ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಸಂಯೋಜನೆಯಲ್ಲಿ ‘ಸಿನ್ಸ್ 1999 ಶ್ವೇತಯಾನ-41’ ಕಾರ್ಯಕ್ರಮದಡಿಯಲ್ಲಿ ದಿಮ್ಸಾಲ್ ಫಿಲ್ಮ್ಸ್ ಹಾಗೂ ಧಮನಿ ಟ್ರಸ್ಟ್ ಸಹಕಾರದೊಂದಿಗೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀ ರಾಮ ಪಟ್ಟಾಭಿಷೇಕ’ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 07-07-2024 ರಂದು ತೆಕ್ಕಟ್ಟೆಯ ಪಟೇಲರ ಬೆಟ್ಟುವಿನ ಶಾಂತಾ ಸುಧಾಕರ ಶೆಟ್ಟಿ ಇವರ ಮನೆಯಂಗಳದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸುಧಾಕರ ಶೆಟ್ಟಿ, ಶಾಂತಾ ಶೆಟ್ಟಿ, ಕುಮಾರಿ ಮಾನ್ವಿಯವರನ್ನು ಅಭಿನಂದಿಸಿ ಮಾತನಾಡಿದ ಬಸ್ರೂರು ಮಹಾಲಿಂಗೇಶ್ವರ ದೇಗುಲದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗಡೆ “ಧಾರ್ಮಿಕ ವಿಧಿ ವಿಧಾನಗಳನ್ನು ಅರಿತ ಸುಧಾಕರ ಶೆಟ್ಟಿಯವರು ಗುರು ಹಿರಿಯರ ಮೇಲೆ ಅಪಾರ ಗೌರವವನ್ನು ಹೊಂದಿದವರು. ಜೀವನದಲ್ಲಿ ಬಹು ಕಷ್ಟದಿಂದ ಏಳ್ಗೆಯನ್ನು ಸಾಧಿಸಿದವರು. ಅಪಾರ ಜನಸ್ನೇಹಿಯಾಗಿ ಸಮಾಜದಲ್ಲಿ ಚಿರಪರಿಚಿತರಾಗಿ ಸಾಂಸ್ಕೃತಿಕ ವಲಯ, ಸಮಾಜ ಸೇವಾ ಸಂಸ್ಥೆ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ನೆರವನ್ನು ನೀಡುತ್ತಾ ಬೆಳೆದವರು. ಕಲಾಪ್ರೇಮಿಯಾಗಿರುವ ಇವರು ಗ್ರಹಪ್ರವೇಶ ಎನ್ನುವ ಧಾರ್ಮಿಕ ಕಾರ್ಯಕ್ರಮದ ಈ ಸಂದರ್ಭದಲ್ಲಿ ತಾಳಮದ್ದಳೆಯಂತಹ ಅಪೂರ್ವ ಕಾರ್ಯಕ್ರಮವನ್ನು ಏರ್ಪಡಿಸಿ, ಪ್ರೇಕ್ಷಕರಿಗೂ ಆಹ್ವಾನವಿತ್ತು ಸತ್ಕರಿಸುವ ಮನೋಭಾವ ಮೆಚ್ಚುವಂತಹದ್ದು.” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ “ಕಲಾಪ್ರಜ್ಞೆಯುಳ್ಳವನು ಸಂಸ್ಕಾರವಂತನಾಗಿರುತ್ತಾನೆ. ಯಶಸ್ವೀ ಸಂಸ್ಥೆಯ ‘ಶ್ವೇತಯಾನ’ ಯೋಜನೆಯಡಿಯಲ್ಲಿ ತೊಡಗಿಸಿಕೊಳ್ಳುವುದು ಸುಯೋಗವೂ ಹೌದು. ತನ್ಮೂಲಕ ಪ್ರಾಯೋಜಕರೆಲ್ಲರೂ ಸಮಾರೋಪದಲ್ಲಿ ಯಕ್ಷಗಾನ ವೇಷ ತೊಟ್ಟು ರಂಗವೇರುವ ಸೌಭಾಗ್ಯ ದೊರಕುವಂತಾಗಲಿ.” ಎಂದು ಹಾರೈಸಿದರು. ರೊ. ಗಣಪತಿ ಟಿ. ಶ್ರೀಯಾನ್, ರೊ. ಕೃಷ್ಣ ಮೊಗವೀರ, ರೊ. ಸುರೇಶ್ ಬೇಳೂರು, ಉಪಸ್ಥಿತರಿದ್ದರು. ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಪ್ರಸಿದ್ಧ ಕಲಾವಿದರಿಂದ ತಾಳಮದ್ದಳೆ ‘ಶ್ರೀ ರಾಮ ಪಟ್ಟಾಭಿಷೇಕ’ ರಂಗದಲ್ಲಿ ಪ್ರಸ್ತುತಿಗೊಂಡಿತು.