ಮಂಗಳೂರು : ಮರಕಡದ ‘ಶುಭವರ್ಣ ಯಕ್ಷ ಸಂಪದ’ ಸಂಸ್ಥೆಯ ವಾರ್ಷಿಕೋತ್ಸವವು ಮರಕಡ ಮೈದಾನದಲ್ಲಿ ದಿನಾಂಕ 18-11-2023ರಂದು ಮಂಗಳೂರಿನ ಮಂಗಳಾದೇವಿಯ ರಾಮಕೃಷ್ಣ ಮಿಷನ್ ಬಾಲಕಾಶ್ರಮದ ಮೇಲ್ವಿಚಾರಕರಾದ ಸ್ವಾಮಿ ರಘು ರಾಮಾನಂದ ಇವರ ಆಶೀರ್ವಚನದೊಂದಿಗೆ ನೆರವೇರಿತು.
ಇದೇ ಸಂದರ್ಭದಲ್ಲಿ ಮರಕಡ ಕುಮೇರುಮನೆ ಶ್ರೀಮತಿ ಲಿಂಗಮ್ಮ ತನಿಯಪ್ಪ ಕೋಟ್ಯಾನ್ ಸ್ಮರಣಾರ್ಥ ರೂ.10,000/- ಮೊತ್ತದ ‘ಶುಭವರ್ಣ ಪ್ರಶಸ್ತಿ-2022’ನ್ನು ಹಿರಿಯ ನಿವೃತ್ತ ಕಲಾವಿದ ಕಾವೂರು ವಿಠಲ ಶೆಟ್ಟಿಗಾರ್ ಅವರಿಗೆ, ಹಾಗೂ ರೂ.10,000/- ಮೊತ್ತ ‘ಶುಭವರ್ಣ ಸಂಮಾನ -2023’ನ್ನು ಶ್ರೀ ಅಶೋಕ ಆಚಾರ್ಯ ವೇಣೂರು ಇವರಿಗೆ ಮತ್ತು ಮರಕಡ ಕಾರ್ತಿಕ್ ಕಮಾರ್ ಸ್ಮರಣಾರ್ಥ 5,000/- ಮೊತ್ತದ ‘ಶುಭವರ್ಣ ಪ್ರತಿಭಾ ಪುರಸ್ಕಾರ -2023’ನ್ನು ಶ್ರೀ ದೇವಿಪ್ರಸಾದ್ ಪೆರಾಜೆ ಅವರಿಗೆ ಕೊಡಮಾಡಲಾಯಿತು.
ಶ್ರೀ ಕಟೀಲು ಆರು ಮೇಳಗಳ ಸಂಚಾಲಕರಾದ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟಿ, ಹಿರಿಯ ಯಕ್ಷ ಗುರುಗಳಾದ ಶ್ರೀ ಶಿವರಾಮ ಪಣಂಬೂರು, ಅಂತರ್ ರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರು ಮತ್ತು ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷರಾದ ಶ್ರೀ ಯಜ್ಞೇಶ್ವರ ಬರ್ಕೆ, ಕರ್ನಿರೆ ಸುವರ್ಣ ಪ್ರತಿಷ್ಠಾನದ ಶ್ರೀ ಪ್ರಭಾಕರ ಸುವರ್ಣ ದುಬೈ, ರಾಜೇಶ್ ಶೆಟ್ಟಿ ಮರಕಡ ಗುತ್ತು, ಜೀವನ್ ಕುಮಾರ್ ಮರಕಡ, ಮರಕಡ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಕುಮಾರ್ ಮರಕಡ, ಮರಕಡ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಕೊರಂಟಾಡಿ, ಶ್ರೀ ಕಟೀಲು ಮೇಳದ ಕಲಾವಿದರಾದ ಡಾ.ಶ್ರುತಕೀರ್ತೀರಾಜ ಜೈನ್ ಮತ್ತು ಸಮಿತಿಯ ಅಧ್ಯಕ್ಷರಾದ ದಿನಕರ್ ಸನಿಲ್ ಕಾವೂರು ಉಪಸ್ಥಿತರಿದ್ದರು.
ಸಂಸ್ಥೆಯ ಸ್ಥಾಪಕರಾದ ಲಕ್ಷ್ಮಣ ಕುಮಾರ್ ಮರಕಡ ಸ್ವಾಗತಿಸಿ ಅಭಿನಂದಿಸಿದರು. ಶುಭಲಕ್ಷ್ಮೀ ವಿಜಯ ಕುಮಾರ್, ಪ್ರೊ. ಮಹೇಶ್ ಪಿ.ಜಿ. ಮತ್ತು ಡಾ. ಸಪ್ನಾ ಶೆಟ್ಟಿ ಸಂಮಾನ ಪತ್ರ ವಾಚಿಸಿ, ಪ್ರೊ. ದೀಕ್ಷಾ ರಾವ್ ಕಾರ್ಯಕ್ರಮ ನಿರೂಪಿಸಿದರು. ವಾರ್ಷಿಕೋತ್ಸವದ ಭಾಗವಾಗಿ ಸಂಸ್ಥೆಯ ವಿದ್ಯಾರ್ಥಿಗಳಿಂದ ‘ಯಜ್ಞಶೇಷೋ ವೈ ರುದ್ರಃ’ ಎಂಬ ಶೀರ್ಷಿಕೆಯಲ್ಲಿ ಎರಡು ಪ್ರಸಂಗಗಳು ಹಾಗೂ ಜಿಲ್ಲೆಯ ಪ್ರಬುದ್ಧ ಮಹಿಳಾ ಕಲಾವಿದೆಯರಿಂದ ‘ಧೀರ ವೀರೋದ್ಧಾರ’ ಎಂಬ ಪ್ರಸಂಗ ಪ್ರದರ್ಶನಗೊಂಡವು.