ಬದಿಯಡ್ಕ : ಶ್ರೀ ಭಾರತೀ ವಿದ್ಯಾಪೀಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕವು ಆಯೋಜಿಸಿದ್ದ ನಾಡೋಜ ಕವಿ ಡಾ. ಕೈಯ್ಯಾರರ ಕವನ, ಕಥಾ ಸಂಚಿಕೆಗಳಿಂದ ಆಯ್ದ ಭಾಗದ ‘ಚಿಂತನ ಮಂಥನ ಮತ್ತು ಸಂಸ್ಮರಣೆ’ ಕಾರ್ಯಕ್ರಮವು ದಿನಾಂಕ 09-08-2023ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಖ್ಯಾತ ಸಾಹಿತಿ, ನಿವೃತ್ತ ಪ್ರಾಂಶುಪಾಲರಾದ ಪ್ರೊ.ಪಿ.ಎನ್. ಮೂಡಿತ್ತಾಯರವರು ಉದ್ಘಾಟಿಸಿ ಮಾತನಾಡುತ್ತಾ “ನೀಳಕಾಯದ, ಸಪಾಟಾಗಿ ಮುಖಕ್ಷೌರ ಮಾಡಿ ಗಂಭೀರ ವದನದ, ಅಚ್ಚುಕಟ್ಟಾಗಿ ಉಡುಪು ತೊಟ್ಟು ಸದಾ ಖದರ್ ಶಾಲು ಹೊದ್ದ ಹಸನ್ಮುಖಿ ಕೈಯ್ಯಾರ ಕಿಂಞಣ್ಣ ರೈಗಳನ್ನು ಕಂಡಿದ್ದ ಜನರು ಮರೆಯುವುದಕ್ಕುಂಟೆ ? ಅವರ ಪರ್ವತವಾಣಿಯ ನಿರರ್ಗಳ ಭಾಷಣಗಳು, ಬರಹದ ಮೂಲಕ ವ್ಯಕ್ತಿಚಿತ್ರಗಳು, ಅಗಲಿದ ಸಾಧಕರ ಕುರಿತು ದಾಖಲೆ ಇವುಗಳನ್ನು ಕರಾರುವಾಕ್ಕಾಗಿ ಮುಂದಿಡುವ ನೆನಪುಶಕ್ತಿ ಇತ್ಯಾದಿಗಳು ಎಂದಿಗೂ ಮನೆಮಾತಾಗಿತ್ತು. ಒಂದು ಶತಮಾನ ಕಾಲ ಕಾಸರಗೋಡು ಅವರದೇ ಗುಂಗಿನಲ್ಲಿ ಖುಶಿಯಲ್ಲಿತ್ತು. ಶತಾಯುಷಿ ಮೂರು ಕಾಲಗಳನ್ನು ಕಂಡವರು, ಅದರ ನೋವು ಉಂಡವರು. ಸ್ವಾತಂತ್ರ್ಯ ಹೋರಾಟದ ಮೂಲಕ ದೇಶಸೇವೆ, ಕರ್ನಾಟಕದ ಏಕೀಕರಣದ ಮೂಲಕ ಕನ್ನಡ ಸೇವೆ, ಕರ್ನಾಟಕದೊಂದಿಗೆ ಕಾಸರಗೋಡು ವಿಲೀನೀಕರಣಗೊಳ್ಳಬೇಕೆಂಬ ತುಡಿತದಿಂದ ನಾಡಸೇವೆ. ಇದು ಅವರ ಬದುಕಿನುದ್ದಕ್ಕೂ ತುಂಬಿತ್ತು. ಅದೇನೊ ಔದಾರ್ಯದ ಅವರ ಆರ್ಯರೋ ಮೊಗಲರೋ ಕ್ರೈಸ್ತರೋ ತಡೆಯೇನು, ಎಲ್ಲರೂ ಬರಲೆಂದು ಸ್ವಾಗತಿಸಿದೆ ಎಂದದ್ದು ಮಾತ್ರ ಸಾರ್ವಕಾಲಿಕ ಸೌಜನ್ಯವಾಗಿ ಉಳಿಯದೆನಿಸುತ್ತದೆ. ಇವತ್ತು ನಮ್ಮ ಸುತ್ತ ಇರುವ ಯಾವ್ಯಾವುದೋ ಜನಾಂಗ ಸವಾಲಾಗುತ್ತಿರುವುದರಿಂದ ಎಲ್ಲರಲ್ಲೂ ಜಾಗರೂಕತೆಯಿಂದ ಇರುವ ಅಗತ್ಯ ಕಂಡುಬರುತ್ತಿದೆ.” ಎಂದರು.
ನಾಡೋಜ ಮತ್ತು ಪಂಪ ಪ್ರಶಸ್ತಿ ಭಾಜನರಾದ ಕೈಯ್ಯಾರ ಕಿಂಞಣ್ಣ ರೈಯವರ ಕಾವ್ಯಗಳ ಚಿಂತನ-ಮಂಥನ ನಿರ್ವಹಿಸಿದ ಡಾ. ಪ್ರಮೀಳಾ ಮಾಧವ್ ಇವರು ಕೃತಿ ಸಾಗರದ ವೈವಿಧ್ಯತೆಯನ್ನು ಪರಿಚಯಿಸಿ ಒಂದೆರಡು ಕವನಗಳನ್ನು ವಿಶ್ಲೇಷಿಸಿದರು. “ಪ್ರಸ್ತುತ ಕೈಯ್ಯಾರರು ‘ಬೇಡುವೆಂ ಚಂದ್ರವಂಶದ ಕುಡಿಯ ಕಾಪಾಡು..ʼ ಕವನದಲ್ಲಿ ಮಹಾಭಾರತದ ಕರ್ಣ ಮತ್ತು ಕುಂತಿಯರ ಪಾತ್ರಗಳನ್ನು ಮರುಸೃಷ್ಟಿ ಮಾಡಿರುವುದು ವಿಶಿಷ್ಟವಾಗಿದೆ. ಕರ್ಣನ ಪಾತ್ರದಲ್ಲಿ ಪ್ರಧಾನವಾದ ಮೂರು ಮುಖಗಳಿವೆ. ಒಂದು ಕೌರವನ ಪಕ್ಷದಲ್ಲಿದ್ದು ಪಾಂಡವರ ವಿರುದ್ಧ ಕೌರವರನ್ನು ಎತ್ತಿಕಟ್ಟಿದ ದುಷ್ಕೃತ್ಯಗಳು. ಇನ್ನೊಂದು ಹಸ್ತಿನಾವತಿಯ ಮಹಾರಾಜನಾಗಿ ಬದುಕಬೇಕಾಗಿದ್ದ ಆತ ವಿಧಿಯ ಕೈಗೊಂಬೆಯಾಗಿ ಎಲ್ಲ ಅವಕಾಶಗಳಿಂದಲೂ ವಂಚಿತನಾದುದು. ಮತ್ತೊಂದು ತನ್ನ ಅನನ್ಯವಾದ ತ್ಯಾಗ, ದಾನ, ವೀರತನಗಳಿಂದ ಅವನು ಏರಿದ ಎತ್ತರ. ವ್ಯಾಸಭಾರತದಲ್ಲಿ ಕರ್ಣ ದುಷ್ಟಚತುಷ್ಟಯರಲ್ಲಿ ಒಬ್ಬನಾದರೂ ಬದುಕಿನಲ್ಲಿ ಸಂಭವಿಸಿದ ಘಟನೆಗಳೆಲ್ಲವೂ ಅವನನ್ನು ಎತ್ತರಕ್ಕೆ ಕೊಂಡೊಯ್ದಿವೆ ಎನ್ನುವುದು ಕೈಯ್ಯಾರರ ಅಭಿಮತ. ಆದ್ದರಿಂದಲೇ ಮಹಾಭಾರತದಲ್ಲಿ ಕರ್ಣನಿಗೆ ಸಮಾನರು ಯಾರೂ ಇಲ್ಲ, ‘ನಿಸ್ವಾರ್ಥಿ ವೀರ ಕಲಿಕರ್ಣ ನಿನಗೆಣೆಯಿಲ್ಲ’ ಎನ್ನುತ್ತಾರೆ. ಕೈಯ್ಯಾರರು ಕುಂತಿಯ ಪಾತ್ರದಲ್ಲೂ ಸಹೃದಯರಿಗೆ ಸಹಾನುಭೂತಿ ಹುಟ್ಟುವಂತೆ ಮಾಡಿರುವುದು ವಿಶೇಷ.
ರಾಮಾಯಣದ ಊರ್ಮಿಳೆಯ ವಿಚಾರದಲ್ಲಿ ಬೇರೆಯೇ ರೀತಿ ಸ್ಪಂದಿಸುವ ಕೈಯ್ಯಾರರು ಊರ್ಮಿಳೆಗಾದ ಅನ್ಯಾಯಕ್ಕೆ ವಾಲ್ಮೀಕಿಯನ್ನು ಕೂಡ ಟೀಕಿಸುತ್ತಾರೆ. ಊರ್ಮಿಳೆಯ ವಿರಹದುರಿಯ ತೀವ್ರತೆಯನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ ? ಅವಳ ತ್ಯಾಗ, ಸಹನೆ, ನೋವು ಅರ್ಥವಾಗಬೇಕಿತ್ತಲ್ಲ ! ಎಂದು ವಿಷಾದಿಸುತ್ತಾರೆ. ಇನ್ನು ಎಲ್ಲ ವಯೋಮಾನದವರೂ ಓದಿ ಆಸ್ವಾದಿಸುವಂಥ ಕವಿತೆಗಳನ್ನು ಕೈಯ್ಯಾರರು ರಚಿಸಿದ್ದಾರೆ. ಇವತ್ತಿನ ವಿದ್ಯಾಭ್ಯಾಸ ಪದ್ಧತಿಯಲ್ಲಿ ಇಂಥ ಪಾಠಗಳೇ ಕಣ್ಮರೆಯಾಗಿವೆ. ಕಂಠಪಾಠದ ಪರಿಕಲ್ಪನೆಯಂತೂ ಇಲ್ಲವೇ ಇಲ್ಲವಾಗಿದ್ದು ಇವತ್ತಿನ ಮಕ್ಕಳು ಇಂಥ ಅಮೂಲ್ಯ ಜೀವನ ಪಾಠದಿಂದ ವಂಚಿತರಾಗಿರುವುದು ಖೇದನೀಯ” ಎಂದರು.
ಡಾ.ಶ್ರೀನಿಧಿ ಸರಳಾಯ ತಾವು ಕೈಯ್ಯಾರರೊಂದಿಗೆ ಒಡನಾಡಿದ ದಿನಗಳನ್ನು ಸ್ಮರಿಸುತ್ತ ಅವರ ಸಾಮಾಜಿಕ ಕಾಳಜಿ, ಪುಸ್ತಕ ಪ್ರೀತಿ, ಆಡಳಿತ ಕೌಶಲಗಳನ್ನು ಹೇಳುತ್ತಾ ಮೇರು ವ್ಯಕ್ತಿತ್ವವನ್ನು ವಿವರಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಈ ಕಾರ್ಯಕ್ರಮ ಆಯೋಜಿಸಿದ್ದು ಅದರ ಕೇರಳ ಗಡಿನಾಡ ಘಟಕಾಧ್ಯಕ್ಷ ಶ್ರೀ ಎಸ್.ವಿ.ಭಟ್ ಕಾಸರಗೋಡು ಅವರು ಅಧ್ಯಕ್ಷ ಭಾಷಣದಲ್ಲಿ ಘಟಕದ ವೈವಿಧ್ಯಪೂರ್ಣ ದುಡಿಮೆಯ ಪರಿಚಯ ಮಾಡಿಕೊಟ್ಟರು. ಸ್ಮಾರಕ ನಿರ್ಮಾಣದಂಥ ಸೇವೆ ಸಾಧನೆಗಳು ಸಲ್ಲುತ್ತಿರುವುದನ್ನು ಶ್ಲಾಘಿಸಿದರು.
“ತಂದೆಯ ಕಾಯ ಅಳಿದರೂ ನಾಡಿನಾದ್ಯಂತ ಅವರ ಸಂಸ್ಮರಣೆ ನಡೆಯುತ್ತಿರುವುದು ಅವರಿನ್ನೂ ಜೀವಂತ ಇದ್ದಾರೆ ಎಂಬ ಪ್ರತೀತಿ ಉಂಟುಮಾಡುತ್ತಿದೆ.” ಎಂದು ಕಿಂಞಣ್ಣ ರೈಯವರ ಸುಪುತ್ರ ಶ್ರೀ ಪ್ರಸನ್ನ ರೈ ಪ್ರತಿಕ್ರಿಯಿಸಿದರೆ, ಹೆಸರಾಂತ ಚಿತ್ರ ಕಲಾವಿದ ಶ್ರೀ ನೇಮಿರಾಜ ಶೆಟ್ಟಿ “ಮಹಾಕವಿ ಕೈಯ್ಯಾರರ ಕೀರ್ತಿ ಅಜರಾಮರ ಎನ್ನುತ್ತ, ಮಕ್ಕಳಲ್ಲಿ ಇಂತಹ ಮೇರು ವ್ಯಕ್ತಿತ್ವದ ಅರಿವು ಅಗತ್ಯ.” ಎಂದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ರೀ ಸತ್ಯನಾರಾಯಣ ಶರ್ಮ, ಕವಿಗಳ ಸುಪುತ್ರ ದುರ್ಗಾಪ್ರಸಾದ ರೈ ಕೆ., ಡಾ. ಬೇಸೀ ಗೋಪಾಲಕೃಷ್ಣ ಮುಂತಾದವರು ಅಭಿಪ್ರಾಯಗಳನ್ನು ಮಂಡಿಸಿದರು. ಕೈಯ್ಯಾರ ಕಿಂಞಣ್ಣ ರೈಗಳ ಮೂರು ಪ್ರಸಿದ್ಧ ಕವಿತೆಗಳನ್ನು ವಿದ್ಯಾರ್ಥಿ ವೃಂದ ಸುಶ್ರಾವ್ಯವಾಗಿ ಹಾಡಿದ್ದು ಆ ಮೂಲಕ ಕವಿಯನ್ನು ಗೌರವಿಸಿದ್ದು ಸ್ತುತ್ಯವೆನಿಸಿತು.
ಕಸಾಪ ಕಾರ್ಯಕಾರಿ ಸಮಿತಿ ಸದಸ್ಯೆ ವಿದ್ಯಾವಾಣಿ ಮಠದಮೂಲೆ ಸ್ವಾಗತಿಸಿ, ಕಸಾಪ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಡಿ.ಬಿ. ವಂದಿಸಿದರು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಅಧ್ಯಾಪಿಕೆ ರಶ್ಮಿ ಪೆರ್ಮುಖ ಕಾರ್ಯಕ್ರಮ ನಿರೂಪಿಸಿದರೆ, ಶಾಲಾ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು.