ಮಂಗಳೂರು : ಮೂಲ್ಕಿ ತಾಲೂಕು ಎರಡನೆಯ ಸಾಹಿತ್ಯ ಸಮ್ಮೇಳನ 08 ಫೆಬ್ರವರಿ 2025ರ ಶನಿವಾರದಂದು ಕಿನ್ನಿಗೋಳಿಯ ಐಕಳದ ಪೋಂಪೈ ಕಾಲೇಜಿನಲ್ಲಿ ನಡೆಯಲಿದ್ದು ಈ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಖ್ಯಾತ ಸಾಹಿತಿ ಶ್ರೀಧರ ಡಿ. ಎಸ್. ಆಯ್ಕೆಯಾಗಿದ್ದಾರೆ ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ತಿಳಿಸಿದ್ದಾರೆ.
ಶ್ರೀಧರ ಡಿ. ಎಸ್. : ಯಕ್ಷಗಾನ ಅರ್ಥಧಾರಿ, ಪ್ರಸಂಗ ಕರ್ತೃ, ಯಕ್ಷಗಾನ ವಿಮರ್ಶಕ, ಕಥೆಗಾರ, ಕವಿ, ಕಾದಂಬರಿಕಾರರಾದ ಶ್ರೀಧರ ಡಿ. ಎಸ್. ಮೂರು ದಶಕಗಳ ಕಾಲ ಕಿನ್ನಿಗೋಳಿಯ ಪೋಂಪೈ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕಿನ್ನಿಗೋಳಿಯಲ್ಲಿ ಸಮಾನ ಆಸಕ್ತ ಗೆಳೆಯರೊಂದಿಗೆ ಸೇರಿ ತಾಳಮದ್ದಲೆಗಾಗಿ ‘ಯಕ್ಷಲಹರಿ’ ಎಂಬ ಸಂಸ್ಥೆಯನ್ನು ರೂಪಿಸಿ ನಿರಂತರ ಯಕ್ಷಗಾನ ಸೇವೆ ಗೈಯುತ್ತಿದ್ದಾರೆ. ಶಿವಮೊಗ್ಗದಲ್ಲಿ ನಡೆದ 11ನೇ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಇವರು 40ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಇವರ ಬಿಡಿ ಪದ್ಯಗಳನ್ನೂ ಪರಿಗಣಿಸಿದರೆ ಐದು ಸಾವಿರಕ್ಕೂ ಹೆಚ್ಚಿನ ಯಕ್ಷಗಾನ ಪದ್ಯಗಳನ್ನು ರಚಿಸಿದ್ದಾರೆ. ಮಂಗಳೂರು ಆಕಾಶವಾಣಿಯು ಇವರ ಪ್ರಸಂಗಗಳ ತಾಳಮದ್ದಲೆಗಳನ್ನು ‘ಶ್ರೀಧರ ಯಕ್ಷಕಾವ್ಯ’ ಎಂಬ ಹೆಸರಿನಲ್ಲಿ 29 ವಾರಗಳ ಕಾಲ ಸತತವಾಗಿ ಪ್ರಸಾರ ಮಾಡಿತ್ತು. ಇವರು ‘ಯಕ್ಷಗಾನ ಪ್ರಸಂಗಕೋಶ’ದ ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ‘ಯುಗಾಂತರ’, ‘ಅಸುರಗುರು ಶುಕ್ರಾಚಾರ್ಯ’, ‘ಪರಶುರಾಮ’ ಎಂಬ ಮೂರು ಬೃಹತ್ ಕಾದಂಬರಿಗಳು ಸೇರಿದಂತೆ, ‘ಮಾತಿನಕಲೆ ತಾಳಮದ್ದಲೆ’,’ಬಸ್ಸು ಜಟಕಾ ಬಂಡಿ’, ‘ಜಡಭರತ’, ‘ಗೋ-ವಿಪ್ರ’ ಮೊದಲಾದ ಸಣ್ಣ ಕಾದಂಬರಿಗಳನ್ನು ನಾಡಿನ ಪ್ರಮುಖ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿವೆ. ಇವರ ಅಂಕಣಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ. ಇವರ ಸಾಧನೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಪಾರ್ತಿ ಸುಬ್ಬ’ ಪ್ರಶಸ್ತಿ ನೀಡಿ ಗೌರವಿಸಿದೆ.
Subscribe to Updates
Get the latest creative news from FooBar about art, design and business.
Previous Articleಪ್ರೊ . ಜಿ. ಎಸ್. ಸಿದ್ಧಲಿಂಗಯ್ಯ ಇವರಿಗೆ ‘ಬಸವ ಪ್ರಶಸ್ತಿ’| ಜನವರಿ 11
Related Posts
Comments are closed.