ಮುಂಬಯಿ: ಚೆಂಬೂರು ಪಶ್ಚಿಮದ ಚೆಡ್ಡಾ ನಗರ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ 24ನೇ ತಾಳಮದ್ದಳೆ ಸರಣಿ ಅಂಗವಾಗಿ ‘ಶ್ರೀರಾಮ ನಿರ್ಯಾಣ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ದಿನಾಂಕ 14 ಆಗಸ್ಟ್ 2025ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಪರವಾಗಿ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಗಾನ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ “ಕರಾವಳಿ ಭಾಗದಲ್ಲಿ ಹುಟ್ಟಿ ಬೆಳೆದ ಯಕ್ಷಗಾನವಿಂದು ಜಗದಗಲ ತನ್ನ ಪ್ರಭಾವವನ್ನು ಬೀರಲು ಅಲ್ಲಲ್ಲಿ ನೆಲೆಸಿರುವ ಕಲಾಸಕ್ತರು ಮತ್ತು ಕರಾವಳಿ ಮೂಲದ ಸಂಘ – ಸಂಸ್ಥೆಗಳು ಪ್ರಮುಖ ಕಾರಣವೆನ್ನಬಹುದು. ಇದರಲ್ಲಿ ಮಠ – ಮಂದಿರಗಳ ಕೊಡುಗೆಯೂ ಅಪಾರ. ದೇಶ ವಿದೇಶಗಳಲ್ಲಿರುವ ಪ್ರಸಿದ್ಧ ಸಂಸ್ಥಾನಗಳ ಶಾಖಾಮಠಗಳು ಯಕ್ಷಗಾನಕ್ಕೆ ವಿಶೇಷ ಪ್ರೋತ್ಸಾಹ ನೀಡಿವೆ. ಈ ನಿಟ್ಟಿನಲ್ಲಿ ಚೆಡ್ಡಾನಗರ ಶ್ರೀ ಸುಬ್ರಮಣ್ಯ ಮಠದಲ್ಲಿ ನಡೆಯುತ್ತಿರುವ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಾರ್ಹವೆನಿಸಿವೆ. ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರ ಮಾರ್ಗದರ್ಶನ ಮತ್ತು ಆರಿಕ್ಕಾಡಿ ಅಶೋಕ ಭಟ್ಟರಂತಹ ಸಂಸ್ಕೃತಿ ಪ್ರಿಯರ ಕಾರ್ಯಶೀಲತೆಯಿಂದ ಇದು ಸಾಧ್ಯವಾಗಿದೆ” ಎಂದು ಹೇಳಿದರು.
ಯಕ್ಷಗಾನ ಪೋಷಕರಾದ ಖ್ಯಾತ ಜ್ಯೋತಿಷಿ ಆರಿಕ್ಕಾಡಿ ಅಶೋಕ ಭಟ್ಟ ಕುರ್ಲಾ – ಪಶ್ಚಿಮ ಇವರ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಊರಿನಿಂದ ಬಂದ ಪ್ರಸಿದ್ಧ ಕಲಾವಿದರನ್ನು ಶಾಲು – ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಹಿರಿಯ ಅರ್ಥಧಾರಿ – ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಮಾತನಾಡಿ “ಯಾವುದೇ ಕಲೆ ಬೆಳೆಯಬೇಕಾದರೆ ರಾಜಾಶ್ರಯ ಬೇಕು. ಇದು ಅದರ ವ್ಯಾಪ್ತಿ ಮತ್ತು ವಿಸ್ತರಣೆಗೂ ಕಾರಣವಾಗುತ್ತದೆ. ಯಕ್ಷಗಾನದಂತಹ ನಮ್ಮ ನಾಡಿನ ಕಲೆ ಮುಂಬೈ ಮಹಾನಗರದಲ್ಲಿ ಇಷ್ಟೊಂದು ಜನಾಕರ್ಷಣೆ ಪಡೆಯಬೇಕಾದರೆ ಇಲ್ಲಿನ ಕಲಾಭಿಮಾನಿಗಳು ಮತ್ತು ಪೋಷಕರ ಔದಾರ್ಯ ಕಾರಣ” ಎಂದರು. ಅಜೆಕಾರು ಕಲಾಭಿಮಾನಿ ಬಳಗದ ಮುಂಬೈ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಆರಿಕ್ಕಾಡಿ ಅಶೋಕ ಭಟ್ಟರನ್ನು ಸನ್ಮಾನಿಸಿದರು. ಪತ್ನಿ ಆರಿಕ್ಕಾಡಿ ಪ್ರಿಯಾ ಅಶೋಕ್ ಭಟ್ ಜತೆಗಿದ್ದರು. ಮಠದ ಆಡಳಿತಾಧಿಕಾರಿ ವಿಷ್ಣು ಕಾರಂತ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಅರ್ಚನಾ ಕಾರಂತ್, ಪ್ರಭಾ ಉಡುಪ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಸರಣಿಯ ಆರನೇ ದಿನದ ಯಕ್ಷಗಾನ ತಾಳಮದ್ದಳೆ ‘ಶ್ರೀರಾಮ ನಿರ್ಯಾಣ’ ಪ್ರಸಂಗದಲ್ಲಿ ಡಾ. ಎಂ. ಪ್ರಭಾಕರ ಜೋಶಿ ಮತ್ತು ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ಶ್ರೀರಾಮ ), ಜಯಪ್ರಕಾಶ್ ಶೆಟ್ಟಿ ಪೆರ್ಮುದೆ (ಲಕ್ಷ್ಮಣ ), ದಿನೇಶ್ ಶೆಟ್ಟಿ ಕಾವಳಕಟ್ಟೆ (ದೂರ್ವಾಸ), ಸದಾಶಿವ ಆಳ್ವ ತಲಪಾಡಿ (ಕಾಲ ಪುರುಷ) ಅರ್ಥಧಾರಿಗಳಾಗಿದ್ದರು. ದೇವಿಪ್ರಸಾದ್ ಆಳ್ವ ತಲಪಾಡಿ ಅವರ ಭಾಗವತಿಕೆಗೆ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ್ ಶೆಟ್ಟಿ ವಗೆನಾಡು ಹಿಮ್ಮೇಳದಲ್ಲಿ ಸಹಕರಿಸಿದರು.