ಬೆಂಗಳೂರು: ಬಿ. ಎಂ. ಶ್ರೀ. ಪ್ರತಿಷ್ಠಾನ ನೀಡುವ ‘ಶ್ರೀಸಾಹಿತ್ಯ ಪ್ರಶಸ್ತಿ’ಗೆ ಲೇಖಕಿ ಹಾಗೂ ಚಿಂತಕಿಯಾದ ಪ್ರೊ. ವೀಣಾ ಶಾಂತೇಶ್ವರ ಅವರು ಆಯ್ಕೆಯಾಗಿದ್ದಾರೆ. ಕಮಲಿನ ಶಾ. ಬಾಲುರಾವ್ ಅವರು ಸ್ಥಾಪಿಸಿರುವ ದತ್ತಿಯಿಂದ ಬಿ. ಎಂ. ಶ್ರೀ. ಪ್ರತಿಷ್ಠಾನ ಪ್ರತಿ ವರ್ಷ ಈ ‘ಶ್ರೀ ಸಾಹಿತ್ಯ’ ಪ್ರಶಸ್ತಿ ನೀಡುತ್ತಿದ್ದು, ನಾಡೋಜ ಡಾ. ಹಂಪ.ನಾಗರಾಜಯ್ಯ, ಲೇಖಕಿ ರೂಪ ಹಾಸನ, ಪ್ರೊ. ಸೋಮಣ್ಣ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಸರ್ವಾನುಮತದಿಂದ ಇವರನ್ನು ಆಯ್ಕೆ ಮಾಡಿದೆ.
ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು, ಸ್ಮರಣಿಕೆ ಮತ್ತು ಅಭಿನಂದನಾ ಪತ್ರವನ್ನೊಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು 25 ಜನವರಿ 2025ರ ಶನಿವಾರದಂದು ಬೆಂಗಳೂರಿನ ಬಿ. ಎಂ. ಶ್ರೀ ಪ್ರತಿಷ್ಠಾನದ ಎಂ. ವಿ. ಸೀತಾರಾಮಯ್ಯ ಸಭಾಂಗಣದಲ್ಲಿ ನಡೆಯಲಿದೆ. ಎಂದು ಬಿ. ಎಂ. ಶ್ರೀ. ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ. ಶಾಂತರಾಜು ತಿಳಿಸಿದ್ದಾರೆ.
ಪ್ರೊ. ವೀಣಾ ಶಾಂತೇಶ್ವರ:
ಧಾರವಾಡದಲ್ಲಿ ಹುಟ್ಟಿದ ಪ್ರೊ. ವೀಣಾ ಶಾಂತೇಶ್ವರ ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರು. ಕನ್ನಡ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರೆಯಾದ ಇವರು ಇಂಗ್ಲಿಷ್ ಭಾಷಾ ಶಿಕ್ಷಣದಲ್ಲಿ ಪಿ. ಎಚ್. ಡಿ ಪಡೆದಿದ್ದಾರೆ. ಧಾರವಾಡದ ಕರ್ನಾಟಕ ಕಾಲೇಜಿನ ಪ್ರಾಂಶುಪಾಲರಾಗಿ ಹಾಗೂ ಅದರ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ. ವೀಣಾ ಶಾಂತೇಶ್ವರ ಅವರು ಸಣ್ಣಕತೆ, ಕಾದಂಬರಿಗಳ ಜೊತೆಗೆ ಹಲವಾರು ವಿಮರ್ಶಾತ್ಮಕ ಪ್ರಬಂಧ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿದ್ದ ಇವರು ಅಖಿಲ ಭಾರತ ಲೇಖಕಿಯರ ಸಮ್ಮೇಳನದ ಸಂಯೋಜಕಿಯಾಗಿದ್ದರು.
‘ಮುಳ್ಳುಗಳು’, ‘ಕೊನೆಯ ದಾರಿ’, ‘ಕವಲು’, ‘ಹಸಿವು’, ‘ಬಿಡುಗಡೆ’ ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿರುವ ವೀಣಾ ‘ಗಂಡಸರು’ ಮತ್ತು ‘ಶೋಷಣೆ, ಬಂಡಾಯ ಇತ್ಯಾದಿ’ ಎಂಬ ಎರಡು ಕಾದಂಬರಿಗಳನ್ನು ರಚಿಸಿದ್ದಾರೆ. ಇವರು ಕನ್ನಡದಲ್ಲಲ್ಲದೆ, ಇಂಗ್ಲಿಷಿನಲ್ಲಿಯೂ ಸಾಹಿತ್ಯ ರಚಿಸಿದ್ದು, ‘ರೆಪ್ಯೂಟೇಶನ್’ ,’ ಕ್ರಾಸ್ ರೋಡ್ಸ್’, ‘ಹರ್ ಫ್ರೀಡಮ್’ ಮತ್ತು ‘ದಿ ಶಾಡೊ’ ಎಂಬ ಸಣ್ಣ ಕಥೆಗಳನ್ನು ಮತ್ತು ‘ಮೆನ್’ ಎಂಬ ಕಾದಂಬರಿಯನ್ನೂ ಬರೆದಿದ್ದಾರೆ. ‘ಮಹಿಳೆಯರ ಸಣ್ಣಕಥೆಗಳು’, ‘ಹೊಸ ಹೆಜ್ಜೆ’ ಎಂಬ ಮಹಿಳೆಯರ ಪ್ರಾತಿನಿಧಿಕ ಕವನ ಸಂಕಲನಗಳನ್ನೊಳಗೊಂಡಂತೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ‘ನಡೆದದ್ದೇ ದಾರಿ’ ಎಂಬ ಹೆಸರಿನಲ್ಲಿ ವೀಣಾ ಅವರ ಸಮಗ್ರ ಕಥನ ಸಾಹಿತ್ಯ ಪ್ರಕಟಗೊಂಡಿದೆ. ಇವರ ಹದಿನೈದು ರೇಡಿಯೊ ನಾಟಕಗಳು ಧಾರವಾಡ ಹಾಗೂ ಬೆಂಗಳೂರು ಆಕಾಶವಾಣಿಯಿಂದ ಬಿತ್ತರಗೊಂಡಿವೆ.