ಮಂಗಳೂರು : ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಶ್ರೀಮತಿ ಮನೋರಮಾ ಎಂ. ಭಟ್ ಇವರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 23 ಸೆಪ್ಟೆಂಬರ್ 2024ರಂದು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ “ಅರ್ಥಧಾರಿ ಹಾಗೂ ಖ್ಯಾತ ವಕೀಲರಾದ ದಿ. ಮಹಾಬಲ ಭಟ್ಟರ ಪತ್ನಿ ಹಿರಿಯ ಸಾಹಿತಿ ಶ್ರೀಮತಿ ಮನೋರಮಾ ಎಂ. ಭಟ್ ಅವರು ಸರಳ ಹಾಗೂ ಸುಂದರವಾದ ನಿರೂಪಣೆಯೊಂದಿಗೆ ಔಚಿತ್ಯಪೂರ್ಣ ಕಥೆಗಳನ್ನು ರಚಿಸುವ ಮೂಲಕ ಸಾಹಿತ್ಯ ರಂಗವನ್ನು ಪ್ರವೇಶಿಸಿ ಓರ್ವ ಪ್ರಸಿದ್ದ ಮಹಿಳಾ ಸಾಹಿತಿಯಾಗಿ ಪ್ರಸಿದ್ದರಾಗಿದ್ದರು. ಪತಿಯ ಅಗಲಿಕೆಯ ಬಳಿಕ ಏಕಾಂಗಿ ಜೀವನವನ್ನು ನಿರ್ವಹಿಸಿ ಕೊನೆ ದಿನಗಳಲ್ಲಿ ಆಶ್ರಮವಾಸಿಯಾಗಿದ್ದರು. ‘ಹೊಸಹಾದಿ’, ‘ನಿರ್ಧಾರ’ ಇತ್ಯಾದಿ ಅನೇಕ ಉತ್ತಮವಾದ ಕೃತಿಗಳನ್ನು ರಚಿಸಿ ಹೆಸರು ಗಳಿಸಿದ್ದರು. ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವುದನ್ನು ಕಲ್ಕೂರ ಸ್ಮರಿಸಿದರು. ಅಗ್ರಮಾನ್ಯ ಸಾಹಿತಿ ದಿ. ಮುಳಿಯ ತಿಮ್ಮಪ್ಪಯ್ಯ ಶತಮಾನೋತ್ಸವ ಪ್ರಶಸ್ತಿ ಮಂಡಳಿಯ ವರಿಷ್ಠರಾಗಿ ಎರಡು ದಶಕಗಳ ಕಾಲ ಸಾಹಿತ್ಯ ರಂಗದ ಸಾಧಕರನೇಕರಿಗೆ ಪ್ರಶಸ್ತಿ ನೀಡಿ ಗೌರವಿಸಿರುವ ಹೆಮ್ಮೆ ಇವರದಾಗಿದೆ.” ಎಂದರು.
ಶ್ರದ್ಧಾಂಜಲಿ ಸಭೆಯಲ್ಲಿ ಗಣ್ಯರನೇಕರು ಉಪಸ್ಥಿತರಿದ್ದು ದಿವಂಗತರಿಗೆ ನುಡಿ ನಮನ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ ಇದರ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ಪ್ರೊ. ಜಿ. ಕೆ. ಭಟ್ ಸೇರಾಜೆ, ಹಿರಿಯ ಯಕ್ಷಗಾನ ಪ್ರಸಂಗ ಕರ್ತ ಪೊಳಲಿ ನಿತ್ಯಾನಂದ ಕಾರಂತ, ಗಣೇಶ್ ಚೇತನ್ ಮುಳಿಯ, ಕವಿ ಮಹಮದ್ ಬಡ್ಡೂರು, ಹೆಚ್. ಜನಾರ್ದನ ಹಂದೆ, ನಿವೃತ್ತ ಅಧ್ಯಾಪಕಿ ಶ್ರೀಮತಿ ರತ್ನಾವತಿ ಬೈಕಾಡಿ, ಸಾಮಾಜಿಕ ಕಾರ್ಯಕರ್ತೆ ವಿಜಯಲಕ್ಷ್ಮೀ ಬಿ. ಶೆಟ್ಟಿ, ಸುಧಾಕರ ರಾವ್ ಪೇಜಾವರ ಮೊದಲಾದವರು ಉಪಸ್ಥಿತರಿದ್ದರು.