳೂರಿನ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆದ ಭರತನಾಟ್ಯದ ಕಿರಿಯ, ಹಿರಿಯ ಹಾಗೂ ಪೂರ್ವ ವಿದ್ವತ್ತ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇವರ ಯಶಸ್ವಿ ಸಾಧನೆಗೆ ‘ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ’ ವಿದ್ಯಾರ್ಥಿ ವೇತನವನ್ನು ನೀಡಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಕಿರಿಯ ಶ್ರೇಣಿಯನ್ನು ಪೂರ್ಣಗೊಳಿಸಿದ್ದಾರೆ. ನಾಟ್ಯ ಪ್ರಕಾರವಲ್ಲದೆ ಉತ್ತಮ ಯೋಗಪಟುವಾಗಿರುವ ಇವರು ‘ನಿರಾಕುಲ ಯೋಗ ಅಕಾಡೆಮಿ’ಯವರ ಯೋಗ ಶಿಕ್ಷಕಿ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ.