ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಶ್ರೀಮತಿ ಟಿ. ಗಿರಿಜಾ ದತ್ತಿ ಸಾಹಿತ್ಯ ಪ್ರಶಸ್ತಿಯು ಪ್ರಕಟವಾಗಿದ್ದು, 2024ನೇ ಸಾಲಿನ ಪುರಸ್ಕಾರಕ್ಕೆ ಖ್ಯಾತ ಅನುವಾದಕಿ ಮತ್ತು ಭಾಷಾತಜ್ಞರಾದ ಡಾ. ವನಮಾಲಾ ವಿಶ್ವನಾಥ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶೈಲಜ ಟಿ. ಎಸ್. ಇವರು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ದಾವಣಗೆರೆಯವರಾದ ಸೂಕ್ಷ್ಮ ಸಂವೇದನಾಶೀಲ ಲೇಖಕಿ ಟಿ. ಗಿರಿಜಾ ಅವರ ಹೆಸರಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಮತ್ತು ಗುಣಾತ್ಮಕ ಸಾಧನೆ ಮಾಡಿದ ಅರ್ಹ ಮಹಿಳಾ ಸಾಹಿತಿಗಳಿಗೆ ಪ್ರತಿ ವರ್ಷವೂ ಪ್ರಶಸ್ತಿಯನ್ನು ನೀಡುವಂತೆ ದತ್ತಿಯನ್ನು ಸ್ಥಾಪಿಸಿದ್ದಾರೆ.
2024ನೆಯ ಸಾಲಿನ ಶ್ರೀಮತಿ ಟಿ. ಗಿರಿಜಾ ಸಾಹಿತ್ಯ ದತ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಹೆಸರಾಂತ ಅನುವಾದಕರು ಮತ್ತು ಭಾಷಾತಜ್ಞರಾದ ಡಾ. ವನಮಾಲಾ ವಿಶ್ವನಾಥ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಮಂದಿರ, ಬೆಂಗಳೂರು ವಿಶ್ವವಿದ್ಯಾನಿಲಯ ಹಾಗೂ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಗ್ರಾಮೀಣ ಪ್ರತಿಭೆಗಳನ್ನು ರೂಪಿಸುವಲ್ಲಿ, ಪಠ್ಯ ಪುಸ್ತಕಗಳ ರಚನೆಯಲ್ಲಿ ಅವರ ಪಾತ್ರ ಬಹಳ ಪ್ರಮಖವಾದದ್ದು. ಕನ್ನಡ ಮತ್ತು ಇಂಗ್ಲೀಷ್ ನಡುವಿನ ಕೊಂಡಿಯಾಗಿರುವ ಡಾ. ವನಮಾಲಾ ವಿಶ್ವನಾಥ ಅವರು ಹದಿಮೂರನೇ ಶತಮಾನದ ಕವಿ ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ವನ್ನು ಸಮರ್ಥವಾಗಿ ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದು, ಕನ್ನಡದ ಪ್ರಥಮ ಸಾಮಾಜಿಕ ಕಾದಂಬರಿ ಗುಲ್ವಾಡಿ ವೆಂಕಟರಾಯರ ‘ಇಂದಿರಾ ಬಾಯಿ’ ಹಾಗೂ ಕುವೆಂಪು ಅವರ ಮೇರು ಕೃತಿಯಾದ ‘ಮಲೆಗಳಲ್ಲಿ ಮದುಮಗಳು’ ಇವುಗಳನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿರುವುದು ಅವರ ಬಹು ದೊಡ್ಡ ಕೊಡುಗೆಗಳು. ಡಾ. ಯು. ಅರ್. ಅನಂತ ಮೂರ್ತಿ, ವೈದೇಹಿ, ಪೂರ್ಣಚಂದ್ರ ತೇಜಸ್ವಿ, ಪಿ. ಲಂಕೇಶ್, ಸಾರಾ ಅಬೂಬಕರ್ ಮೊದಲಾದ ಕನ್ನಡದ ಪ್ರಮುಖ ಲೇಖಕರ ಕೃತಿಗಳನ್ನು ಡಾ. ವನಮಾಲಾ ವಿಶ್ವನಾಥ ಇಂಗ್ಲೀಷ್ ಭಾಷೆಗೆ ಅನುವಾದಿಸಿದಂತೆ ಸ್ವೀಡಿಶ್ ಸೇರಿದಂತೆ ವಿವಿಧ ಭಾಷೆಗಳ ಜಾಗತಿಕ ಪ್ರಮುಖ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ದತ್ತಿ ದಾನಿಗಳ ಪರವಾಗಿ ಅರುಂಧತಿ ರಮೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ. ಭ. ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷರಾದ ಬಿ. ಎಂ. ಪಟೇಲ್ ಪಾಂಡು ಭಾಗವಹಿಸಿದ್ದರು.
ಪ್ರಶಸ್ತಿ ಪುರಸ್ಕೃತರಾದ ಡಾ. ವನಮಾಲಾ ವಿಶ್ವನಾಥ ಅವರನ್ನು ವಿಶೇಷವಾಗಿ ಅಭಿನಂದಿಸಿರುವ ನಾಡೋಜ ಡಾ. ಮಹೇಶ ಜೋಶಿಯವರು “ಅವರ ಸಾಧನೆಯ ಹಾದಿ ನಿರಂತರವಾಗಿರಲಿ ಕನ್ನಡದ ಇನ್ನಷ್ಟು ಮಹತ್ವದ ಕೃತಿಗಳನ್ನು ಅವರು ಅನುವಾದಿಸಿ ಜಾಗತಿಕ ಮನ್ನಣೆ ದೊರಕಲು ಕಾರಣರಾಗಲಿ.” ಎಂದು ಆಶಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಟಿ.ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿಗೆ ಡಾ. ವನಮಾಲಾ ವಿಶ್ವನಾಥ ಆಯ್ಕೆ
No Comments2 Mins Read
Previous Articleಸಂಗೀತ ಸಾಮ್ರಾಟ್ ವಿಜಯಭಾಸ್ಕರ್ ಜನ್ಮ ಶತಮಾನೋತ್ಸವ ಸಮಾರಂಭ | ಅಕ್ಟೋಬರ್ 20
Related Posts
Comments are closed.