ಮಂಗಳೂರು : ಪೇಜಾವರ ಪೊರ್ಕೋಡಿಯ ಶ್ರೀ ಸೋಮನಾಥೇಶ್ವರ ಯಕ್ಷನಿಧಿ (ರಿ) ಸಂಸ್ಥೆಯ ‘ದಶಮಾನೋತ್ಸವ ಸಂಭ್ರಮ’ವು ದಿನಾಂಕ 14-10-2023ರಂದು ಪೊರ್ಕೋಡಿಯ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂಡಬಿದ್ರೆ ಶಾಸಕ ಶೀ ಉಮಾನಾಥ ಕೋಟ್ಯಾನ್ ಇವರು ಮಾತನಾಡುತ್ತಾ “ಯುಕ್ಷರಂಗವು ಇಂದು ಸಮೃದ್ಧವಾಗಿ ಬೆಳೆದು ನಿಲ್ಲಲು ಹವ್ಯಾಸಿ ರಂಗಭೂಮಿಯೂ ಕಾರಣ. ಎಷ್ಟೋ ಹವ್ಯಾಸಿ ಕಲಾವಿದರು ಪ್ರಬುದ್ಧತೆ ಮೆರೆದು ಯಕ್ಷರಂಗ ಭೂಮಿಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ರವಿ ಅಲೆವೂರಾಯರಂತಹಾ ಯಕ್ಷಗುರುಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅನೇಕ ಕಡೆಗಳಲ್ಲಿ ಯಕ್ಷ ತರಗತಿಗಳನ್ನು ನಡೆಸುತ್ತಾ ಮುಂದಿನ ಯಕ್ಷ ಪೀಳಿಗೆಗಳನ್ನು ಈ ರಂಗಕ್ಕೆ ಕೊಡುಗೆಯಾಗಿ ನೀಡಿ ಯಕ್ಷಮಾತೆಯ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಇಂದು ಶ್ರೀ ಸೋಮನಾಥೇಶ್ವರ ಯಕ್ಷ ನಿಧಿ ಸಂಸ್ಥೆ ಅವರಿಗೆ ಗೌರವ ಸನ್ಮಾನವನ್ನು ನೀಡಿದೆ. ಅವರಿಂದ ಇನ್ನೂ ಸ್ಫೂರ್ತಿಯುತವಾಗಿ ಯಕ್ಷ ಸೇವೆ ಜರಗಲಿ” ಎ೦ದು ಹೇಳಿದರು.
ಸನ್ಮಾನಕ್ಕೆ ಉತ್ತರಿಸುತ್ತಾ ಯಕ್ಷಗುರು ಶ್ರೀ ರವಿ ಅಲೆವೂರಾಯರು “ತನ್ನ ಹತ್ತು ವರ್ಷಗಳ ಸಾರ್ಥಕ ಸೇವೆ ಇಂದು ಫಲ ಕೊಟ್ಟಿದೆ. ಒಂದು ಸಂಸ್ಥೆ ತನ್ನ ದಶಮಾನೋತ್ಸವವನ್ನು ಆಚರಿಸುತ್ತಿದೆ ಎಂದರೆ ಅದರ ಹಿಂದೆ ಅನೇಕರ ಪರಿಶ್ರಮವಿದೆ. ಹತ್ತು ಕೈಗಳು ಸೇರಿ ಒಂದು ಉದ್ದೇಶಕ್ಕಾಗಿ ಅರ್ಹಿನಿಶಿ ದುಡಿದ ಪರಿಣಾಮವೇ ಇಂದಿನ ಯಶಸ್ಸಿಗೆ ಕಾರಣವಾಗಿದೆ. ಹಾಗಾಗಿ, ನನ್ನನ್ನು ಸನ್ಮಾನಿಸಿದ್ದಕ್ಕಾಗಿ ಯುಕ್ಷನಿಧಿ ಸಂಸ್ಥೆಗೆ ನಾನು ಆಭಾರಿ ಸಂಸ್ಥೆ ಬೆಳೆಯಲಿ, ಸಂಘಟನೆ ಉಳಿಯಲಿ” ಎಂದರು.
ಕೆಂಜಾರು ಕಾನದ ಶ್ರೀಕೃಷ್ಣಪ್ಪ, ಅರ್ಥದಾರಿ ಶ್ರೀಮಹಾಬಲ ಶೆಟ್ಟಿ, ಶ್ರೀ ನಾರಾಯಣ ಕೋಟ್ಯಾನ್, ರಾಜೇಶ್ ಅಮೀನ್, ದಿನೇಶ್ ಶೆಟ್ಟಿ, ಸಂಸ್ಥೆಯ ಅಧ್ಯಕ್ಷರಾದ ಸುಂದರ ಕೋಟ್ಯಾನ್, ಭಾಸ್ಕರಣ್ಣ, ಕರುಣಾಕರ್, ಶಂಕರ್ ಸಾಲ್ಯಾನ್, ಪ್ರವೀಣ್ ಉಪಸ್ಥಿತರಿದ್ದರು. ಪ್ರಜ್ವಲಿತಾ ವರದಿ ವಾಚಿಸಿ ಹತ್ತು ವರ್ಷ ಸಂಸ್ಥೆ ಹಾದು ಬಂದ ದಾರಿಯನ್ನು ವಿವರಿಸಿದರು. ಕಟೀಲು ಶೇಖರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಸ್ಥೆಯ ಕಲಾವಿದರಿಂದ ‘ಸಂಪೂರ್ಣದೇವಿ ಮಹಾತ್ಮೆ’ ಎಂಬ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.