ಧಾರವಾಡ : ಕವಿ ಬೇಂದ್ರೆಯವರನ್ನು ಇನ್ನೊಬ್ಬ ಕನ್ನಡದ ಕವಿ ಗೋಪಾಲಕೃಷ್ಣ ಅಡಿಗರು’ಶ್ರಾವಣ ಪ್ರತಿಭೆ’ಯ ಕವಿ ಎಂದು ಬಣ್ಣಿಸಿದ್ದಾರೆ. ಬೇಂದ್ರೆಯವರು ತೀರಿಕೊಂಡಾಗ ಬೇಂದ್ರೆ ಕಾವ್ಯ ಕುರಿತು ಕನ್ನಡದ ಮೂವರು ಹಿರಿಯ ಕವಿಗಳು ಚರ್ಚಿಸುವಾಗ ಬೇಂದ್ರೆಯವರ ಕಾವ್ಯ ‘ಶ್ರಾವಣ ಪ್ರತಿಭೆ’ಯಿಂದ ಕೂಡಿದ್ದು ಎಂದು ಜಿ.ಎಸ್. ಶಿವರುದ್ರಪ್ಪನವರು ಹೇಳಿದರು. ಗೋಪಾಲಕೃಷ್ಣ ಅಡಿಗರು ತಮ್ಮ’ಸಾಕ್ಷಿ’ಯಲ್ಲಿ TS Eliot ಹೇಳುವ ‘Auditory imagination’ ಎಂಬ ಪದ ಸಮೂಹವನ್ನು ‘ಶ್ರಾವಣ ಪ್ರತಿಭೆ’ ಎಂದು ಕನ್ನಡಕ್ಕೆ ಅನುವಾದಿಸಿ, ಈ ಪ್ರತಿಭೆಯ ಕವಿ ಯಾರೆಂದರೆ ‘ಬೇಂದ್ರೇ’ ಎಂದು ಸಾರಿದರು.
ನಾವು ಶ್ರಾವಣ ನೋಡಿದರೆ, ಬೇಂದ್ರೆ ಶ್ರಾವಣ ಕಂಡು, ಅನುಭವಿಸಿ ಅದಕ್ಕೆ ವಿಶಿಷ್ಟ ರೀತಿಯಲ್ಲಿ ಕಾವ್ಯದ ಸಂಸ್ಕಾರ ನೀಡಿದರು. ಶ್ರಾವಣ ಕುರಿತು ಬೇಂದ್ರೆಯವರು ಬರೆದಷ್ಟು ಜಗತ್ತಿನ ಕಾವ್ಯ ಪ್ರಪಂಚದಲ್ಲಿ ಯಾರು ಬರೆದಿಲ್ಲ. ಅವರ ಶ್ರಾವಣವೆಂದರೆ ಧಾರವಾಡದ ಶ್ರಾವಣ, ಸಾಧನಕೇರಿಯ ಶ್ರಾವಣ. ಈ ಶ್ರಾವಣನನ್ನು ನೆನಪಿಸುವ ಕಾರ್ಯಕ್ರಮ ‘ಶ್ರಾವಣದ ಕವಿ ಬೇಂದ್ರೆ’
ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಮಹಿಪತಿ ಸಾಂಸ್ಕೃತಿಕ ಕೇಂದ್ರ, ಸ್ನೇಹ ಪ್ರತಿಷ್ಠಾನ ಹಾಗೂ ಸಕ್ರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮವು ದಿನಾಂಕ 22 ಅಗಸ್ಟ್ 2025 ಶುಕ್ರವಾರದಂದು ಸಂಜೆ 5-30ಕ್ಕೆ ಧಾರವಾಡದ ಸಾಂಸ್ಕೃತಿಕ ಸಮುಚ್ಚಯ ರಂಗಾಯಣದ ಆವರಣದಲ್ಲಿ ನಡೆಯಲಿದೆ. ಅವಳಿ ನಗರದ ಯುವ ಸಮೂಹವನ್ನು ದೃಷ್ಟಿಯಲ್ಲಿಟ್ಟುಕೊಂಡು ಬೇಂದ್ರೆ ಕಾವ್ಯ- ವಾಚನ-ಗಾಯನ-ನೃತ್ಯಗಳು ಪ್ರಸ್ತುತಗೊಳ್ಳುತ್ತವೆ. ಯುವಕರಲ್ಲಿ ಬೇಂದ್ರೆ ಸಾಹಿತ್ಯದ ಆಸಕ್ತಿಯನ್ನು ಊರ್ಜೀತಗೊಳಿಸುವದು ನಮ್ಮ ಮುಖ್ಯ ಉದ್ದೇಶ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಗಿರೀಶ ಪದಕಿ ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಡಾ. ಕೃಷ್ಣ ಕಟ್ಟಿ ಪ್ರಾಸ್ತಾವಿಕ ಮಾತುಗಳನ್ನು ಹೇಳುತ್ತಾರೆ. ಡಾ. ಶಶಿಧರ ನರೇಂದ್ರ ಇವರು ಕಾರ್ಯಕ್ರಮ ಸಮಾರೋಪಿಸುತ್ತಾರೆ. ಹಿರಿಯರಾದ ಶ್ರೀ ಹರ್ಷ ಡಂಬಳ ಹಾಗೂ ಡಾ. ಹ.ವೆಂ. ಕಾಖಂಡಕಿ ಇವರು ಬೇಂದ್ರೆಯವರ ರಸ ಪ್ರಸಂಗಗಳನ್ನು ಮೆಲಕು ಹಾಕುತ್ತಾರೆ. ಶ್ರಾವಣದ ಕವಿ ಬೇಂದ್ರೆಯವರ ವಾಚನ-ಗಾಯನ-ನೃತ್ಯ ಹಾಗೂ ರಸ ನಿಮಿಷಗಳ ಸ್ವಾನಂದಕ್ಕೆ ಕಾರ್ಯಕ್ರಮದ ಸಂಘಟಕರಾದ ಶ್ರೀ ಸಮೀರ ಜೋಶಿ ಆಮಂತ್ರಿಸಿದ್ದಾರೆ.