ವಿಜಯಪುರ : ವಿಜಯಪುರ ನಗರದಿಂದ ಅನತಿ ದೂರದಲ್ಲಿರುವ ತೊರವೆಯ ಶ್ರೀ ನೃಸಿಂಹ ದೇವಸ್ಥಾನದಲ್ಲಿ ತೊರವೆ ರಾಮಾಯಣ ಮಹಾಕಾವ್ಯದ ಯುದ್ಧಕಾಂಡದಲ್ಲಿರುವ `ಶ್ರೀರಾಮ ಪಟ್ಟಾಭಿಷೇಕಂ’ ಪ್ರಸಂಗದ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 30-05-2024 ರಂದು ಅರ್ಥಪೂರ್ಣವಾಗಿ ಜರುಗಿತು
`ಶ್ರೀ ಜನಕಜಾ ರಮಣ, ವಿಮಲ ಸರೋಜ ಸಂಭವ ಜನಕ……….. ಸುರಭೂಜ ತೊರವೆಯ ರಾಯ ನರಹರಿ ಪಾಲಿಸುಗೆ ಜಗವ’ ಎಂಬ ಮಂಗಲಾಚರಣ ಪದ್ಯದೊಂದಿಗೆ ಗಮಕಿಗಳಾದ ಶ್ರೀಮತಿ ಪುಷ್ಪಾ ಕುಲಕರ್ಣಿ ಹಾಗೂ ಶ್ರೀಮತಿ ಭೂದೇವಿ ಕುಲಕರ್ಣಿ ಇವರುಗಳು ಗಮಕ ವಾಚನವನ್ನು ಆರಂಭಿಸಿದರು. 14 ವರುಷಗಳ ವನವಾಸದಿಂದ ಅಯೋಧ್ಯೆಗೆ ಮರಳಿ ಬಂದ ರಾಮನು ತನ್ನ ತಾಯಂದಿರು ಹಾಗೂ ತಮ್ಮಂದಿರನ್ನು ಕಂಡು ಪಡುವ ಆನಂದ, ಅಣ್ಣನನ್ನು ಅಪ್ಪಿಕೊಂಡು ಕಣ್ಣೀರಿಡುವ ಭರತ ಇವರುಗಳೆಲ್ಲ ಪ್ರಾಚೀನ ಭಾರತೀಯ ಸಂಸ್ಕೃತಿಯ ಆದರ್ಶ ಪಾತ್ರಗಳಾಗಿ ಮೂಡಿ ನಿಂತರು. ಶ್ರೀರಾಮನ ಪಟ್ಟಾಭಿಷೇಕವು ಸುಗ್ರೀವ, ವಿಭೀಷಣ, ಕಪಿಸೈನ್ಯಗಳ ಉತ್ಸಾಹದಿಂದ ವೈಭವಪೂರ್ಣವಾಗಿ ನೆರವೇರಿತು. ಶ್ರೀರಾಮನು ವಿಭೀಷಣನಿಗೆ ಹಾಗೂ ಸುಗ್ರೀವಾದಿ ಕಪಿಗಳಿಗೆ ಏರ್ಪಡಿಸಿದ ಭೋಜನಕೂಟ ಆತ್ಮೀಯವಾಗಿತ್ತು. ಆ ಭೋಜನಕೂಟದಲ್ಲಿ ಶ್ರೀರಾಮನು ಹನುಮಂತನಿಗೆ ಬೇರೆ ತಟ್ಟೆ ಹಾಕದೇ ತನ್ನ ತಟ್ಟೆಯಲ್ಲೇ ಊಟಕ್ಕೆ ಕೂಡಿಸಿಕೊಂಡಿದ್ದು, ಹನುಮಂತನ ರಾಮ ಭಕ್ತಿಯನ್ನು ಪ್ರದರ್ಶಿಸಿತು. ಹನುಮಂತನು ಮಾಡಿದ ಸಹಾಯವನ್ನು ಶ್ರೀರಾಮನು ಲಕ್ಷ್ಮಣನಿಗೆ ವಿವರಿಸಿದನು. ‘ಹನುಮಂತನು ನಾವು ಮೂರ್ಛೆ ಹೋದಾಗ ಸಂಜೀವಿನಿ ತಂದು ಬದುಕಿಸಿದನು. ಸತ್ತ ಕಪಿಸೈನ್ಯವನ್ನು ಬದುಕಿಸಿದನು. ಸೀತೆಗೆ ಉಂಗುರ ಕೊಟ್ಟು ಬಂದನು. ಲಂಕೆಗೆ ಬೆಂಕಿ ಇಟ್ಟನು. ಅಶೋಕವನವನ್ನು ಕಿತ್ತು ಹಾಕಿದನು ಹಾಗೂ ಅನೇಕ ರಾಕ್ಷಸರನ್ನು ಕೊಂದನು. ಹೀಗೆ ಕೊಟ್ಟ ಕೆಲಸವನ್ನು ಆಲಸ್ಯ ಮಾಡದೇ ಮಾಡುವವನು ಎಂದರೆ ಹನುಮಂತನು ಒಬ್ಬನೇ’ ಎಂದು ರಾಮನು ವರ್ಣಿಸಿದನು. ಸಂತೋಷದಿಂದ ಶ್ರೀರಾಮನು ಹನುಮಂತನಿಗೆ `ಜಗತ್ತಿಗೆ ಗುರುವಾಗು’ ಎಂದು ವರವಿತ್ತನು. ಹೀಗೆ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದ ವ್ಯಾಖ್ಯಾನವನ್ನು ವ್ಯಾಖ್ಯಾನಕಾರರಾದ ಕಲ್ಯಾಣರಾವ್ ದೇಶಪಾಂಡೆಯವರು ವಿಸ್ತರಿಸಿ ಹೇಳಿದರು.
ಗಮಕದ ಕೊನೆಗೆ ದೇವಸ್ಥಾನ ಸಮಿತಿಯ ಕಾರ್ಯದರ್ಶಿಗಳಾದ ಸಂತೋಷ್ ಕುಲಕರ್ಣಿಯವರು ಗಮಕಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಮಾರಂಭದಲ್ಲಿ ಹಿರಿಯ ಗಮಕಿ ಶ್ರೀಮತಿ ಶಾಂತಾ ಕೌತಾಳ್, ಮಂಜುಳಾ ವಿಜಯೇಂದ್ರ ಪಾಟೀಲ್, ಪದ್ಮಾ ಕುಲಕರ್ಣಿ, ಪ್ರಮಿಳಾ ದೇಶಪಾಂಡೆ, ವಿಮಲಾ ಕುಲಕರ್ಣಿ, ಗೀತಾ ಹುದ್ದಾರ್, ಗೋವಿಂದ್ ಡಂಬಳ್, ಸಂಧ್ಯಾ ಸಂಜೀವ್ ಕುಲಕರ್ಣಿ, ದೀಪಾ ರಾಘವೇಂದ್ರ ಜಹಾಗೀರದಾರ್, ಉಲ್ಲಾಸ್ ಪಾಟೀಲ್, ರಮಾ ಪಾಟೀಲ್, ಅನಂತ್ ದೇಶಪಾಂಡೆ, ಆಕಾಶ್ ದೇಶಪಾಂಡೆ, ಪವನ್ ದೇಶಪಾಂಡೆ, ಅಶ್ವಿನಿ, ಪ್ರತೀಕ್ಷಾ ಹಾಗೂ ಚಿಕ್ಕಮಗು ರಘುರಾಮ್ ಇವರುಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಎಲ್ಲ ಭಕ್ತರಿಗೆ ಮಹಾಪ್ರಸಾದ ಏರ್ಪಡಿಸಲಾಗಿತ್ತು. ಪವನ್ ಹಾಗೂ ಅಶ್ವಿನಿ ಇವರುಗಳ ವಿವಾಹದ ದಶವಾರ್ಷಿಕೋತ್ಸವದ ಸಮಾರಂಭ ಆಚರಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ತೊರವೆ ರಾಮಾಯಣ ಕಾವ್ಯದ ಕರ್ತೃ ಶ್ರೀ ಕುಮಾರವಾಲ್ಮೀಕಿ ಅರ್ಥಾತ್ ತೊರವೆಯ ನರಹರಿ ಕವಿಗಳು ಕಾವ್ಯ ರಚಿಸಿದ ನೃಸಿಂಹ ದೇವಾಲಯದಲ್ಲಿಯೇ ಗಮಕ ಕಾರ್ಯಕ್ರಮ ನಡೆದದ್ದು ಅರ್ಥಪೂರ್ಣವೆನಿಸಿತು.
Subscribe to Updates
Get the latest creative news from FooBar about art, design and business.
ತೊರವೆಯ ನೃಸಿಂಹ ದೇವಸ್ಥಾನದಲ್ಲಿ `ಶ್ರೀರಾಮ ಪಟ್ಟಾಭಿಷೇಕಂ’ ಕಾವ್ಯವಾಚನ ವ್ಯಾಖ್ಯಾನ
No Comments2 Mins Read
Next Article ಕವಿ ಕಯ್ಯಾರ ಕಿಞ್ಞಣ್ಣ ರೈ ಜನ್ಮ ದಿನಾಚರಣೆ | ಜೂನ್ 8